ಮಳೆ ಹಾನಿಗೆ ಪರಿಹಾರ ಕುರಿತ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಸೋಮಣ್ಣ ಕೆಂಡಾಮಂಡಲ
ಚಾಮರಾಜನಗರ, ಸೆಪ್ಟೆಂಬರ್ 10: ಜಿಲ್ಲೆಯಲ್ಲಿ ಮಳೆ ಹಾನಿಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳ ಕುರಿತು ಸಚಿವ ಸೋಮಣ್ಣ ಅಧಿಕಾರಿಗಳ ಸಭೆ ನಡೆಸಿ ಕೆಲವರಿಗೆ ಮೆಚ್ಚುಗೆ, ಹಲವರ ವಿರುದ್ಧ ಅಸಮಧಾನ ಹೊರ ಹಾಕಿದರು.
ಮಳೆ ನಡುವೆ ಜನರ ಅಳಲು, ಕಾಳಜಿ ಕೇಂದ್ರ ತೆರೆದು ಸೇವೆ, ಸರ್ವೇ ನಡೆಸಿ ಶೀಘ್ರ ಪರಿಹಾರ ಕ್ರಮಗಳನ್ನು ತೆಗೆದುಕೊಂಡ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರಾಮನ ಲೆಕ್ಕ ಮಾತ್ರ ಬರೀರಿ-ಕೃಷ್ಣನ ಲೆಕ್ಕಕ್ಕೆ ಕೈ ಹಾಕಬೇಡಿ ಎಂದು ತಾಕೀತು ಮಾಡಿದರು.
ಹಳೇ ಜಿಲ್ಲಾಸ್ಪತ್ರೆಯನ್ನು ಈ ಹಿಂದಿನಂತೆ 24*7 ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದರೂ ಕಾನೂನು ತೊಡಕು ನೆಪ ಹೇಳಿದ ಸಿಮ್ಸ್ ಡೀನ್ ಡಾ.ಸಂಜೀವ್ ಕುಮಾರ್ ವಿರುದ್ದ ಗರಂ ಆದ ಸೋಮಣ್ಣ " 6 ತಿಂಗಳು ರಜೆ ತೆಗೆದುಕೊಂಡು ಮನೆಗೆ ಹೋಗು, ನಾನು ಮಾಡಿಸುತ್ತೇನೆ" ಎಲ್ಲವನ್ನೂ ತಿಳಿದೇ ನಿನಗೆ ಹೇಳಿರುವುದು, ನಿನ್ನ ಸಮಜಾಯಿಷಿ ಬೇಡ ಎಂದು ಬಿಸಿ ಮುಟ್ಟಿಸಿದರು. ಸಾವಿರಾರು ಕೋಟಿ ರೂ. ಖರ್ಚು ಮಾಡಿದರೂ ಜನರ ಉಪಯೋಗಕ್ಕೆ ಆಸ್ಪತ್ರೆ ಬಾರದಿದ್ದರೇ ಏನು ಪ್ರಯೋಜನ, ಡಾಕ್ಟರ್ ಗಳು ಇರುವುದು ನಿದ್ರೆ ಮಾಡುವುದಕ್ಕಲ್ಲ, ಪ್ರಪೋಸ್ ಮೊದಲು ಕೊಡಿ, ಅದಕ್ಕೂ ಮುನ್ನ ಆಸ್ಪತ್ರೆ ಕಾರ್ಯನಿರ್ವಹಿಸುವಂತೆ ಮಾಡಿ ಎಂದರು. ಡೀನ್ ಮತ್ತೆ ಸಮಜಾಯಿಷಿ ಕೊಡಲು ಮುಂದಾದಾಗ ಗದರಿ ಕೂರಿಸಿದರು.

