ಕರ್ನಾಟಕದ ಈ ಜಿಲ್ಲೆಗೆ ಕೇರಳದ ಕಸ ತಂದು ಸುರಿದ ಲಾರಿ ಚಾಲಕನಿಗೆ ₹5,000 ದಂಡ
ಚಾಮರಾಜನಗರ, ಸೆಪ್ಟೆಂಬರ್, 11: ಜಾಸ್ತಿ ಮೈಮೇಲೆ ಬಿಟ್ಟುಕೊಂಡ್ರೆ ತಲೆ ಮೇಲೆ ಕುಳಿತುಕೊಂಡುಬಿಡ್ತಾರೆನ್ನುವ ಮಾತಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಹೊರ ರಾಜ್ಯದವರದ್ದೇ ದರ್ಬಾರ್ ಆಗ್ಬಿಟ್ಟಿದೆ. ಆದ್ರೆ ಕನ್ನಡಿಗರು ಒಮ್ಮೆ ತಾಳ್ಮೆ ಕಳೆದುಕೊಂಡರೆ, ಮೆರೆಯುವವರ ಬುಡಕ್ಕೆ ಬೆಂಕಿ ಇಡುತ್ತಾರೆನ್ನುವುದು ತಿಳಿದಿರಬೇಕಾಗುತ್ತದೆ. ಇದೀಗ ಕೇರಳದಿಂದ ಕಸ ತಂದು ರಾಜ್ಯದಲ್ಲಿ ಸುರಿದ ಲಾರಿ ಚಾಲಕನಿಗೆ ಗುಂಡ್ಲುಪೇಟೆ ಪುರಸಭೆ ದಂಡ ವಿಧಿಸಿ, ಛೀಮಾರಿ ಹಾಕಿದೆ.
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೇರಳದಿಂದ ತಂದ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಸಿಕ್ಕಿಬಿದ್ದ ವಾಹನ ಚಾಲಕನಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಈಚರ್ ವಾಹನ ಚಾಲಕ ಕೇರಳದಿಂದ ವಾಪಸ್ ಬರುವಾಗ ಬಾಳೆ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದು ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಬಳಿಯಲ್ಲಿ ಸುರಿಯುತ್ತಿದ್ದನು. ಈ ವೇಳೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದು 5,000 ದಂಡ ವಿಧಿಸಿ, ಎಚ್ಚರಿಕೆ ಕೊಡಿಸಿಕೊಂಡು ಹೋಗಿದ್ದಾರೆ.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಆರೋಗ್ಯಾಧಿಕಾರಿ ಗೋಪಿ, ಪರಿಸರ ಅಧಿಕಾರಿ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಕೇರಳ ಮತ್ತು ಕರ್ನಾಟಕ ಗಡಿಯಲ್ಲಿ ಚೆಕ್ ಪೋಸ್ಟ್ ಇದ್ದರೂ ಕೂಡ ಅವರ ಕಣ್ತಪ್ಪಿಸಿ ಕಟ್ಟಡ ತ್ಯಾಜ್ಯ, ಬಾಳೆ ತ್ಯಾಜ್ಯ ತಂದು ಸುರಿಯುವಾಗ ಸಿಕ್ಕಿಬಿದ್ದು ದಂಡ ಪೀಕಿದ್ದಾನೆ ಎಂದು ತಿಳಿದುಬಂದಿದೆ.
ಕಸದರಾಶಿಯಲ್ಲಿ ಪೊಲೀಸ್ ಟೋಪಿಗಳು ಪತ್ತೆ: ಕಸದರಾಶಿಯಲ್ಲಿ ಪೊಲೀಸ್ ಟೋಪಿಗಳು ಪತ್ತೆಯಾಗಿ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿದೆ.
ಖಾಕಿ ಖದರ್‌ಗೆ ಹೆಸರಾದ ಟೋಪಿ ಕಸದರಾಶಿಯಲ್ಲಿ ಬಿದ್ದಿರುವುದಕ್ಕೆ ಟೀಕೆ ವ್ಯಕ್ತವಾಗಿದ್ದು, ಗೌರಯುತವಾದ ವಿಲೇವಾರಿ ಮಾಡಬೇಕಿತ್ತು ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ.
ಚಾಮರಾಜನಗರದ ಬುದ್ಧ ನಗರ ಬಡವಾಣೆಯ ರಸ್ತೆಬದಿ ಕಸದರಾಶಿಯಲ್ಲಿ ಮೂರು ಟೋಪಿಗಳು ಪತ್ತೆಯಾಗಿದ್ದು, ಕಾನ್ಸ್‌ಟೇಬಲ್‌ಗಳು ಧರಿಸುವ ಟೋಪಿಗಳು ಇವಾಗಿವೆ. ಟೋಪಿಗಳಲ್ಲಿ ನಂ ಹಾಗೂ ಕರ್ನಾಟಕ ಪೊಲೀಸ್ ಚಿಹ್ನೆಯನ್ನು ತೆಗೆದು ಎಸೆಯಲಾಗಿದ್ದರೂ ಗೌರವಯುತವಾದ ವಿಲೇವಾರಿ ಮಾಡಬೇಕಾಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಈ ಕುರಿತು ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿದ್ದು, ಪೊಲೀಸ್ ಚಿಹ್ನೆಯ ಜೊತೆ ಟೋಪಿಗಳನ್ನು ಎಸೆದಿದ್ದರೇ ತಪ್ಪಾಗುತ್ತಿತ್ತು. ಪರಿಶೀಲನೆ ನಡೆಸುತ್ತೇನೆ, ಗೌರವಯುತ ವಿಲೇವಾರಿ ಅಗತ್ಯವಿತ್ತು ಎಂದು ಹೇಳಿದ್ದಾರೆ.












Click it and Unblock the Notifications