ಮೂರು ದಿನಗಳ ಕಾಲ ಭಕ್ತರಿಗಿಲ್ಲ ಮಲೆ ಮಹದೇವನ ದರ್ಶನ
ಚಾಮರಾಜನಗರ, ಜೂನ್ 18: ಚಾಮರಾಜನಗರ ಜಿಲ್ಲೆಯಲ್ಲಿನ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಜೂನ್ 19ರಿಂದ 21ರವರೆಗೆ ಮೂರು ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನದ ಅವಕಾಶವಿರುವುದಿಲ್ಲ ಎಂದು ಎಂದು ಜಿಲ್ಲಾಡಳಿತ ಘೋಷಿಸಿದೆ.
ಕೊರೊನಾ ಲಾಕ್ ಡೌನ್ ಬಳಿಕ ಜೂನ್ 8ರಿಂದ ದೇವಸ್ಥಾನಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಹಾಗೆಯೇ ರಾಜ್ಯದ ಬಹುತೇಕ ದೇವಸ್ಥಾನಗಳನ್ನೂ ತೆರೆಯಲಾಯಿತು. ಲಾಕ್ ಡೌನ್ ನಿಯಮ ಪಾಲನೆ ಅನ್ವಯ ಭಕ್ತಾದಿಗಳಿಗೆ ಪ್ರವೇಶ ಒದಗಿಸಲಾಗಿತ್ತು. ಮಲೆ ಮಹದೇಶ್ವರ ದೇವಸ್ಥಾನವನ್ನೂ ತೆರೆಯಲಾಗಿತ್ತು. ಇದೀಗ ಜೂನ್ 19ರಿಂದ 21ರವರೆಗೆ ಮಲೆ ಮಾದಪ್ಪನ ದರ್ಶನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಭಕ್ತಾದಿಗಳಿಗೆ ದರ್ಶನವನ್ನು ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂಆರ್ ರವಿ ಆದೇಶ ಹೊರಡಸಿದ್ದಾರೆ.
ಸೋಮವಾರದಿಂದ ಮಲೆ ಮಹದೇಶ್ವರನ ದೇಗುಲ ಓಪನ್
ಜೂನ್ 19ರಂದು ಎಣ್ಣೆ ಮಜ್ಜನ, ಜೂನ್ 20,21ರಂದು ಅಮವಾಸ್ಯೆ ಪೂಜೆ ಇದ್ದು, ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಹೆಚ್ಚು ಜನರು ಆಗಮಿಸುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ದರ್ಶನಕ್ಕೆ ತಡೆ ಒಡ್ಡಲು ಜಿಲ್ಲಾಡಳಿತ ನಿರ್ಧರಿಸಿ ಘೋಷಣೆ ಹೊರಡಿಸಿದೆ.