ಇನ್ನು, ಡಿಡಿಪಿಐ ಮಂಜುನಾಥ್ ಮಳೆಹಾನಿ ಮಾಹಿತಿ ಕೊಟ್ಟು 7 ಕೋಟಿ ರೂ. ಅನುದಾನ ನೀಡಿದರೇ ಎಲ್ಲಾ ಶಾಲಾ ಕಟ್ಟಡಗಳ ದುರಸ್ಥಿ ಆಗಲಿದೆ ಎಂಬ ಮಾತಿಗೆ ಕೊಡುತ್ತೇವೆ ಆದರೆ ಎಲ್ಲಾ ಶಾಲಾ ಸಮಸ್ಯೆಗಳು ಪರಿಹಾರವಾಗುವುದೇ ಎಂದು ಕೇಳಿದರು. ನಿರುತ್ತರರಾದ ಡಿಡಿಪಿಐಗೆ ತರಾಟೆಗೆ ತೆಗೆದುಕೊಂಡ ಸಚಿವ ಅಂಗನವಾಡಿ ಕಟ್ಟಡಗಳು, ಶಾಲಾ ಕಟ್ಟಡಗಳ ಸರ್ವೇಯೇ ತಪ್ಪು, ಶಾಸಕರು ಹೇಳುತ್ತಿರುವುದು ಒಂದು, ನೀವು ಹೇಳುತ್ತಿರುವುದು ಒಂದು ಎಂದು ತರಾಟೆಗೆ ತೆಗೆದುಕೊಂಡರು.
ನೀರಾವರಿ ಇಲಾಖೆ ಅಧಿಕಾರಿಗಳು, ಚಾಮರಾಜನಗರ ನಗರಸಭೆ ಆಯುಕ್ತ, ಪಿಡಿ ಅವರನ್ನೂ ಜಾಡಿಸಿ ಶೀಘ್ರದಲ್ಲೇ ಮತ್ತೊಂದು ಸಭೆ ಕರೆದು ಕೂಲಂಕುಷವಾಗಿ ಚರ್ಚಿಸುತ್ತೇನೆ, ಮೈಸೂರಿಗೆ ಹೋಗೋದು ಬಿಟ್ಟು ಕೆಲಸ ಮಾಡಿ ಎಂದರು.
ಸಚಿವ ಸೋಮಣ್ಣಗೆ ತರಾಟೆ
ಮಳೆಹಾನಿ ಬಳಿಕ ನಿಗದಿಯಾಗಿದ್ದ ಸಂಘ-ಸಂಸ್ಥೆಗಳೊಟ್ಟಿಗೆ ಜಿಲ್ಲಾ ದಸರಾ ಸಭೆಯಲ್ಲಿ ಹೋರಾಟಗಾರರು ಸಚಿವರ ವಿರುದ್ಧ ಗರಂ ಆಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ದಸರಾ ಸಭೆ ಕರೆದು ಎರಡು ಗಂಟೆ ಕಾಯಿಸಿ, ಮುಂದೆ ಸಭೆ ಮಾಡೋಣ ಎಂದು ಮಲೈಮಹದೇಶ್ವರ ಬೆಟ್ಟಕ್ಕೆ ಸಚಿವರು ತೆರಳಲು ಮೇಲೇಳುತ್ತಿದ್ದಂತೆ ಕುಪಿತಗೊಂಡ ಹೋರಾಟಗಾರರು, ಸಭೆಯಲ್ಲಿ ಅನಿಸಿಕೆ ಹೇಳಲು ಇಚ್ಚಿಸುವವರನ್ನು ಸುಮ್ಮನೆ ಕೂರಿ ಎನ್ನುತ್ತೀದ್ದೀರಿ ಎಂದು ಕೆರಳಿ ಕಿಡಿಕಾರಿದರು.

ಎಲ್ಲರನ್ನು ಏಕೆ ಏಕ ವಚನದಲ್ಲಿ ಮಾತನಾಡಿಸುತ್ತೀರಿ ಎಂದು ಪ್ರಶ್ನಿಸಿದ ನಾಯಕ ಸಮುದಾಯಯ ಮುಖಂಡ ಚಾ.ಸಿ.ಸೋಮನಾಯಕ, ಕಾಟಚಾರಕ್ಕೆ ಏಕೆ ಸಭೆ ಕರೆಯುತ್ತಿರಿ, ಸಭೆ ಮಾಡುತ್ತೀರಿ, ಒಂದೂವರೆ ತಾಸು ನಮ್ಮನ್ನು ಕಾಯಿಸಿ, ಈಗ ಎರಡು ನಿಮಿಷಕ್ಕೆ ಸಭೆ ಮುಗಿಸುತ್ತೀದ್ದೀರಿ..? ಎಂದು ತರಾಟೆಗೆ ತೆಗೆದುಕೊಂಡರು.
ಕೊನೆಗೆ ಸಭೆ ಕರೆದಿರುವುದೇ ನನಗೆ ಗೊತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯ ಮೇಲೆ ಹಾಕಿ ಜಾರಿಕೊಂಡು ಕ್ಷಮೆ ಕೇಳಿದ ಸಚಿವರು ಪರಿಸ್ಥಿತಿ ತಿಳಿಗೊಳಿಸಿದರು. 4-5 ದಿನದಲ್ಲಿ ಬೆಂಗಳೂರಲ್ಲಿ ದಸರಾ ಸಭೆ ಕರೆಯಲಿದ್ದು ಚೆನ್ನಾಗಿ ದಸರಾ ಮಾಡೋಣ, ಯಾರು ಮನನೊಂದು ಕೊಳ್ಳಬೇಡಿ, ಬಸ್ ಮಾಡಿ ನಿಮ್ಮನ್ನು ಕರೆಸಿಕೊಳ್ಳುತ್ತೇನೆ ಎಂದು ಗಲಾಟೆ ಪ್ರಕರಣ ಮುಕ್ತಾಯಗೊಳಿಸಿದರು.












Click it and Unblock the Notifications