ಕಾವಾಡಿ ದಂಪತಿಯ ಪಾಲಿಗೆ ಮಗಳಾಗಿ ಬಂದ "ವೇದಾ" ಆನೆಯ ರೋಚಕ ಸ್ಟೋರಿ, ಬಂಡೀಪುರದಲ್ಲೊಂದು "ಎಲಿಫೆಂಟ್ ವಿಸ್ಪರರ್ಸ್"
ಚಾಮರಾಜನಗರ, ಜುಲೈ, 20: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ 'ದಿ ಎಲಿಫೆಂಟ್ ವಿಸ್ಪರರ್ಸ್'ಕಿರುಚಿತ್ರದಲ್ಲಿ ವಿಶ್ವದ ಗಮನ ಸೆಳೆದ ಬೆಳ್ಳಿ-ಬೊಮ್ಮನ್ ಬಂಡೀಪುರದಲ್ಲೂ ಇದ್ದಾರೆ. ಅಂದರೆ, ಅವರ ರೀತಿಯಲ್ಲೇ ಕಾವಾಡಿ ದಂಪತಿ ತಾಯಿಯಿಂದ ಬೇರ್ಪಟ್ಟಿರುವ ಆನೆ ಮರಿಯೊಂದನ್ನು ಸ್ವಂತ ಮಗುವಿನಂತೆ ಸಲಹುತ್ತಿದ್ದಾರೆ. ಹಾಗಾದರೆ ಈ ಆನೆ ಮರಿಯನ್ನು ತನ್ನ ಮಗುವಿನಂತೆ ಪೋಷಿಸುತ್ತಿರುವ ಈ ದಂಪತಿಯ ಪರಿಚಯವನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಜಿಲ್ಲೆಯಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾಗೆ 'ವೇದಾ' ಮೊದಲನೇ ಹೆಣ್ಣು ಮಗಳಿದ್ದಾಳೆ. ಈ ವೇದಾ ಮತ್ಯಾರೂ ಅಲ್ಲ, ಕಳೆದ ಏಳು ತಿಂಗಳ ಹಿಂದೆ ನುಗು ವಲಯದ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಹೆಣ್ಣು ಆನೆಮರಿಯಾಗಿದೆ. ಕೆಲವೇ ವರ್ಷಗಳ ಹಿಂದೆ ವಿವಾಹವಾಗಿರುವ ರಾಜು ಮತ್ತು ರಮ್ಯಾ ಮಡಿಲು ಸೇರಿರುವ ವೇದಾ ಆನೆಗೆ ಮೊದಲ ಮಗುವಿನ ಪಾಲನೆಯ ಅನುಭವ ನೀಡುತ್ತಿದ್ದಾಳೆ.

ಏಳು ತಿಂಗಳ ಹಿಂದೆ ನುಗು ಅರಣ್ಯ ಪ್ರದೇಶದಲ್ಲಿ ಈ ಆನೆಮರಿ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟಾಗ 14 ದಿನಗಳ ಮರಿಯಾಗಿತ್ತು. ನಿಂತ ಜಾಗದಲ್ಲೇ ನಿಂತು ಕಾದರೂ ಅಮ್ಮ ಬರಲಿಲ್ಲ. ಆಗ ಅರಣ್ಯ ಇಲಾಖೆ ಸಿಬ್ಬಂದಿ ತಬ್ಬಲಿಯಾದ ಆನೆ ಮರಿಯನ್ನು ರಕ್ಷಣೆ ಮಾಡಿ ಅದನ್ನು ಮೈಸೂರು ಮೃಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ಕೊನೆಗೆ ರಾಂಪುರ ಶಿಬಿರಕ್ಕೆ ಕರೆತಂದು ಈ ಆನೆ ಮರಿಗೆ ವೇದಾ ಎಂದು ಹೆಸರು ನಾಮಕರಣ ಮಾಡಲಾಯಿತು.
ವೇದಾ ಆರಂಭಿಕ ದಿನಗಳಲ್ಲಿ ಬೆಚ್ಚುತ್ತಿದ್ದಳು. ಆಗ ಫಾರೆಸ್ಟರ್ ಜಗದೀಶ್ ನ್ಯಾಮಗೌಡರ್ ಪಾಲನೆ ಮಾಡಿದರು. ಕೆಲವು ವಾರಗಳ ನಂತರ ರಾಜು ಮತ್ತು ರಮ್ಯಾ ಮಡಿಲಿಗೆ ವೇದಾಳನ್ನು ಇಡಲಾಯಿತು. ಅಲ್ಲಿಂದ ಈ ದಂಪತಿಗೆ ಆನೆ ಮರಿಯೊಂದಿಗಿನ ಸಂಬಂಧ ಚಿಗುರೊಡೆಯಿತು.
ತಮಿಳುನಾಡಿನ ತೆಪ್ಪಕಾಡಿನ ಬೆಳ್ಳಿ-ಬೊಮ್ಮನ್ 'ದಿ ಎಲಿಂಫೆಂಟ್ ವಿಸ್ಪರರ್ಸ್'ನ ಕಿರುಚಿತ್ರದಲ್ಲಿ ಆನೆಮರಿ ಜೊತೆಗಿನ ಸಂಬಂಧ ಬೇರ್ಪಟ್ಟಂತೆ ಇಲ್ಲಿಯೂ ಅದೇ ರೀತಿ ಆಗಿದೆ. ರಾಜು ಮತ್ತು ರಮ್ಯಾ ಅವರು ವೇದಾಳನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮರಿಗೆ ಪ್ರತಿದಿನ ಗ್ಲೂಕೋಸ್ ಮಿಶ್ರಿತ ಹಾಲನ್ನು ಬಾಟಲಿಗೆ ತುಂಬಿಸಿ ಕುಡಿಸಲಾಗುತ್ತಿದೆ.
ನಿದ್ರಿಸುವ ಸಮಯ ಬಿಟ್ಟು ಎಲ್ಲ ವೇಳೆಯಲ್ಲಿಯೂ ರಾಜು ಮನೆಯ ಮುಂದೆ ನಿಂತು ಚಿನ್ನಾಟವಾಡುತ್ತಿರುವ ವೇದಾ ಮನೆಯಂಗಳದ ಮಗುವಾಗಿದ್ದಾಳೆ. ಈ ಮೂಲೂಕ ರಾಜು ಮತ್ತು ರಮ್ಯಾ ಈಗ ಬೆಳ್ಳಿ-ಬೊಮ್ಮನ್ ಆಗಿಬಿಟ್ಟಿದ್ದಾರೆ.
ವೇದಾ ನಮ್ಮ ಮಗು
ಆನೆ ಮರಿ ವೇದಾ ನಮಗೆ ಮಗುವಿದ್ದಂತೆ. ಇದನ್ನು ನೋಡಿಕೊಳ್ಳಲು ನಮಗೆ ತುಂಬಾ ಖುಷಿಯಾಗುತ್ತದೆ. ಎಂದು ಹೇಳುವ ಕಾವಾಡಿ ರಾಜು ಮತ್ತು ರಮ್ಯಾ ಹೇಳಿದ್ದಾರೆ. ಹೀಗೆ ಈ ದಂಪತಿ ವೇದಾಳ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ.












Click it and Unblock the Notifications