ಚಾಮರಾಜನಗರದಲ್ಲಿ ರಾಜ್ಯದ ಸಂಸದರ ಹರಾಜು!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 9: ಗಡಿನಾಡು ಚಾಮರಾಜನಗರದಲ್ಲಿ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆ ಕನ್ನಡ ಚಳವಳಿಗಾರರು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ತಮಿಳು ಪತ್ರಿಕೆಗಳನ್ನು ದಹಿಸುವ ಮೂಲಕ ಬಂದ್ ಆಚರಣೆಗೆ ಚಾಲನೆ ನೀಡಿದರು.

chamarajanagar

ಜಿಲ್ಲೆಯಾದ್ಯಂತ ಕೆಎಸ್‍ಆರ್ ಟಿಸಿ ಬಸ್ ಗಳು ರಸ್ತೆಗಳಿಯದೆ ಪರೋಕ್ಷವಾಗಿ ಸಹಕಾರ ನೀಡಿದ್ದು, ಬಂದ್ ಯಶಸ್ವಿಯಾಗಲು ಕಾರಣವಾಯಿತು. ಖಾಸಗಿ ಬಸ್ ಗಳು ರಸ್ತೆಗಿಳಿಯದ ಕಾರಣ ಗ್ರಾಮಾಂತರ ಪ್ರದೇಶದಿಂದ ಪ್ರಯಾಣಿಕರು ಹೆಚ್ಚಾಗಿ ಆಗಮಿಸಲಿಲ್ಲ. ಪ್ರತಿ 10 ನಿಮಿಷಕ್ಕೊಮ್ಮೆ ಕನ್ನಡ ಸಂಘಟನೆಗಳ ಕಾರ್ಯಕರ್ತರು ಭುವನೇಶ್ವರಿ ವೃತ್ತದಲ್ಲಿ ವಿವಿಧ ರೀತಿ ಪ್ರತಿಭಟನೆ ನಡೆಸಿದ್ದು ಕಂಡು ಬಂತು.

ತಮಟೆ ಚಳವಳಿ, ತಲೆ ಕೆಳಗೆ ನಿಂತು ಪ್ರತಿಭಟನೆ, ಎಂಜಿಆರ್ ವೇಷಧಾರಿಯಾಗಿ ಕನ್ನಡಿಗರ ಮೇಲೆ ದಬ್ಬಾಳಿಕೆ ಅಣಕು ಪ್ರದರ್ಶನ, ಜಯಲಲಿತಾ ಮತ್ತು ಸಿದ್ದರಾಮಯ್ಯ ಅವರ ಜಂಟಿ ಶವಯಾತ್ರೆ ಹೀಗೆ ಹಲವಾರು ಮಾದರಿ ಪ್ರತಿಭಟನೆಗಳು ನಡೆದವು.

chamarajanagar protest

ಚಾಮರಾಜನಗರದ ಕೇಂದ್ರ ಸ್ಥಾನವಾಗಿರುವ ಭುವನೇಶ್ವರಿ ವೃತ್ತ ಪ್ರತಿಭಟನೆ ಕೇಂದ್ರವಾಗಿತ್ತು. ಬಿಎಸ್‍ಎನ್‍ಎಲ್, ಅಂಚೆ ಕಚೇರಿ ಹಾಗೂ ರೈಲು ನಿಲ್ದಾಣದ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರಕಾರದ ನಿಲುವನ್ನು ಖಂಡಿಸಿ, ರಾಜ್ಯದ ಲೋಕಸಭಾ ಸದಸ್ಯರನ್ನು ಹರಾಜು ಕೂಗುವ ಮೂಲಕ ಮಾರಾಟಕ್ಕಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು.

strike-dog

ಒಂದೆಡೆ ಕನ್ನಡ ಚಳವಳಿಗಾರರು ಬೈಕ್ ಮೆರವಣಿಗೆ ಮಾಡುವ ಮೂಲಕ ಬಂದ್ ಮಾಡುವಂತೆ ಮನವಿ ಮಾಡಿದರು. ಕನ್ನಡ ಚಳವಳಿಗಾರ ಶಾ.ಮುರಳಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಬಂಧನಕ್ಕೊಳಗಾದರು.

ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಯಲಲಿತಾ ಮತ್ತು ಸಿದ್ದರಾಮಯ್ಯರವರ ಜಂಟಿ ಶವಯಾತ್ರೆ ನಡೆಸಿ ಜಿಲ್ಲಾಡಳಿತ ಭವನದೊಳಗೆ ದಹಿಸಿ ಸರ್ಕಾರದ ಕ್ರಮವನ್ನು ಖಂಡಿಸಿದರು. ಚಾಮರಾಜೇಶ್ವರ ದೇವಾಲಯದ ಉತ್ಸವ ಸಮಿತಿ ಪದಾಧಿಕಾರಿಗಳು, ಸವಿತಾ ಸಮಾಜದವರು, ಎಸ್ ಡಿಪಿಐ ವಿಶ್ವಕರ್ಮ ಸಮಾಜದದ ಕಾರ್ಯಕರ್ತರು ಸೇರಿ ಹಲವಾರು ಸಂಘಟನೆಗಳು ಬಂದ್ ನಲ್ಲಿ ಬೆಂಬಲ ಸೂಚಿಸಿದರು.

tyre

ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲದೆ ಪ್ರತಿಭಟನಾಕಾರರಿಗೆ ಹಳೆ ಟಯರ್ ಗಳು ಸಿಗದಂತೆ ಬಚ್ಚಿಟ್ಟಿದ್ದು ಕಂಡು ಬಂತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajanagar Different organisations participated in Karnataka bandh called against supreme court direction about cauvery water release to Tamilnadu.
Please Wait while comments are loading...