ಮಲೆ ಮಹದೇಶ್ವರ ವನ್ಯಧಾಮದಲ್ಲಿ ಅಭಿವೃದ್ಧಿ ಚಟುವಟಿಕೆಗೆ ತಡೆ
ಚಾಮರಾಜನಗರ, ಆಗಸ್ಟ್ 03 : ವಿಭಿನ್ನ ಸಸ್ಯ ಸಂಪತ್ತು ಹಾಗೂ ವೈವಿಧ್ಯಮಯ ಜೀವ ಸಂಕುಲಗಳಿಗೆ ಆಶ್ರಯ ತಾಣವಾಗಿರುವ ಮಲೆಮಹದೇಶ್ವರ ವನ್ಯಧಾಮದ 143.12 ಚದರ ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಘೋಷಿಸಿದೆ. ಇದರಿಂದಾಗಿ ಇನ್ನು ಮುಂದೆ ರಾತ್ರಿ ಸಂಚಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ.
ಈ ವನ್ಯಧಾಮದ ವ್ಯಾಪ್ತಿಗೆ 8 ಕಂದಾಯ ಗ್ರಾಮಗಳು ಹಾಗೂ 18 ಅರಣ್ಯ ಗ್ರಾಮಗಳು ಬರುತ್ತವೆ. ಜತೆಗೆ ಈ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಅಧಿಕ ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿದ್ದು ಅವುಗಳಿಗೆಲ್ಲ ಕಡಿವಾಣ ಬೀಳುವಂತಾಗಿದೆ.
ಬೆಂಗಳೂರು ಆಯ್ತು: ಈಗ ಬಂಡೀಪುರ ಅರಣ್ಯದಲ್ಲೂ ಫ್ಲೈ ಓವರ್ ನಿರ್ಮಾಣ
ಇನ್ನುಮುಂದೆ ಪರಿಸರ ಸೂಕ್ಷ್ಮ ವಲಯದಲ್ಲಿ ಮಳೆ ನೀರು ಸಂಗ್ರಹ, ಸಾವಯವ ಕೃಷಿ, ಹಸಿರು ತಂತ್ರಜ್ಞಾನ ಅಳವಡಿಕೆ, ಗುಡಿ ಕೈಗಾರಿಕೆ, ಕಾಡು ಕೃಷಿ, ಪರಿಸರ ಸ್ನೇಹಿ ಸಾರಿಗೆ, ಬರಡಾದ ಭೂಮಿಯಲ್ಲಿ ಅರಣ್ಯವನ್ನು ಪುನರ್ ಸ್ಥಾಪಿಸುವುದು ಹಾಗೂ ಪರಿಸರ ಜಾಗೃತಿ ಸೇರಿದಂತೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸಚಿವಾಲಯ ಆದೇಶಿಸಿದೆ.
ಮಲೆಮಹದೇಶ್ವರ ವನ್ಯಧಾಮದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ
ಇಷ್ಟೇ ಅಲ್ಲದೆ ಈ ಪರಿಸರ ಸೂಕ್ಷ್ಮ ವಲಯವನ್ನು ರಕ್ಷಣೆ ಮಾಡುವಲ್ಲಿ ಈ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸಲು 11 ಜನ ಸದಸ್ಯರ ಮೇಲುಸ್ತುವಾರಿ ಸಮಿತಿ ರಚಿಸಲು ಸೂಚಿಸಲಾಗಿದೆ. ಮೂರು ವರ್ಷಗಳ ಅಧಿಕಾರಾವಧಿ ಹೊಂದಿರುವ ಈ ಸಮಿತಿಯು ಮೈಸೂರು ವಿಭಾಗೀಯ ಆಯುಕ್ತರ ನೇತೃತ್ವದಲ್ಲಿ ನಡೆಯಲಿದ್ದು ಮೂವರು ಸ್ಥಳೀಯ ಶಾಸಕರು ಇದರಲ್ಲಿ ಇರಲಿದ್ದಾರೆ.
ಮಲೆ ಮಹದೇಶ್ವರ ವನ್ಯಧಾಮಕ್ಕೆ ಹೊಂದಿಕೊಂಡಿರುವ ಕಾವೇರಿ ವನ್ಯಧಾಮವನ್ನು 2017ರಲ್ಲಿ ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿದನ್ನು ಸ್ಮರಿಸಬಹುದಾಗಿದೆ. ಇನ್ಮುಂದೆ ಈ ಪ್ರದೇಶಗಳಲ್ಲಿ ವಾಣಿಜ್ಯ ಗಣಿಗಾರಿಕೆ, ಕಲ್ಲು ಕ್ವಾರಿ ಹಾಗೂ ಕ್ರಶಿಂಗ್ ಘಟಕಗಳನ್ನು ಸ್ಥಾಪಿಸುವಂತಿಲ್ಲ.
ಅಷ್ಟೇ ಅಲ್ಲದೆ ನೀರು, ಗಾಳಿ, ಮಣ್ಣು ಹಾಗೂ ಶಬ್ದಮಾಲಿನ್ಯವಂಟು ಮಾಡುವ ಉದ್ಯಮಗಳ ಸ್ಥಾಪನೆ, ದೊಡ್ಡ ಜಲವಿದ್ಯುತ್ ಘಟಕಗಳು, ಹಾನಿಕಾರಕ ವಸ್ತುಗಳ ಬಳಕೆ ಅಥವಾ ಉತ್ಪಾದನೆ ಮಾಡುವಂತಿಲ್ಲ.
ಸಂಸ್ಕರಿಸಿದ ನೀರನ್ನು ನೈಸರ್ಗಿಕ ನೀರಿನ ಮೂಲಗಳಿಗೆ ಹರಿಯಲು ಬಿಡುವುದು, ಕಂಪನಿಗಳ ದೊಡ್ಡಮಟ್ಟದ ವಾಣಿಜ್ಯ ಉದ್ದೇಶದ ಕೋಳಿ ಹಾಗೂ ದನಕರುಗಳ ಫಾರ್ಮ್‍ಗಳು, ಮರದ ಮಿಲ್‍ಗಳು, ಇಟ್ಟಿಗೆ ಗೂಡುಗಳು, ಉರುವಲು ಕಟ್ಟಿಗೆಯ ವಾಣಿಜ್ಯ ಉದ್ದೇಶದ ಬಳಕೆ ಮಾಡುವಂತಿಲ್ಲ.
ಇದಲ್ಲದೆ ಪರಿಸರ ಸ್ನೇಹಿ ಪ್ರವಾಸೋದ್ಯಮ ಉದ್ದೇಶಕ್ಕೆ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಡೇರೆಗಳು, ಮಾಲಿನ್ಯರಹಿತ ಸಣ್ಣ ಪ್ರಮಾಣದ ಉದ್ಯಮಗಳು, ಮರಗಳ ತೆರವು, ವಿದ್ಯುತ್, ದೂರವಾಣಿ ಹಾಗೂ ಇತರೆ ಸಂಪರ್ಕ ಮಾಧ್ಯಮಗಳ ಕಂಬಳ ಅಳವಡಿಕೆ, ರಸ್ತೆ ವಿಸ್ತರಣೆ ಹಾಗೂ ಹೊಸ ರಸ್ತೆಗಳ ನಿರ್ಮಾಣ, ರಾತ್ರಿ ರಸ್ತೆ ಸಂಚಾರ, ಸಂಸ್ಕರಿಸಿದ ನೀರನ್ನು ನೈಸರ್ಗಿಕ ಭೂಪ್ರದೇಶಗಳಿಗೆ ಬಿಡುವುದು, ಪಾಲಿಥೀನ್ ಬ್ಯಾಗ್ ಬಳಕೆ, ವಾಣಿಜ್ಯ ಫಲಕಗಳ ಅಳವಡಿಕೆಯನ್ನು ನಿರ್ಬಂಧಿಸಲಾಗಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !