ಚಾಮರಾಜನಗರ: ಬೀದಿಗೆ ಬಿದ್ದ ಕುಟುಂಬದ ಅಳಲು ಕೇಳೋರಿಲ್ಲ!
ಚಾಮರಾಜನಗರ, ಅಕ್ಟೋಬರ್ 14: ಹೈವೇ ಮಾಡಿದ್ದರಿಂದ ತಮಗಿದ್ದ ಸೂರು ಕಳೆದುಕೊಂಡು ಬೀದಿಗೆ ಬಂದಿರುವ ಕುಟುಂಬವೊಂದು ತಮಗೊಂದು ಸೂರು ನೀಡಿ ಎಂದು ಕಂಡ ಕಂಡವರ ಬಳಿ ಅಳಲು ತೋಡಿಕೊಳ್ಳುತ್ತಿರುವ ಮನಕಲಕುವ ಘಟನೆ ಚಾಮರಾಜನಗರ ಜಿಲ್ಲೆಯ ಹೊಸ ಅಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ಅಣಗಳ್ಳಿ ಗ್ರಾಮದ ಮರಿ ಸಿದ್ಧಯ್ಯ ಎಂಬುವವರ ಕುಟುಂಬ ಮನೆ ಕಳೆದುಕೊಂಡು ಬೀದಿಗೆ ಬರುವಂತಾಗಿದ್ದು, ಮುಂದೇನು ಎಂಬುದು ತೋಚದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಅಕ್ಕ-ಪಕ್ಕದವರ ಬಳಿ ಹೇಳಿಕೊಳ್ಳುತ್ತಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಪಟ್ಟಣ ವ್ಯಾಪ್ತಿಯಲ್ಲಿ ಮುಡಿಗುಂಡದಿಂದ ಹೊಸ ಅಣಗಳ್ಳಿ ಗ್ರಾಮದವರೆಗೆ ಸುಮಾರು 6 ಕಿ.ಮೀ ಹೈವೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಬದಿಯಲ್ಲಿದ್ದ ಹೊಸ ಅಣಗಳ್ಳಿ ಗ್ರಾಮದ ಮರಿ ಸಿದ್ಧಯ್ಯ ಅವರ ಮನೆಯನ್ನು ತೆರವುಗೊಳಿಸಲೇಬೇಕಾಗಿದೆ.
ಮರ ಸಿದ್ದಯ್ಯ ಹಾಗೂ ಮಹದೇವಮ್ಮ ವೃದ್ಧ ದಂಪತಿ ನಾಲ್ಕು ಮಕ್ಕಳ ಜೊತೆ ಸುಮಾರು 60 ವರ್ಷಗಳಿಂದ ಇಲ್ಲಿ ವಾಸಮಾಡುತ್ತಿದ್ದು ತನ್ನ ಸ್ವಂತ ಜಾಗದಲ್ಲಿ ನಗರಸಭೆಯ ಅನುಮತಿ ಪಡೆದುಕೊಂಡು, ಇತ್ತೀಚಿಗಷ್ಟೇ ಹೆಂಚಿನ ಮನೆ ಕಟ್ಟಿಕೊಂಡು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ 3 ತಿಂಗಳ ಹಿಂದೆ ಹೆದ್ದಾರಿ ಅಧಿಕಾರಿಗಳು ಬಂದು ಹೈವೇ ರಸ್ತೆ ಮಾಡಲು ಅಳತೆ ಮಾಡುವಾಗ ಗಾಬರಿಯಾದ ಮರಿಸಿದ್ದಯ್ಯ ಅಧಿಕಾರಿಗಳನ್ನು ಕೇಳಿದ್ದಾರೆ.
ಹೈವೇ ಬರುವುದರಿಂದ ಮನೆ ಹೋಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ದಿಕ್ಕು ತೋಚದ ಮನೆ ಮಾಲೀಕ ಮರಿ ಸಿದ್ದಯ್ಯ ಹೈಕೋರ್ಟ್ ಮೆಟ್ಟಿಲೇರಿ ಮನೆಗೆ ಸಂಬಂಧಿಸಿದ ದಾಖಲೆ ನೀಡಿ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ.
ಈ ನಡುವೆ ಅಧಿಕಾರಿಗಳು ಏಕಾಏಕಿ ಸುಮಾರು 30ಕ್ಕೂ ಹೆಚ್ಚು ಪೊಲೀಸರನ್ನು ಕರೆದುಕೊಂಡು ಬಂದು ನ್ಯಾಯಾಲಯದ ಆದೇಶದ ಪ್ರತಿ ತೋರಿಸಿದರೂ ಅದಕ್ಕೆ ಬೆಲೆ ನೀಡದೆ ಮನೆಯಲಿದ್ದವರನ್ನು ಹೊರಗೆ ಹಾಕಲಾಗಿದೆ! ರಾತ್ರಿಯೆಲ್ಲ ಬೀದಿಯಲ್ಲೇ ಮಲಗಿದ್ದ ಕುಟುಂಬಕ್ಕೆ ದಿಚ್ಚು ತೋಚದಂತಾಗಿದೆ.
ಇದರಿಂದ ಬೇಸತ್ತ ಕುಟುಂಬ ಇದೀಗ ನಮಗೆ ಬೇರೆ ದಾರಿ ಕಾಣುತ್ತಿಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಷ್ಟೆ ಬಾಕಿಯಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಬೀದಿಪಾಲಾದ ಕುಟುಂಬಕ್ಕೆ ಸೂರು ಒದಗಿಸಬೇಕಿದೆ.












Click it and Unblock the Notifications