ಚಾಮರಾಜನಗರ: ಬಂಡೀಪುರದ ಪ್ರಾಣಿ-ಪಕ್ಷಿಗಳಿಗೂ ತಟ್ಟಲಿದೆ ನೀರಿನ ಸಂಕಷ್ಟ

ಚಾಮರಾಜನಗರ, ಸೆಪ್ಟೆಂಬರ್‌ 25: ಈ ಬಾರಿ ವರುಣ ಕೈಕೊಟ್ಟ ಕಾರಣ ಸಮರ್ಪಕವಾಗಿ ಮಳೆ ಸುರಿಯದ ಕಾರಣದಿಂದ ಒಂದೆಡೆ ಕಾವೇರಿ ಕೊಳ್ಳದ ಹೇಮಾವತಿ, ಹಾರಂಗಿ, ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳು ಸೇರಿದಂತೆ ಕೆರೆಕಟ್ಟೆಗಳು ಭರ್ತಿಯಾಗಲಿಲ್ಲ. ಜತೆಗೆ ತಮಿಳುನಾಡಿಗೆ ಜಲಾಶಯಗಳಿಂದ ನೀರು ಹರಿಸುತ್ತಿರುವುದರಿಂದ ಕುಡಿಯುವ ನೀರಿಗೆ ಬರ ಬರುವ ಆತಂಕ ಒಂದೆಡೆಯಾದರೆ, ಇನ್ನೊಂದೆಡೆ ಬಂಡೀಪುರ ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೂ ನೀರಿನ ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.

ಬಂಡೀಪುರದಲ್ಲಿ ವನ್ಯ ಪ್ರಾಣಿಗಳು ನೀರಿನ ತೊಂದರೆಯನ್ನು ಹಲವು ಬಾರಿ ಎದುರಿಸಿವೆ. 2015 ರಿಂದ 17ರವರೆಗೆ ತೀವ್ರ ಬರಗಾಲ ಎದುರಾಗಿತ್ತು. ತೀವ್ರ ಬಿಸಿಲಿಗೆ ಕಾಡುಗಳು ಒಣಗಿ ಹೋಗಿದ್ದವು. ಜತೆಗೆ ಕೆರೆಗಳಲ್ಲಿ ನೀರು ಆರಿದ ಪರಿಣಾಮ ವನ್ಯಪ್ರಾಣಿಗಳು ನೀರು ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗಿದ್ದವು. ಅದೇ ವೇಳೆಯಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿ ಅರಣ್ಯ ನಾಶವಾಗಿತ್ತು. ಇದೆಲ್ಲವೂ ಇವತ್ತಿಗೂ ನೆನಪಾಗಿಯೇ ಉಳಿದಿದೆ. ಅವತ್ತು ಬಂಡೀಪುರ ಅರಣ್ಯದಲ್ಲಿದ್ದ ಪ್ರಾಣಿಗಳಿಗೆ ನೀರು ಒದಗಿಸುವುದು ಅರಣ್ಯ ಅಧಿಕಾರಿಗಳಿಗೆ ಸವಾಲ್ ಆಗಿತ್ತು.

Less Rainfall In Karnataka: Drought Effect On Bandipur

ಸಾಮಾನ್ಯವಾಗಿ ಮಳೆಗಾಲದಲ್ಲಿ ಸುರಿಯುವ ಮಳೆಗೆ ಭರ್ತಿಯಾಗುವ ಕೆರೆಕಟ್ಟೆಗಳು, ಕೊಳಗಳು ಮತ್ತು ಅರಣ್ಯದೊಳಗೆ ಹರಿದು ಹೋಗುವ ಮೂಲೆಹೊಳೆಯ ನೀರು ವನ್ಯ ಪ್ರಾಣಿಗಳ ದಾಹ ನೀಗಿಸುತ್ತಾ ಬಂದಿವೆ. ಆದರೆ ಈ ಬಾರಿ ವಾಡಿಕೆಯ ಮಳೆ ಸುರಿಯಲಿಲ್ಲ. ಇದರಿಂದ ಕೆರೆ, ಕೊಳಗಳು ಬರಿದಾಗಿವೆ, ಮೂಲೆಹೊಳೆಯಲ್ಲೂ ನೀರು ಕಡಿಮೆಯಾಗಿದೆ. ಇದೆಲ್ಲದರ ಪರಿಣಾಮ ಮುಂದೆ ಅರಣ್ಯದಲ್ಲಿ ನೀರಿನ ಕ್ಷಾಮವನ್ನು ಎದುರಿಸಬೇಕಾಗಿ ಬರಬಹುದು ಎಂಬುದು ಪರಿಸರ ಪ್ರೇಮಿಗಳ ಆತಂಕವಾಗಿದೆ.

ಮಳೆಗೆ ಭರ್ತಿಯಾಗುವ ಕೆರೆಕಟ್ಟೆಗಳು

ಮಳೆ ಸಮರ್ಪಕವಾಗಿ ಸುರಿದಾಗ ಬಂಡೀಪುರ ಉದ್ಯಾನದ ಪಾರ್ವತಾಂಬಾ ತ್ರಿಯಂಭಕಪುರ ಬೆಟ್ಟಗಳಿಂದ ಹರಿದುಬಂದ ನೀರು ನೇರವಾಗಿ ಹಳ್ಳಕೊಳ್ಳಗಳಿಗೆ ಸೇರುವುದರಿಂದ ಕಾಡಂಚಿನ ಹಂಗಳದ ಹಿರಿಕೆರೆ, ಬರಗಿ ಕೆರೆ, ಹಾಗೂ ಬೇರಂಬಾಡಿಯ ಕೆಂಪುಸಾಗರ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಇದಲ್ಲದೆ ಬಂಡೀಪುರ ವಲಯದ ಮೂರ್ಕೆರೆ, ಗೋಪಾಲಸ್ವಾಮಿಬೆಟ್ಟ ವಲಯದ ಗಾರೇಪಾಲ, ತಾವರೆಕಟ್ಟೆ ಕೆರೆಗಳು ಮತ್ತು ಹಿರಿಕೆರೆ, ಓಂಕಾರ್ ವಲಯದ ಸೌತ್‌ಕೆರೆ, ನಾರ್ಥ್‌ಕೆರೆ, ಶಾಂತೇಗೌಡನಕಟ್ಟೆ, ಹಂದಿಕಟ್ಟೆ, ಕುಂದಕೆರೆ, ಮದ್ದೂರು ವಲಯಗಳಲ್ಲಿರುವ ಕೆರೆಗಳು ಮಳೆಗೆ ತುಂಬುವುದರಿಂದ, ಜತೆಗೆ ಅರಣ್ಯದ ಮಧ್ಯೆ ಹಾದು ಹೋಗಿರುವ ಮೂಲೆಹೊಳೆ ತುಂಬಿ ಹರಿಯುವುದರಿಂದ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.

Less Rainfall In Karnataka: Drought Effect On Bandipur

ಈ ಹಿಂದೆ ಬಂಡೀಪುರದಲ್ಲಿ ಸುಮಾರು ಮೂರು ವರ್ಷಗಳ ಕಾಲ ಮಳೆಯ ಅಭಾವದಿಂದ ಕೆರೆಕಟ್ಟೆ ಬರಿದಾಗಿ ಸಂಕಷ್ಟ ಅನುಭವಿಸುವಂತಾಗಿತ್ತು. 2017ರ ಸೆಪ್ಟಂಬರ್ ತಿಂಗಳು ಸೇರಿದಂತೆ ನಂತರ ಸುರಿದ ಮಳೆ ನೀರಿನ ಸಂಕಷ್ಟ ದೂರ ಮಾಡಿ ವನ್ಯ ಪ್ರಾಣಿಗಳ ದಾಹ ತೀರಿಸಿತ್ತು. ಆದಾದ ನಂತರದ ಐದು ವರ್ಷಗಳ ಕಾಲ ಈ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾದ ಪರಿಣಾಮ ಕೆರೆಕಟ್ಟೆಗಳು ಭರ್ತಿಯಾಗಿ ಇಡೀ ಅರಣ್ಯ ಸಮೃದ್ಧವಾಗಿತ್ತು. ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಕೆರೆಕಟ್ಟೆಗಳು ಬರಿದಾಗುತ್ತಿದೆ. ಅವತ್ತಿನ ಆ ಸಂಕಷ್ಟದ ದಿನಗಳು ನೆನಪಾಗುತ್ತಿವೆ.

