ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೈ ಟಿಕೆಟ್‌ಗೆ ಬಲು ಬೇಡಿಕೆ, ಮಲ್ಲಿಕಾರ್ಜುನ ಖರ್ಗೆ ಅಚ್ಚರಿ ಅಭ್ಯರ್ಥಿ ಗುಲ್ಲು..!
ಚಾಮರಾಜನಗರ, ಡಿಸೆಂಬರ್, 27: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕೈ ಟಿಕೆಟ್‌ಗೆ ಭಾರಿ ಪೈಪೋಟಿ ನಡೆದಿದ್ದು, ಆಕಾಂಕ್ಷಿಗಳ ಸಂಖ್ಯೆ 8 ಮಂದಿಗೇರಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಿದ್ದು, ಚಾಮರಾಜನಗರದ 4 ಹಾಗೂ ಮೈಸೂರಿನ 4 ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರವೂ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದೆ.

8 ಕ್ಷೇತ್ರದಲ್ಲಿ 7 ಕೈವಶ
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಟಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ ಹಾಗೂ ಸಿಎಂ ಸಿದ್ದರಾಮಯ್ಯ ಕ್ಷೇತ್ರವಾದ ವರುಣ ಕಾಂಗ್ರೆಸ್ ಕೋಟೆಯಾಗಿದ್ದು, ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ ಇದ್ದಾರೆ.
8 ಕ್ಷೇತ್ರದಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿರುವ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ ಜೋರಾಗಿಯೇ ಇದ್ದು, ಈ ಬಾರಿ ಮತ್ತೇ ಕ್ಷೇತ್ರ ಕೈ ವಶವಾಗುವ ಉತ್ಸಾಹದಲ್ಲಿದೆ ಕಾಂಗ್ರೆಸ್ ಪಡೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರವು ಒಳಪಡಲಿದ್ದು, ಕಾಂಗ್ರೆಸ್ ಗೆಲ್ಲಿಸಬೇಕಾದ ಪ್ರತಿಷ್ಟೆಯೂ ಇರಲಿದೆ.
ಅಭ್ಯರ್ಥಿ ಆಗ್ತಾರಾ ಕಾಂಗ್ರೆಸ್ ಅಧಿನಾಯಕ?
ಸಚಿವ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್, ಮಾಜಿ ಸಚಿವ ಮಳವಳ್ಳಿ ಸೋಮಶೇಖರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕಾಂಗ್ರೆಸ್ ಯುವ ಮುಖಂಡ ದೇಶವಳ್ಳಿ ನಟರಾಜು, ಕಾಂಗ್ರೆಸ್ ಕಾರ್ಮಿಕ ವಿಭಾಗದ ಮುಖಂಡ ಕಿರಣ್ ಸೇರಿದಂತೆ 8 ಮಂದಿ ಆಕಾಂಕ್ಷಿಗಳಿದ್ದಾರೆ.
ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಟಿಕೆಟ್ ಪಡೆಯಲು ಸಾಕಷ್ಟು ಪೈಪೋಟಿ ನಡೆಸುತ್ತಿದ್ದು, ಉಳಿದವರು ಈಗಾಗಲೇ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಆಗುತ್ತಾರೆ ಎಂಬ ಗುಲ್ಲು ಎದ್ದಿದೆ. ಕೆಲ ಆಕಾಂಕ್ಷಿಗಳೇ ಖರ್ಗೆ ಅವರನ್ನು ಭೇಟಿ ಮಾಡಿ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ದಲಿತ ನಾಯಕ ಆಗಿರುವ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡಿದರೇ, ಪಕ್ಷಕ್ಕೂ ಬೂಸ್ಟ್ ಸಿಕ್ಕಂತಾಗಲಿದೆ ಎಂದು ಒತ್ತಾಯ ಮಾಡುತ್ತಿದ್ದು, ಚಾಮರಾಜನಗರ ಲೋಕಸಭೆ ಚುನಾವಣೆಗೆ ಖರ್ಗೆ ಅಚ್ಚರಿ ಅಭ್ಯರ್ಥಿ ಆಗುತ್ತಾರೆ ಎನ್ನಲಾಗುತ್ತಿದೆ.












Click it and Unblock the Notifications