ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತನ ಮೇಲೆ ಬಿತ್ತು ಐಟಿ ಕಣ್ಣು
ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಮತ್ತು ಆಪ್ತರಾಗಿರುವ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಉಮೇಶ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.'
ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ಉಮೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿದ 14 ಐಟಿ ಅಧಿಕಾರಿಗಳ ತಂಡ ವಿವಿಧ ದಾಖಲಾತಿಗಳನ್ನು ಪರಿಶೀಲಿಸಿತು.
ಉಮೇಶ್ ಅವರು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೂ ಆಪ್ತರಾಗಿದ್ದಾರೆ. ಈ ಹಿಂದೆ ಎಂ. ಚಿನ್ನಸ್ವಾಮಿ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಅವರನ್ನು ವಜಾಗೊಳಿಸಿ ಸಿದ್ದರಾಮಯ್ಯ ಅವರು ಉಮೇಶ್ ಅವರನ್ನು ನೇಮಿಸಿದ್ದರು.

ಜೆಡಿಎಸ್ ಅಭ್ಯರ್ಥಿಗೆ ಶಾಕ್
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದ ವಿವಿಧ ರಾಜಕೀಯ ಮುಖಂಡರ ಮನೆಗಳ ಮೇಲೆ ಐಟಿ ದಾಳಿ ನಡೆಯುತ್ತಿದೆ. ಶನಿವಾರ ಬೆಳಿಗ್ಗೆ ಖಾನಾಪುರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಭಗವಾನ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ನಾಸೀರ್ ಭಗವಾನ್ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಬಳಿ 191 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಮಾಹಿತಿ ನೀಡಿದ್ದರು.
ಮೂರು ಕಾರಿನಲ್ಲಿ ಬಂದ 13 ಅಧಿಕಾರಿಗಳ ತಂಡ ಖಾನಾಪುರದ ಗಂದಿಗವಾಡ ಗ್ರಾಮದಲ್ಲಿರುವ ನಾಸೀರ್ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದೆ.











Click it and Unblock the Notifications