ಕಾಡುಪ್ರಾಣಿ ಮಾನವರ ನಡುವೆ ಸಂಘರ್ಷ

ಅರಣ್ಯ ಇಲಾಖೆ ಈಗಿನಿಂದಲೇ ಎಚ್ಚೆತ್ತುಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಿಂದೆ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾದಾಗ ಟ್ಯಾಂಕರ್ ಮೂಲಕ ಅರಣ್ಯದ ನಡುವಿನ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಕೊಳವೆಬಾವಿಗೆ ಸೋಲಾರ್ ಪಂಪ್ ಅಳವಡಿಸಿ ಕೆರೆಗೆ ನೀರು ಹರಿಸುವ ಕಾರ್ಯ ಮಾಡಿದ್ದನ್ನು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಕೆರೆಕಟ್ಟೆಗಳಲ್ಲಿ ನೀರು ಆರಿಹೋದರೆ ಮುಂದೆ ಬಹಳಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗಿ ಬರಬಹುದು.

Less Rainfall In Karnataka: Drought Effect On Bandipur

ಬಂಡೀಪುರ ಉದ್ಯಾನದ ವನ್ಯಪ್ರಾಣಿಗಳು ನೀರು ಆಹಾರ ಅರಸಿ ಕೇರಳ, ತಮಿಳುನಾಡು ಕಡೆಗೆ ವಲಸೆ ಹೋಗಬಹುದು ಅಥವಾ ನಾಡಿನತ್ತಲೂ ಲಗ್ಗೆಯಿಡಬಹುದು. ಒಂದು ವೇಳೆ ಕಾಡು ದಾಟಿ ನಾಡಿಗೆ ಬಂದರೆ ಅದರಿಂದ ಕಾಡುಪ್ರಾಣಿ ಮತ್ತು ಮನುಷ್ಯರ ನಡುವೆ ಸಂಘರ್ಷವೂ ಏರ್ಪಡಬಹುದು. ಮಳೆ ಕೊರತೆ ಕಾರಣದಿಂದ ಬಿಸಿಲಿಗೆ ಹಸಿರು ಮೇವು ಒಣಗಿ ಹೋಗುವುದರಿಂದ ಸಸ್ಯಹಾರಿ ಪ್ರಾಣಿಗಳಿಗೆ ನೀರು ಮತ್ತು ಹಸಿರು ಮೇವಿನ ಕೊರತೆ ಎದುರಾಗಲಿದ್ದು, ಈ ಸಮಸ್ಯೆ ಪರಿಹರಿಸಲು ಈಗಿನಿಂದಲೇ ಸನ್ನದ್ಧರಾಗುವುದು ಅನಿವಾರ್ಯವಾಗಿದೆ.

ಮಳೆಯಾಗಿ ಸಮಸ್ಯೆ ನೀಗಿಸಲು ಪ್ರಾರ್ಥನೆ

ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿ ವರುಣನ ಅವಕೃಪೆಯಿಂದ ಜನರು ಮಾತ್ರವಲ್ಲದೆ ವನ್ಯಪ್ರಾಣಿಗಳು ಕೂಡ ಸಮಸ್ಯೆ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಒಂದಷ್ಟು ಮಳೆ ಬಂದರೆ ಬಂಡೀಪುರ ಅರಣ್ಯದಲ್ಲಿರುವ ವನ್ಯಪ್ರಾಣಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಅದು ಆಗಲಿ ಎಂಬುದು ಪರಿಸರ ಮತ್ತು ಪ್ರಾಣಿಪ್ರೇಮಿಗಳ ಪ್ರಾರ್ಥನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+