ಮಲೆ ಮಾದಪ್ಪನ ಬೆಟ್ಟದಲ್ಲಿ ತಗ್ಲಾಕೊಂಡ ಅಂತಾರಾಜ್ಯ ಕಳ್ಳರು; ಪೊಲೀಸರು ವಶಕ್ಕೆ ಪಡೆದ ಚಿನ್ನ ಎಷ್ಟು ಗೊತ್ತಾ.?
ಚಾಮರಾಜನಗರ, ನವೆಂಬರ್, 20: ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ದೇವಸ್ಥಾನ ಕೂಡ ಒಂದಾಗಿದೆ. ಇನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಅಂತಾರಾಜ್ಯ ಕಳ್ಳರು ತಗ್ಲಾಕೊಂಡಿದ್ದು, ಒಟ್ಟು 14 ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ ಎನ್ನವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಷ್ಟು ಜನ ಬಂಧಿತರಾಗಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ತಮಿಳುನಾಡು ಮೂಲದ ಕೊಡಂಗು ಸ್ವಾಮಿ (58), ಇಂದಿರರಾಜ್ ಅಲಿಯಾಸ್ ಇಂದ್ರರಾಜ್ (35), ಕೇರಳ ಮೂಲದ ಅಜಿತ್ (23), ಜೇಸುದಾಸ್ ಅಲಿಯಾಸ್ ಯೇಸುದಾಸ್ (39) ಬಂಧಿತರು. ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಬೇಗೂರು ಹಾಗೂ ಚಾಮರಾಜನಗರ ಮತ್ತು ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 14 ಕಳವು ಪ್ರಕರಣ ಎಸಗಿದ್ದ ಇವರುಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಒಂದು ಕೇಸ್‌ನಿಂದ 14 ಪ್ರಕರಣ ಬೆಳಕಿಗೆ: ಹನೂರಿನ ಆಶ್ರಯ ಬಡಾವಣೆ ನಿವಾಸಿ ಸಾಬೀರ್ ಅಹಮದ್ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಪ್ರಕಣರದ ಬೆನ್ನತ್ತಿದ್ದ ಪೊಲೀಸರು ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲೂ ಖದೀಮರ ಗ್ಯಾಂಗ್ ಇರುವ ಮಾಹಿತಿ ಅರಿತು ಬಂಧಿಸಿದ್ದಾರೆ.
ವಿಚಾರಣೆಗೆ ಒಳಪಡಿಸಲಾಗಿ ಹನೂರು, ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಲ ಪಟ್ಟಣ, ಚಾಮರಾಜನಗರ ಪಟ್ಟಣ, ಗುಂಡ್ಲುಪೇಟೆ ಮತ್ತು ಬೇಗೂರು ಮತ್ತು ಕೋಲಾರದಲ್ಲಿ ಒಟ್ಟು 14 ಕಡೆ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ. ಬಂಧಿತರಿಂದ 41,69,000 ರೂಪಾಯಿ ಬೆಲೆ ಬಾಳುವ 514.16 ಗ್ರಾಂ ಚಿನ್ನಾಭರಣಗಳು, ಮೂರು ಕೆ.ಜಿ.ಬೆಳ್ಳಿ ಆಭರಣಗಳು, 4,400 ನಗದು ಹಣ, ಕೃತಕ್ಕೆ ಬಳಸಿದ್ದ ಮಹೇಂದ್ರ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
13 ಮಂದಿ ಬಂಧನ: ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಕೆರೆ ಬಳಿಯಲ್ಲಿ ಜೂಜಾಡುತ್ತಿದ್ದ 13 ಮಂದಿಯನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ವೇಳೆ ಅವರ ಬಳಿಯಿದ್ದ ಬರೋಬ್ಬರಿ 1,65,000 ರೂಪಾಯಿ ಹಣ ಮತ್ತು 7 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುಂಡ್ಲುಪೇಟೆ ಪಟ್ಟಣದ ಶಿವಕುಮಾರ್, ರಂಗಸ್ವಾಮಿ, ರವಿ ಎಸ್, ಗುರುರಾಜ್, ಆನಂದ, ದೇವರಹಳ್ಳಿ ಗ್ರಾಮದ ಸುರೇಶ್, ಬಸವೇಶ, ಮಾದಪ್ಪ, ಮಲ್ಲಪ್ಪ, ಮಾದಪ್ಪ ಹಂಗಳ ಗ್ರಾಮದ ನಾಗೇಶ, ಶ್ರೀಕಾಂತ್, ಎಚ್.ಎನ್.ಶಿವಪ್ಪ ಬಂಧಿತರು.
ಗುಂಡ್ಲುಪೇಟೆ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ದೇವರಹಳ್ಳಿ ಗ್ರಾಮದ ಮಲ್ಲೇಶ್ವರ ದೇವಾಲಯದ ಪಕ್ಕದ ದೇವರಹಳ್ಳಿ ಕೆರೆಯ ಏರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಚಾರ್ಜಬಲ್ ಲೈಟ್ ಅನ್ನು ಕಬ್ಬಿಣದ ಸರಳಿಗೆ ಅಳವಡಿಸಿ ಅದೇ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದರು. ಇನ್ನು ಈ ಬಗ್ಗೆ ಮಾಹಿತಿ ದೊರೆತ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುತ್ತುವರೆದು ಆರೋಪಿಗಳನ್ನು ಬಂಧಿಸಿ, ನಗದು, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.












Click it and Unblock the Notifications