Mysuru Dasara 2023: ಬಂಡೀಪುರದಿಂದ ಮೈಸೂರಿಗೆ ಹೊರಟ ರೋಹಿತ್, ಹಿರಣ್ಯ
ಚಾಮರಾಜನಗರ, ಆಗಸ್ಟ್, 31: ವಿಶ್ವವಿಖ್ಯಾತ ಮೈಸೂರು ದಸರಾಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಿಂದ ಇಂದು ಆನೆಗಳು ತೆರಳಿವೆ.
ಗಂಡಾನೆ ರೋಹಿತ್ ಹಾಗೂ ಹೆಣ್ಣಾನೆಯಾದ ಹಿರಣ್ಯ ಮದ್ದೂರು ಚೆಕ್ ಪೋಸ್ಟ್‌ನಿಂದ ಸಾಂಪ್ರಾದಾಯಿಕ ಪೂಜೆ ಅರ್ಪಿಸಿಕೊಂಡು, ಕಬ್ಬು-ಬೆಲ್ಲ ಸೇವಿಸಿ ತೆರಳಿವೆ. ದಸರಾ ಜಂಬೂ ಸವಾರಿಯಲ್ಲಿ ಇವೆರಡು ಆನೆಗಳು ಪಾಲ್ಗೊಳ್ಳಲ್ಲಿದ್ದು, ಶಾಸಕ ಗಣೇಶ್ ಪ್ರಸಾದ್, ಬಂಡೀಪುರ ಸಿಎಫ್ಒ ಪ್ರಭಾಕರನ್ ಇವುಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟಿದ್ದಾರೆ.

ಇನ್ನು ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಸೆಪ್ಟೆಂಬರ್ 1ಕ್ಕೆ ಮೊದಲ ಹಂತದ ಗಜಪಯಣ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇತ್ತೀಚೆಗಷ್ಟೇ ತಿಳಿಸಿದ್ದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಆನೆಗಳನ್ನು ಕರೆತರಲಾಗುತ್ತದೆ. ಇದಕ್ಕೆ ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದಿದ್ದರು. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಅದ್ಧೂರಿ ದಸರಾ ಮಾಡಲು ಸೂಚನೆ ನೀಡಿದ್ದಾರೆ. ಈ ಬಾರಿ 14 ಆನೆಗಳನ್ನು ಕರೆತರಲಾಗುತ್ತಿದೆ. ಅನುದಾನದ ಬಗ್ಗೆ ಇನ್ನೂ ಏನೂ ನಿರ್ಧಾರ ಆಗಿಲ್ಲ. ದಸರಾ ಉದ್ಘಾಟಕರಾಗಿ ಯಾರನ್ನು ಕರೆಯಬೇಕೆಂಬ ನಿರ್ಧಾರ ಅಂತಿಮವಾಗಿಲ್ಲ ಎಂದಿದ್ದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಅಭಿಮನ್ಯು ನೇತೃತ್ವದ ಮೊದಲ ತಂಡದ ಗಜಪಡೆ ಸೆಪ್ಟೆಂಬರ್ 1ಕ್ಕೆ ಮೈಸೂರಿನತ್ತ ಹೆಜ್ಜೆ ಹಾಕಲಿದೆ. ಈಗಾಗಲೇ ಹೈ ಪರ್ವ ಕಮಿಟಿ ಸಭೆ ನಡೆದಿದೆ. ಜಿಲ್ಲಾಡಳಿತವು ಸಹ ದಸರಾ ಆಚರಣೆಗೆ ಸಿದ್ಧತೆ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರ ನೇತೃತ್ವದಲ್ಲಿ ಶೀಘ್ರದಲ್ಲೇ ಮೈಸೂರಿನಲ್ಲಿ ಸಭೆ ನಡೆಯಲಿದೆ ಎಂದಿದ್ದರು.
ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ
ಅರಣ್ಯಾಧಿಕಾರಿಗಳು ನಾಗರಹೊಳೆ, ಬಂಡೀಪುರದ ವಿವಿಧ ಕ್ಯಾಂಪ್‌ಗಳಿಗೆ ತೆರಳಿ ಆನೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೈಸೂರು ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಮೈಸೂರು ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದಲ್ಲಿ ಬಳ್ಳೆ, ರಾಂಪುರ ಶಿಬಿರದಲ್ಲಿ ಇರುವ ದಸರಾ ಆನೆಗಳ ಪರಿಶೀಲನೆ ನಡೆಸಲಾಗಿದೆ ಎಂದಿದ್ದರು.
ಇದೇ ವೇಳೆ ಮೇಯರ್ ಶಿವಕುಮಾರ್ ಮಾತನಾಡಿ, ಕಳೆದ ಬಾರಿ ದಸರಾ ಮಹೋತ್ಸವ ಆಚರಣೆಗೆ ಪಾಲಿಕೆಯಿಂದ 16 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಈ ಬಾರಿ ಸಿಎಂ ನಿರ್ದೇಶನದಂತೆ ಹೆಚ್ಚುವರಿಯಾಗಿ 10 ಕೋಟಿ ರೂಪಾಯಿ ನೀಡುವಂತೆ ಕೋರಿಕೆ ಸಲ್ಲಿಸಲಾಗಿದ್ದು, ಒಟ್ಟಾರೆಯಾಗಿ ಈ ಬಾರಿಯ ದಸರಾಗೆ 26 ಕೋಟಿ ರೂಪಾಯಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದಿದ್ದರು.
ವಲಯ ಕಚೇರಿ 1ರಿಂದ 9ರವರೆಗೆ ಕೈಗೊಳ್ಳಲಿರುವ ಕಾಮಗಾರಿಗೆ 22 ಕೋಟಿ ರೂಪಾಯಿ, ವಿದ್ಯುತ್ ಕಾಮಗಾರಿಗೆ 2.50 ಕೋಟಿ ರೂಪಾಯಿ, ತೋಟಗಾರಿಕೆ ಕಾಮಗಾರಿಗೆ 40 ಲಕ್ಷ ರೂಪಾಯಿ, ಆರೋಗ್ಯ ಶಾಖೆಯ ಕಾಮಗಾರಿಗೆ 80 ಲಕ್ಷ ರೂಪಾಯಿ, ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಕಾಮಗಾರಿಗಳಿಗೆ 30 ಲಕ್ಷ ರೂಪಾಯಿ ಸೇರಿ ಒಟ್ಟು 26 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದರು.
ಗುಂಡಿಮುಕ್ತ ರಸ್ತೆ ನಿರ್ಮಾಣ, ಸೌಂದರೀಕರಣ, ಬೀದಿ ದೀಪಗಳ ನಿರ್ವಹಣೆ, ಹಲವು ರಸ್ತೆಗಳ ಅಭಿವೃದ್ಧಿ ಮಾಡಬೇಕಿದೆ. ವಾರ್ಡ್‌ವಾರು ಆಯೋಜಿಸುವ ಮನೆ ಮನೆ ದಸರಾಗೆ ಅನುದಾನ ನೀಡಬೇಕಿದೆ. ದಸರಾ ಜಂಬೂ ಸವಾರಿ ಮೆರವಣಿಗೆ ರಾಜ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದರು.












Click it and Unblock the Notifications