ಹನೂರು: ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ತಾಯಿ ಹಾಗೂ ಇಬ್ಬರು ಮಕ್ಕಳು
ಚಾಮರಾಜನಗರ, ಏಪ್ರಿಲ್, 05: ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಶುಕ್ರವಾರ (ಏಪ್ರಿಲ್ 05) ಬೆಳಗ್ಗೆ ನಡೆದಿದೆ.
ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದೂರು ಗ್ರಾಮದ ಮೀನಾ (33), ಪವಿತ್ರ (13), ಕೀರ್ತಿ (11) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಘಟನೆ ವಿವರ: ಪುದೂರು ನಿವಾಸಿಗಳಾದ ಮೀನಾ ಪುತ್ರಿಯರಾದ ಪವಿತ್ರ, ಕೀರ್ತಿ, ಮಗ ಸುರೇಂದ್ರ ಶುಕ್ರವಾರ ಬೆಳಗ್ಗೆ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದಾರೆ. ಬಟ್ಟೆ ತೊಳೆದ ಬಳಿಕ ಬಟ್ಟೆಯನ್ನು ಹಿಂಡಲು ಹೋಗಿ ತಾಯಿ ಮೀನಾ ಆಕಸ್ಮಿಕವಾಗಿ ಕಾಲು ಜಾರಿಬಿದಿದ್ದಾರೆ. ತಕ್ಷಣ ಇಬ್ಬರೂ ಹೆಣ್ಣು ಮಕ್ಕಳಾದ ಕೀರ್ತಿ ಹಾಗೂ ಪವಿತ್ರ ತಾಯಿಯನ್ನು ರಕ್ಷಣೆ ಮಾಡಲು ಹೋಗಿ ಇವರು ಸಹ ನೀರಿನಲ್ಲಿ ಮುಳುಗಿದ್ದಾರೆ.
ಸ್ಥಳದಲ್ಲಿಯೇ ಇದ್ದ ಮಗ ಸುರೇಂದ್ರ ತಂದೆಯವರಿಗೆ ವಿಷಯ ತಿಳಿಸಿ ಕರೆದುಕೊಂಡು ಬರುವಷ್ಟರಲ್ಲಿ ಮೂವರು ನೀರು ಪಾಲಾಗಿದ್ದರು. ನಂತರ ಗ್ರಾಮಸ್ಥರ ಸಹಾಯದಿಂದ ಮೂವರನ್ನು ನೀರಿನಿಂದ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಟೋ ಸಾರಿಗೆ ಬಸ್ ನಡುವೆ ಡಿಕ್ಕಿ: ಪ್ಯಾಸೆಂಜರ್ ಆಟೋ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಬಳಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಇಡ್ ಪೋಸ್ಟ್‌ನ ನಿವಾಸಿಗಳಾದ ನೂರ್ ಉನ್ನಿಸ್ (68), ಸೈಯದ್ ಮನ್ಸೂರ್ ಹುಸೇನ್ (36) ಸ್ಥಳದಲ್ಲಿ ಮೃತ ಪಟ್ಟವರಾಗಿದ್ದು, ಇನ್ನು ಸಂಸದ್ ಬೇಗಂ (30) ರಹಮದ್ ಉನ್ನಿಸಾ (40) ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುರುವಾರ (ಏಪ್ರಿಲ್ 04) ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಾಲ್ವರು ಸತ್ಯಗಾಲ ಅಂಡ್ ಪೋಸ್ಟ್‌ನಿಂದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯ ನಿಮಿತ್ತ ಆಟೋದಲ್ಲಿ ತೆರಳುವಾಗ ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ(KSRTC) ಬಸ್ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಆಟೋ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಈ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.












Click it and Unblock the Notifications