ಚಾಮರಾಜನಗರ: ಫಸಲಿನ ಮಧ್ಯೆಯೇ 8 ಅಡಿ 'ಗಾಂಜಾ ಪೊದೆ'
ಚಾಮರಾಜನಗರ, ಅಕ್ಟೋಬರ್, 06: ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ ತಗ್ಲಾಂಡಿರುವವರನ್ನು ನಾವು ನೋಡಿರುತ್ತೇವೆ. ಆದರೆ ಇದೀಗ ಜಮೀನಿನಲ್ಲಿ ಫಸಲಿನ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿದ್ದನ್ನು ಅಬಕಾರಿ ಪೊಲೀಸರು ಪತ್ತೆಹಚ್ಚಿ ವ್ಯಕ್ತಿ ಬಂಧಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಕುಂಟಗುಡಿ ಕಾಲೋನಿಯಲ್ಲಿ ಇಂದು (ಅಕ್ಟೋಬರ್ 06) ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ಅಬಕಾರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಹನುಮೇಗೌಡ ಎಂಬಾತ ತನ್ನ ಜಮೀನಿನಲ್ಲಿ ಬೆಳೆದಿದ್ದ ತಲಾ 8 ಅಡಿಗೂ ಹೆಚ್ಚು ಎತ್ತರದ ಒಟ್ಟು 18 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ತೂಕ 26 ಕೆ.ಜಿಯಷ್ಟಿದೆ ಎಂದು ತಿಳಿದುಬಂದಿದೆ.

ಬಂಧಿತನ ವಿರುದ್ಧ ಅಬಕಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆಯೂ ಕೂಡ ಹನುಮೇಗೌಡ ಗಾಂಜಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಎರಡು ಕ್ವಿಂಟಾಲ್ ಒಣ ಗಾಂಜಾ ವಶ: ಬರೋಬ್ಬರಿ ಎರಡು ಕ್ವಿಂಟಾಲ್‌ನಷ್ಟು ಒಣ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲದ ಮಧುವನಹಳ್ಳಿ ಬೈಪಾಸ್ ಬಳಿ ಫೆಬ್ರವರಿ 13ರಂದು ನಡೆದಿತ್ತು.
ಕೊಳ್ಳೇಗಾಲ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 1.44 ಕೋಟಿ ಮೌಲ್ಯದ ಗಾಂಜಾ ಜೊತೆ 25 ಲಕ್ಷ ಮೌಲ್ಯದ ಲಾರಿ, 9 ಲಕ್ಷ ಮೌಲ್ಯದ ಪ್ಲೈವುಡ್ ಶೀಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೆಂಗಳೂರು, ದಾವಣಗೆರೆ, ಯಾದಗಿರಿ, ಹರಹರ ಮೂಲದವರಾಗಿದ್ದು, ಬೆಂಗಳೂರು ಮೂಲದ ಸೆಂದಿಲ್ ಕುಮಾರ್, ದಾವಣಗೆರೆಯ ರವಿಕುಮಾರ್, ಯಾದಗಿರಿಯ ಉಮಾಶಂಕರ್ ಹಾಗೂ ಹರಿಹರದ ವಿನಾಯಕ ಬಂಧಿತ ಆರೋಪಿಗಳಾಗಿದ್ದಾರೆ.
ಈಚರ್ ವಾಹನದಲ್ಲಿ ಹನೂರು ಭಾಗದಲ್ಲಿ ಮಾರಾಟ ಮಾಡಲು ಗಾಂಜಾ ತರಲಾಗುತ್ತಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮಾಲನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 221 ಕೆ.ಜಿ.ಒಣ ಗಾಂಜವನ್ನು ಪ್ಲೈವುಡ್ ಶೀಟ್‌ಗಳೊಂದಿಗೆ ಅಡಗಿಸಿಕೊಂಡು ಬರುತ್ತಿದ್ದುದು ಪತ್ತೆಯಾಗಿದೆ.
ಸದ್ಯ, ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಮೂವರು ಆರೋಪಿಗಳ ಬಂಧನ: ಮುಡಿಗುಂಡದ ರಾಷ್ಟ್ರೀಯ ಹೆದ್ದಾರಿ ಬಳಿ ಅಕ್ರಮವಾಗಿ ಜೀವಂತ ನಕ್ಷತ್ರ ಆಮೆಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು.
ಚಾಮರಾಜನಗರ ತಾಲ್ಲೂಕು ಕುಳ್ಳೂರು ಗ್ರಾಮದ ಮಾದೇಶ್, ತಮಿಳುನಾಡಿನ ಸತ್ತಿ ತಾಲ್ಲೂಕಿನ ಕಾನಗೆರೆ ಗ್ರಾಮದ ಶಿವಕುಮಾರ್, ಪಿರಿಯಾಪಟ್ಟಣ ತಾಲ್ಲೂಕಿನ ಆನಂದನಗರ ಗ್ರಾಮದ ಜಾಕೀರ್ ಷರೀಫ್ ಬಂಧಿತ ಆರೋಪಿಗಳು. ಇವರಿಂದ ಮೂರು ಜೀವಂತ ನಕ್ಷತ್ರ ಆಮೆಗಳು, ಒಂದು ಮಾರುತಿ ಸುಜುಕಿ ಕಾರನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಮೆಗಳನ್ನು ಹಿಡಿದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹಿನ್ನೆಲೆ ಕಾರಿನಲ್ಲಿ ಸಾಗಾಣಿಕೆ ಮಾಡುತ್ತಿರುವ ಈ ವೇಳೆ ಅರಣ್ಯ ಸಂಚಾರಿ ದಳ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಈ ಸಂಬಂಧ ಅರಣ್ಯ ಸಂಚಾರಿ ದಳದ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.












Click it and Unblock the Notifications