ಸತ್ತ ಆನೆಯ ದಂತ ಕದ್ದ ಚೋರರ ಬಂಧನ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ 26: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯಕ್ಕೆ ಸೇರಿದ ಓಂಕಾರ್ ಅರಣ್ಯವಲಯದ ವ್ಯಾಪ್ತಿಯಲ್ಲಿ ಆನೆದಂತ ಕದ್ದು ತಲೆಮರೆಸಿಕೊಂಡಿದ್ದ ಐದು ಮಂದಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಯ್ಯನಪುರ ಗ್ರಾಮದ ಸುಬ್ಬಮ್ಮ, ಬೆಳ್ಳಪ್ಪ, ಬಸವಯ್ಯ, ಚಲುವರಾಯನಪುರದ ಸ್ವಾಮಿ, ಬರಗರಹುಂಡಿ ಬೆಳ್ಳಪ್ಪ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ಓಂಕಾರ್ ಅರಣ್ಯವಲಯದ ಜೆ.ಡಿ ಗುಂಡಿಹಳ್ಳದ ಬಳಿ ಸತ್ತಿದ್ದ ಕಾಡಾನೆಯ ದಂತ ಕದ್ದೊಯ್ದಿದ್ದರು.[ಮತ್ತೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದವು ಮೂರು ಹುಲಿ]

Ivory thieves held in Bandipur

ಕಾಡಾನೆ ಸತ್ತಿದ್ದ ಸಂದರ್ಭ ಸ್ಥಳಕ್ಕೆ ತೆರಳಿದ ಅಧಿಕಾರಿಗಳಿಗೆ ಆನೆಯ ದಂತ ಅಪಹರಿಸಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ಪರಿಶೀಲಿಸತೊಡಗಿದ್ದರು. ಆಗ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಓಂಕಾರ್ ಅರಣ್ಯವಲಯ ಅಧಿಕಾರಿಗಳ ತಂಡ ಈ ಹಿಂದೆ ಹಲವು ಪ್ರಕರಣಗಳಲ್ಲಿ ಬಂಧಿಸಿದ್ದ ಕನ್ನಯ್ಯನಪುರ ಗ್ರಾಮದ ಸುಬ್ಬಮ್ಮ ಎಂಬುವವರನ್ನು ಅನುಮಾನದ ಮೇರೆಗೆ ವಿಚಾರಣೆಗೊಳಪಡಿಸಿದಾಗ ಆನೆ ದಂತಗಳು ಸುಬ್ಬಮ್ಮನ ಮನೆಯಲ್ಲಿ ದೊರೆತಿತ್ತು.[ಬಂಡೀಪುರದಲ್ಲಿ ಹುಲಿಗಳ ದರ್ಶನ, ಪ್ರವಾಸಿಗರಿಗೆ ರೋಮಾಂಚನ]

ಈ ಸಂಬಂಧ ವಿಚಾರಣೆ ನಡೆಸಿದಾಗ ಇದರಲ್ಲಿ ಗ್ರಾಮದ ಬೆಳ್ಳಪ್ಪ, ಬಸವಯ್ಯ, ಚಲುವರಾಯನಪುರದ ಸ್ವಾಮಿ, ಬರಗರಹುಂಡಿ ಬೆಳ್ಳಪ್ಪ ಎಂಬುವವರ ಕೈವಾಡವಿರುವುದಾಗಿ ಬಾಯಿಬಿಟ್ಟಿದ್ದರು. ಅದರಂತೆ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸುಮಾರು 30 ಕೆಜಿ ತೂಕವುಳ್ಳ 2 ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ದಂತಗಳನ್ನು ಆರೋಪಿಗಳು ಕೇರಳಕ್ಕೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ತಂಡ ಇನ್ನೆಷ್ಟು ಅಕ್ರಮದಲ್ಲಿ ಭಾಗಿಯಾಗಿದೆ ಎಂಬುದು ವಿಚಾರಣೆಯಿಂದ ಹೊರಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Five persons arrested by forest officials, who thieved ivory of a dead elephant in Bandipur.
Please Wait while comments are loading...