ಕಡೇ ಕಾರ್ತಿಕ ಸೋಮವಾರ: ಕೊಂಗಳ್ಳಿ ಹಾಗೂ ಮಲೆ ಮಾದಪ್ಪನ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ
ಚಾಮರಾಜನಗರ, ನವೆಂಬರ್, 25: ಶಿವನ ಆರಾಧನೆಗೆ ಪುಣ್ಯ ಮಾಸ ಅಂತಲೇ ಕರೆಯುವ ಕಾರ್ತಿಕ ಮಾಸದ ಕಡೇ ಸೋಮವಾರ ಇದಾಗಿದೆ. ಈ ಪ್ರಯುಕ್ತ ಪ್ರಮುಕ ಹರನ ದೇಗುಲಗಳಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಮತ್ತು ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇಗುಲದಲ್ಲಿ ಭಕ್ತಸಾಗರವೇ ಹರಿದು ಬಂದಿದೆ.
ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಹಸ್ರಾರು ಮಂದಿ ಭಕ್ತರು ದೇವರ ದರ್ಶನ ಪಡೆದಿದ್ದು, ದೇವರ ವಿಶೇಷ ದರ್ಶನ, ಅಭಿಷೇಕವನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು, ಕಾರ್ತಿಕ ಸೋಮವಾರ ಪ್ರಯುಕ್ತ ಭಕ್ತಾದಿಗಳಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ದೇವಾಲಯವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದೆ.

ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ಇಂದು (ನವೆಂಬರ್ 25) ರಾತ್ರಿ ಮಹಾಜ್ಯೋತಿ (ಬೃಹತ್ ದೀಪ) ಬೆಳಗಲಿದ್ದು, ಭಕ್ತರು ವಿಶೇಷ ಜ್ಯೋತಿ ದರ್ಶನ ಪಡೆಯಕು ಕಾತರದಿಂದ ಕಾಯುತ್ತಿದ್ದಾರೆ.
ಕೊಂಗಳ್ಳಿ ಬೆಟ್ಟದಲ್ಲಿ ಪುರುಷ ಭಕ್ತರ ಕಲರವ: ತಮಿಳುನಾಡಿನ ತಾಳವಾಡಿ ತಾಲೂಕಿನಲ್ಲಿರುವ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೂ ಭಕ್ತಸಾಗರವೇ ಹರಿದುಬಂದಿದೆ. ಚಾಮರಾಜನಗರ, ಗುಂಡ್ಲುಪೇಟೆ, ಟೀ.ನರಸಿಪುರ ಸೇರಿ ವಿವಿಧೆಡೆಯಿಂದ ಎತ್ತಿನ ಗಾಡಿಗಳಲ್ಲಿ ಭಕ್ತರು ಬಂದಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಘೋರ ತಪಸ್ವಿ ಹಿನ್ನೆಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ನಿಷೇಧ ಹೇರಲಾಗಿದೆ. ಪುರುಷ ಭಕ್ತರಷ್ಟೇ ಇಲ್ಲಿ ದೇವರ ದರ್ಶನ ಪಡೆಯಬಹುದಾಗಿದೆ.
2.43 ಕೋಟಿ ಹಣ ಸಂಗ್ರಹ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲ ಕೂಡ ಒಂದಾಗಿದೆ. ಈ ದೇವಸ್ಥಾಬದ ಹುಂಡಿ ಹಣ ಎಣಿಕೆ ಬುಧವಾರ ನಡೆದಿದ್ದು, ಬರೋಬ್ಬರಿ 2.43 ಕೋಟಿ ಹಣ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಮೂಲಗಳು ಯಾವುವು ಎಂದು ಇಲ್ಲಿ ತಿಳಿಯಿರಿ.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಬುಧವಾರ (ನವೆಂಬರ್ 20) ಬೆಳಗ್ಗೆ 6.30ಕ್ಕೆ ಆರಂಭಗೊಂಡು ಸಂಜೆ 7 ಗಂಟೆಗೆ ಮುಕ್ತಾಯವಾಗಿದೆ. ಬರೀ 27 ದಿನಗಳ ಅವಧಿಯಲ್ಲಿ ಬರೋಬ್ಬರಿ 2,43,65,775 ರೂಪಾಯಿ ಹಣ ಸಂಗ್ರಹವಾಗಿದೆ.
ಭಕ್ತರು ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿಯನ್ನು ಅರ್ಪಿಸಿದ್ದು, ಹುಂಡಿಯಲ್ಲಿ 5 ದೇಶಗಳ ಕರೆನ್ಸಿ ಪತ್ತೆಯಾಗಿದೆ. ದೀಪಾವಳಿ ಜಾತ್ರೆ ಹಿನ್ನೆಲೆ ಲಕ್ಷಾಂತರ ಮಂದಿ ಭಕ್ತರ ಕ್ಷೇತ್ರಕ್ಕೆ ಬಂದಿದ್ದರು. ಈ ಹಿನ್ನೆಲೆ ಕೇವಲ 27 ದಿನಗಳಿಗೆ 2.4 ಕೋಟಿ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications