ಒಂದಡಿ ನೀರಿನಲ್ಲಿ ತೆಪ್ಪ ಸವಾರಿ... ವೈರಲ್ ವಿಡಿಯೋ ಬಗ್ಗೆ ಶಾಸಕ ಮಹೇಶ್ ಹೇಳಿದ್ದೇನು?
ಚಾಮರಾಜನಗರ, ಸೆಪ್ಟೆಂಬರ್ 10: ಅರ್ಧ ಅಡಿ ನೀರಲ್ಲಿ ಶಾಸಕ ಎನ್.ಮಹೇಶ್ ತೆಪ್ಪ ಸವಾರಿ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಾಸಕರು ಪ್ರತಿಕ್ರಿಯೆ ಕೊಟ್ಟಿದ್ದು, ತಾನು ನಾಟಕ ಮಾಡಿಲ್ಲ, ವೀಡಿಯೋ ವೈರಲ್ ಮಾಡುವವರು ಪೂರ್ತಿ ವಿಡಿಯೋ ಹಾಕದೇ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ದಿನ ತನಗೆ ಜ್ವರವಿದ್ದ ಹಿನ್ನೆಲೆ ಅನಿವಾರ್ಯವಾಗಿ ದೋಣಿ ಏರಬೇಕಾಯಿತು. ನಾನು ಪಬ್ಲಿಸಿಟಿಗಾಗಿ ಈ ರೀತಿ ನಾಟಕಗಳನ್ನು ಮಾಡಿ ಅಭ್ಯಾಸವಿಲ್ಲ, ಜೊತೆಗೆ ಅರ್ಧ ಅಡಿ ನೀರಲ್ಲಿ ತಾವು ತೆಪ್ಪ ಏರಿಲ್ಲ ಮೊಣಕಾಲುದ್ದ ನೀರಲ್ಲಿ ತೆಪ್ಪ ಏರಿದ್ದೆ ಎಂದು ಸಮಜಾಯಿಷಿ ಕೊಟ್ಟರು.
ನನಗೆ ಜ್ವರ ಇತ್ತು, ಅದಕ್ಕೆ ತೆಪ್ಪದಲ್ಲಿ ಹೋಗಿದ್ದೆ. ಅರ್ಧ ಅಡಿ ನೀರಲ್ಲಿ ತೆಪ್ಪ ಹೋಗಲು ಸಾಧ್ಯನಾ? ಜ್ವರವಿದ್ದ ಕಾರಣ ನೀರಲ್ಲಿ ಹೋಗಬಾರದು ಎಂದು ತೆಪ್ಪ ಏರಬೇಕಾಯಿತು. ಇಲ್ಲದಿದ್ದರೆ ನಡೆದುಕೊಂಡೇ ಹೋಗುತ್ತಿದ್ದೆ. ಅರ್ಧ ಅಡಿ ಒಂದು ಅಡಿ ನೀರಿನಲ್ಲಿ ತೆಪ್ಪ ನಡೆಸಲಾಗುವುದಿಲ್ಲ. ನೀರಲ್ಲಿ ಹೋದರೆ ಜ್ವರ ಹೆಚ್ಚಾಗುತ್ತೆ ಎಂದು ಹೋಗಲಿಲ್ಲ. ಮೂರಡಿಗಿಂತ ನೀರು ಹೆಚ್ಚಿತ್ತು. ತೊಡೆ ಮಟ್ಟ ನೀರಿತ್ತು. ಸುಮ್ಮನೆ ನಾಟಕ ಆಡುವುದಕ್ಕೆ ನನಗೆ ಗೊತ್ತಿಲ್ಲ. ವಿಡಿಯೋವನ್ನು ವೈರಲ್ ಮಾಡಿದ್ದಾರಲ್ಲ ಅವರು ನಾಟಕ ಆಡುತ್ತಿದ್ದಾರೆ ಎಂದರು.

ಶಾಸಕರು ಪ್ರವಾಹದ ಪರಿಶೀಲನೆ ಮಾಡಿದ ಸಂಪೂರ್ಣ ವಿಡಿಯೋವನ್ನು ಬಿಟ್ಟು, ನೀರಿನ ಹರಿವು ಕಡಿಮೆಯಾಗಿ ತೆಪ್ಪದಿಂದ ಇಳಿಯುವ ದೃಶ್ಯವನ್ನು ಕೆಲವರು ಸೆರೆ ಹಿಡಿದು ಟ್ರೋಲ್ ಮಾಡುತ್ತಿದ್ದಾರೆ ಎಂದು ಶಾಸಕ ಮಹೇಶ್ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಹಿಂದೆ ಸುರ್ವಣಾವತಿ ನದಿ ಪ್ರವಾಹಕ್ಕೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ಜಲಾವೃತಗೊಂಡಿತ್ತು. ಈ ವೇಳೆ ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಹೀಗಾಗಿ ಪ್ರವಾಹ ವೀಕ್ಷಣೆಗೆಂದು ತೆರಳಿದ ಎನ್.ಮಹೇಶ್ ತೆಪ್ಪದಲ್ಲಿ ಕುಳಿತುಕೊಂಡು ಹೋಗಿದ್ದರು.
ನಗೆಪಾಟಲಿಗೆ ಈಡಾಗಿದ್ದ ರೇಣುಕಾಚಾರ್ಯ:
2019ರಲ್ಲೂ ರಾಜ್ಯದಲ್ಲಿ ಭಾರಿ ಮಳೆಯಾಗಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಒಂದಡಿಗಿಂತ ಕಡಿಮೆ ನೀರಿದ್ದ ಜಾಗದಲ್ಲಿ ತೆಪ್ಪಕ್ಕೆ ಹುಟ್ಟುಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಕ್ಕಾಬಟ್ಟೆ ಟ್ರೋಲ್ ಆಗಿದ್ದರು.












Click it and Unblock the Notifications