ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೊರಗಿದ ಮಲೆ ಮಹದೇಶ್ವರರು ಮಂಡಿಯೂರಿ ತಪೋಗೈದ ಪುಣ್ಯ ಸ್ಥಳ, ಮಾಹಿತಿ ವಿವರ ಇಲ್ಲಿದೆ
ಚಾಮರಾಜನಗರ, ಜುಲೈ, 08: ಅದು ಮಹದೇಶ್ವರರು ಮಂಡಿಯೂರಿ ತಪೋಗೈದ ಪುಣ್ಯ ಸ್ಥಳ. ಮರಡಿಗುಡ್ಡ ಎಂದೇ ಖ್ಯಾತಿಯಾಗಿ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿ ತಾಣವಾಗಿದ್ದ ಈ ಸಸ್ಯಕಾಶಿ ಈಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿ ಪಾಳು ಬಿದ್ದಿದೆ. ಹಾಗಾದರೆ ಅದ್ಭುತ ತಾಣ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿರುವ ಮರಡಿಗುಡ್ಡಕ್ಕೆ ಕೋಟ್ಯಂತರ ಜನರ ಆರಾಧ್ಯದೈವ ಮಲೆಮಹದೇಶ್ವರರು ಮಂಡಿಯೂರಿ ತಪೋಗೈದಿದ್ದರು ಪುರಾಣವಿದೆ. ಬೋಳುಗುಡ್ಡ ಆಗಿದ್ದ ಇಲ್ಲಿ ಹಿಂದಿನ ಅರಣ್ಯಾಧಿಕಾರಿಗಳು ಔಷಧಿ ಸಸ್ಯಗಳು ಸೇರಿದಂತೆ ನೂರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ವಾಯು ವಿಹಾರಿಗಳಿಗೆ ಅನುಕೂಲ ಆಗುವಂತೆ ವಾಕಿಂಗ್ ಪಾಥ್ ಅನ್ನು ಕೂಡ ನಿರ್ಮಿಸಿ ವ್ಯಾಯಾಮದ ಸಲಕರಣೆಗಳನ್ನು ಅಳವಡಿಸಿದ್ದರು.

ಅಷ್ಟೇ ಅಲ್ಲದೆ, ಮಲೆಮಹದೇಶ್ವರ ವನ್ಯಧಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಏಡುಕುಂಡಲ ಅವರು ವಿಶೇಷ ಕಾಳಜಿ ವಹಿಸಿ ಸಾಹಸ ಕ್ರೀಡೆಗಾಗಿ ಜಿಪ್ ಲೈನ್ ಅಳವಡಿಸಿ ಪ್ರವಾಸಿ ಕೇಂದ್ರವಾಗಿ ಮಾರ್ಪಡಿಸಿದ್ದರು. ಆದರೆ ಇತ್ತೀಚಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷದಿಂದ ಗಿಡಮರಗಳು ಒಣಗಿಹೋಗಿವೆ. ಜಿಪ್‌ಲೈನ್ ಸ್ಥಗಿತಗೊಂಡಿದೆ, ವ್ಯಾಯಾಮ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ.
ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ಮರಡಿಗುಡ್ಡ ಬೆಳಗಿನ ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತೆ ಇತ್ತು. ಪ್ರಶಾಂತ ವಾತವರಣ ಬಯಸಿ ಬರುವ ಜನರು ನೆಮ್ಮದಿಯಿಂದ ಕಾಲ ಕಳೆಯುವ ತಾಣವಾಗಿತ್ತು. ಆದರೆ ಇದೆಲ್ಲಾ ಈಗ ಮರೀಚಿಕೆಯಾಗಿದೆ.
