ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂಲ ಸೌಕರ್ಯಗಳ ಕಾಮಗಾರಿ ಪರಿಶೀಲಿಸಿದ ಸಚಿವ ವೆಂಕಟೇಶ್
ಚಾಮರಾಜನಗರ, ಜುಲೈ. 24: ಪಶುಸಂಗೋಪನೆ ಮತ್ತು ರೇಷ್ಮೆಗಾರಿಕೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸಾಲೂರು ಮಠದ ಶ್ರೀಗಳ ಜೊತೆಗೆ ತೆರಳಿ ಮಲೆ ಮಹದೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೂತನ ಬಸ್‌ನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಬೆಟ್ಟದನಲ್ಲಿರುವ ನಾಗಮಲೆ ಭವನ ಆವರಣದಿಂದ ಬಸ್‌ಗೆ ಚಾಲನೆ ನೀಡಲಾಯಿತು. ಜೊತೆಗೆ ನಾಗಮಲೆ ಭವನದಲ್ಲಿ ಉಸ್ತುವಾರಿ ಸಚಿವ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಶಾಸಕರು, ಗುತ್ತಿಗೆದಾರರು ಮತ್ತು ವಿವಿಧ ಇಲಾಖಾ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಶ್ರೀಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿ-ಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಯಾವ ಕಾರಣಕ್ಕೆ ಸ್ಥಗಿತವಾಗಿದೆ..? ಇರುವ ತೊಡಕುಗಳು ಏನು ಎಂಬುದರ ಬಗ್ಗೆ ಗಮನಹರಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.
ಮಲೆ ಮಹದೇಶ್ವರ ಕ್ಷೇತ್ರಕ್ಕೆ ಮುಂದಿನ ತಿಂಗಳಲ್ಲಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಿ ಮತ್ತೆ ಸಭೆ ನಡೆಸಲಿದ್ದಾರೆ ಎಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
"ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಬರುವಂತಹ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮೊದಲ ಸಭೆ ನಡೆಸಿದ್ದು ಮುಂದಿನ ದಿನಗಳಲ್ಲಿ ವಿವರವಾಗಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಒಡ್ಡು ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ 108 ಅಡಿ ಎತ್ತರದ ಮಹದೇಶ್ವರರ ಪ್ರತಿಮೆಯನ್ನು ಈ ಹಿಂದೆ ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ, ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದು ಗುತ್ತಿಗೆದಾರರು ಮುಂದಿನ 3 ತಿಂಗಳುಗಳಲ್ಲಿ ಅ ಅಂತಸ್ತಿನಲ್ಲಿ ಮ್ಯೂಸಿಯಂ ಕಾಮಗಾರಿಯನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿದ್ದಾರೆ" ಎಂದಿದ್ದಾರೆ.

ಮೂಲ ಸೌಕರ್ಯಗಳ ಬಗ್ಗೆ ಬಾಕಿ ಉಳಿದಿರುವ ಕೆಲಸಗಳನ್ನೂ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಹಿರಿಯ ನಾಗರೀಕರಿಗೆ ನೇರ ದರ್ಶನದ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಅಕ್ರಮ ಮದ್ಯ ಸಾಗಾಟ ಮತ್ತು ಪೂರೈಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಶೀಘ್ರ ಆಸ್ಪತ್ರೆ ಕಾಮಗಾರಿ ಆರಂಭ
ಮಲೆಮಹದೇಶ್ವರ ಶ್ರೀ ಕ್ಷೇತ್ರದಲ್ಲಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾಧಿಕಾರದ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ ತೆರೆಯಲು ಕ್ರಮವಹಿಸಲಾಗಿದ್ದು ಸ್ಥಳವನ್ನೂ ಗುರುತಿಸಲಾಗಿದೆ. ಆದರೆ ಇಲ್ಲಿ ಕೆಲವೊಂದು ಮರಗಳಿರುವುದರಿಂದ ಮರಗಳ ಕಟಾವಿಗೆ ಅರಣ್ಯ ಇಲಾಖೆ ಅನುಮತಿಗಾಗಿ ಕಾಯಲಾಗುತ್ತಿದೆ. ಶೀಘ್ರವಾಗಿ ಪ್ರಕ್ರಿಯೆಯನ್ನು ಮುಗಿಸಿ ಆಸ್ಪತೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ತಿಂಗಳು ಆಗಮಿಸಲಿದ್ದಾರೆ. ಇಲ್ಲಿನ ಸಭೆಗಳ ಬಗ್ಗೆ ಪ್ರಾಧಿಕಾರದ ಸದಸ್ಯರ ಜೊತೆ ಚರ್ಚೆ ನಡೆಸಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications