ಗುಂಡ್ಲುಪೇಟೆ: ಮನೆ ಗೋಡೆಯೊಳಗಡೆ ಅಕ್ರಮ ಮದ್ಯ ಸಂಗ್ರಹಿಸಿದ್ದ ಭೂಪ.!-ಮುಂದೇನಾಯ್ತು?
ಚಾಮರಾಜನಗರ, ಸೆಪ್ಟೆಂಬರ್, 18: ಸಾಮಾನ್ಯವಾಗಿ ಅಕ್ರಮ ಮದ್ಯ ಸಾಗಾಟದ ವೇಳೆ ಚೆಕ್‌ಪೋಸ್ಟ್‌ಗಳಲ್ಲಿ ಸಿಗಿಬಿದ್ದಂತಹ ಉದಾಹರಣೆಗಳಿವೆ. ಆದರೆ ಇದೀಗ ಮನೆಯ ಗೋಡೆಯಲ್ಲಿಯೇ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿ ಆರೋಪಿ ತಗ್ಲಾಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ನಡೆದಿದೆ. ಮುಂದೇನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಿಟ್ರೆ ಗ್ರಾಮದ ಮಂಜು ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ. ಅಕ್ರಮವಾಗಿ ಈತ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ ವೇಳೆ ಮನೆಯಲ್ಲೇ ಈತ ಮದ್ಯ ಶೇಕರಣೆ ಮಾಡಲು ಗೋಡೆ ಕೊರೆದು ರಹಸ್ಯ ಚೇಂಬರ್ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

8 ಲೀಟರ್ ಮದ್ಯ, 5 ಲೀಟರ್ ಬಿಯರ್ ವಶಪಡಿಸಿಕೊಂಡು ಆರೋಪಿ ಮಂಜು ಎಂಬಾತನನ್ನು ಅಬಕಾರಿ ಸಿಬ್ಬಂದಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಕ್ರಮ ಮದ್ಯ ಮಾರಾಟ: ಪ್ರಸಿದ್ಧ ಯಾತ್ರಸ್ಥಳ, ಪುಣ್ಯ ಕ್ಷೇತ್ರವಾದ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ ಘಟನೆ ಸೆಪ್ಟೆಂಬರ್ 2ರಂದು ನಡೆದಿತ್ತು.
ಬಾಬು ಪೂಜಾರಿ, ಎನ್.ಕುಮಾರ್, ಮಹೇಶ್, ಮಹಾದೇವಿ ಬಂಧಿತ ಆರೋಪಿಗಳು. ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹಾಗೂ ಅಬಕಾರಿ ಡಿಸಿ ನಾಗಶಯನ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ 5 ಪ್ರಕರಣ ದಾಖಲಿಸಿದ್ದಾರೆ. ಮೂವರು ಪರಾರಿ ಆಗಿದ್ದಾರೆ ಎಂದು ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ರಸ್ತೆಯಲ್ಲಿ ಬರುವ ಸಿದ್ದಪ್ಪ ಹಾಗೂ ರಾಜಪ್ಪ ಎಂಬುವರ ಮನೆಯಲ್ಲಿ ವಿವಿಧ ಕಂಪನಿಯ ಅಕ್ರಮ ಮಧ್ಯ 13 ಬಾಕ್ಸ್ , ಕುಮಾರ್ ಮನೆಯಲ್ಲಿ ಒಂದು ಬಾಕ್ಸ್ ಮತ್ತು 30 ಪೌಚ್, ಮೂರನೇ ಪ್ರಕರಣವಾದ ಬಾಬು ಪೂಜಾರಿ ಅಡ್ಡೆ ಮೇಲೆ ದಾಳಿ ಮಾಡಿ ಎರಡು ಬಾಕ್ಸ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ನಾಲ್ಕನೇ ಪ್ರಕರಣದಲ್ಲಿ ಮಹದೇವಿ ತಂಬಡಗೇರಿ ಮನೆಯಲ್ಲಿ ದಾಸ್ತಾನಿಟ್ಟಿದ್ದ ಒಂದು ಬಾಕ್ಸ್, 5ನೇ ಪ್ರಕರಣವಾದ ಪುಟ್ಟಮ್ಮ ಎಂಬವರ ಮನೆಯಲ್ಲಿ ಒಂದು ಬಾಕ್ಸ್ ಸೇರಿದಂತೆ ಒಟ್ಟು 193 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಒಟ್ಟಿನಲ್ಲಿ ತಪೋಭೂಮಿಯಲ್ಲಿ ಕುಡಿತಕ್ಕೆ ಬ್ರೇಕ್ ಹಾಕುವ ಕೆಲಸ ನಿರಂತರವಾಗಿರಲಿ ಎಂಬುದು ಭಕ್ತರ ಒತ್ತಾಸೆಯಾಗಿದೆ.












Click it and Unblock the Notifications