Satish Jarkiholi On Sudeep: ಸುದೀಪ್ 3 ತಾಸಿನ ನಾಯಕ, ನಾವು ನಿಜವಾದ ನಾಯಕರು: ಸತೀಶ್ ಜಾರಕಿಹೊಳಿ
ಚಾಮರಾಜನಗರ, ಮೇ 8: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ರಣಕಣ ಅಂತಿಮ ಹಂತ ತಲುಪಿದ್ದು, ಮತದಾನಕ್ಕೆ ಎರಡೇ ದಿನಗಳು ಬಾಕಿ ಉಳಿದಿವೆ. ಇದೇ ಮೇ 10ರಂದು ಮತದಾನ ನಡೆಯಲಿದೆ.
ಇಂದು (ಸೋಮವಾರ, ಮೇ 8) ಸಂಜೆ 6 ಗಂಟೆಯ ನಂತರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಇದಕ್ಕೂ ಮುನ್ನ ರಾಜಕೀಯ ಪಕ್ಷಗಳು ಮತ್ತು ನಾಯಕರು ಮತದಾರರ ಮನ ಗೆಲ್ಲಲು ಅಂತಿಮ ಹಂತದ ಕಸರತ್ತು ನಡೆಸಿದರು.

ಸೋಮವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಬೆಳಗಾವಿ ಜಿಲ್ಲೆ ಯಮಕನಮರಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಚಿತ್ರನಟ ಕಿಚ್ಚ ಸುದೀಪ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದೀಪ್ ಕೇವಲ ಮೂರು ತಾಸಿನ ನಾಯಕ, ಆದರೆ ನಿಜವಾಗಿ ನಿಮ್ಮ ಸೇವೆ ಮಾಡುವುದು ನಾವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ಮತ್ತು ರೋಡ್ ಶೋ ನಡೆಸಿದ್ದರು. ನಾಯಕ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಅವರನ್ನು ಸ್ಟಾರ್ ಪ್ರಚಾರಕರ ರೀತಿ ಬಳಸಿಕೊಂಡಿತು.

ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊನೆಯ ದಿನದ ಪ್ರಚಾರ ನಡೆಸಿದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ವೇದಿಕೆ ಕಾರ್ಯಕ್ರಮದಲ್ಲಿ, ""ಮೊದಲು ಸುದೀಪ್ ನೋಡಬೇಕೆಂದರೆ ದುಡ್ಡು ಕೊಟ್ಟು ಹೋಗಬೇಕಿತ್ತು. ಆದರೆ ಇವತ್ತು ಅವರೇ ಜನರನ್ನು ನೋಡಲು ಬರುತ್ತಿದ್ದಾರೆ,'' ಎಂದಿದ್ದಾರೆ.
ಸುದೀಪ್ ಕೇವಲ ಮೂರು ತಾಸಿನ ನಾಯಕ ಅಷ್ಟೇ. ಆದ್ರೆ ನಿಜವಾಗಿ ನಿಮ್ಮ ಸೇವೆ ಮಾಡುವವರು ನಾವು. ಯಾರೋ ನಟ ಬಂದ, ಕಣ್ಣೀರು ಹಾಕಿದ ಮಾತ್ರಕ್ಕೆ ಎಲ್ಲವೂ ಪರಿಹಾರವಾಗಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದರು.

ಕ್ಷೇತ್ರದಲ್ಲಿ ನಿರಂತರವಾಗಿ ಜೊತೆಗಿರುವ ನಾಯಕರು ನಾವು. ಮಳೆ-ಬಿಸಿಲಲ್ಲಿ ನಿಮ್ಮ ಸೇವೆ ಮಾಡುವವರು ನಾವು. ಅವರು ಬಂದರು ಗುಂಡ್ಲುಪೇಟೆಯಲ್ಲಿ ಗಣೇಶ್ ಪ್ರಸಾದ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇತ್ತೀಚಿಗಷ್ಟೇ ನಟ ಸುದೀಪ್ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಅಬ್ಬರದ ರೋಡ್ ಶೋ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಿದ್ದರು.












Click it and Unblock the Notifications