ಕೊಳ್ಳೇಗಾಲದಲ್ಲಿ ಉದ್ಯಾನವನಗಳ ಕೊರತೆಯನ್ನು ಅಲ್ಪಮಟ್ಟಿಗಾದರೂ ನೀಗಿಸಿದ್ದ ಮರಡಿಗುಡ್ಡಕ್ಕೆ ಮತ್ತೆ ಕಾಯಕಲ್ಪ ನೀಡುವ ಅಗತ್ಯವಿದೆ. ನಿರ್ವಹಣೆ ಮತ್ತು ಮೂಲಸೌಕರ್ಯ ಕೊರತೆ ನೀಗಿಸುವತ್ತಾ ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ ಎಂಬುದು ಇಲ್ಲಿನ ಪರಿಸರ ಪ್ರೇಮಿಗಳು, ಸ್ಥಳೀಯರ ಆಗ್ರಹವಾಗಿದೆ.
ಬಿಆರ್‌ಟಿ ಕಾಡಿನಲ್ಲಿ ಕಾಡಾನೆ ಕಳೆಬರ ಪತ್ತೆ: ಅರಣ್ಯ ಪ್ರದೇಶದಲ್ಲಿ ಕಾಡಾನೆ ಕಳೇಬರ ಪತ್ತೆಯಾಗಿರುವ ಘಟನೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ನಡೆದಿದೆ.
ಹನೂರು ಮಾವತ್ತೂರು ಅರಣ್ಯ ಪ್ರದೇಶದಲ್ಲಿ 35ರಿಂದ 40 ವರ್ಷ ಅಂದಾಜಿನ ಹೆಣ್ಣಾನೆ ಕಳೇಬರ ಪತ್ತೆ ಆಗಿದ್ದು, ಸ್ವಾಭಾವಿಕವಾಗಿ ಸಾವನ್ನಪ್ಪಿರುವ ಬಗ್ಗೆ ಮೇಲ್ನೋಟಕ್ಕೆ ದೃಢವಾಗಿದೆ.
ಆನೆ ಮೃತಪಟ್ಟಿರುವ ಮಾಹಿತಿ ತಿಳಿದು ಬಿಆರ್‌ಟಿ ಡಿಸಿಎಫ್ ದೀಪ್ ಜೆ ಕಂಟ್ರಾಕ್ಟರ್, ಎಸಿಎಫ್ ನಂದಗೋಪಾಲ್ ಸ್ಥಳಕ್ಕೆ ಭೇಟಿ ಕೊಟ್ಟು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಣ್ಣೆತ್ತಿನ ಅಮಾವಾಸ್ಯೆ ಸಡಗರ: ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಣ್ಣೇತ್ತಿನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಉತ್ಸವಾದಿಗಳು ಸಂಪ್ರದಾಯದಂತೆ ಜರುಗಿದವು.
ಮಣ್ಣೇತ್ತಿನ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಮುಂಜಾನೆಯಿಂದಲೇ ಸ್ವಾಮಿಗೆ ಎಳನೀರಿನ ಅಭಿಷೇಕ ಹಾಲು ಪಂಚಾಮೃತ ಅಭಿಷೇಕ ನೆರವೇರಿತು. ನೈವೇದ್ಯ ಅರ್ಪಿಸಿದ ಬಳಿಕ ಮಹಾಮಂಗಳಾರತಿ ಮಾಡಲಾಯಿತು.
ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಸಾವಿರಾರು ಜನರು ಭೇಟಿ ನೀಡಿ ಮಹದೇಶ್ವರ ದರ್ಶನ ಪಡೆದರು. ಚಿನ್ನದ ರಥೋತ್ಸವ ಬೆಳ್ಳಿ ರಥೋತ್ಸವ ಬಸವ ವಾಹನ ಹುಲಿ ವಾಹನ ರುದ್ರಾಕ್ಷಿ ಮಂಟಪದ ಸೇವೆಗಳನ್ನು ಮಾಡುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು.
ಅಮಾವಾಸ್ಯೆ ಪೂಜೆ ಹಿನ್ನೆಲೆ ಬೆಂಗಳೂರು, ರಾಮನಗರ, ಕನಕಪುರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ನಂಜನಗೂಡು ತುಮಕೂರು ಕೋಲಾರ ಸೇರಿದಂತೆ ತಮಿಳುನಾಡು ರಾಜ್ಯದ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.












Click it and Unblock the Notifications