Hogenakkal Falls: ಹೊಗೆನಕಲ್ ಜಲಪಾತದ ಸೌಂದರ್ಯ ಹೆಚ್ಚಿಸಿದ ಕಾವೇರಿ
Hogenakkal Falls: ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದ ಹಿನ್ನೆಲೆ ಹಳ್ಳ-ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿಹರಿಯುತ್ತಿವೆ. ಅಲ್ಲದೆ, ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವು ಕೂಡ ಹೆಚ್ಚಾಗುತ್ತಿರುವ ಹಿನ್ನೆಲೆ, ನೀರನ್ನು ಹೊರಗಡೆ ಬಿಡಲಾಗುತ್ತಿದೆ.
ಹಾಗೆಯೇ ಕಾವೇರಿ ಹೊರಹರಿವು ಹೆಚ್ಚುತ್ತಿದ್ದಂತೆ ತಮಿಳುನಾಡು ಕರ್ಣಾಟಕ ಜಲಗಡಿಯಾಗಿರುವ ಹೊಗೆನಕಲ್ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು, ಈ ಸುಂದರ ದೃಶ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಕಾವೇರಿ ಕೊಳ್ಳದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆ ಮತ್ತು ನದಿಯ ಹೊರಹರಿವು ಹೆಚ್ಚಾಗಿರುವುದರಿಂದ ಹೊಗೆನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕಲ್ಲು-ಬಂಡೆಗಳ ನಡುವೆ ಜಲ ವೈಯ್ಯಾರ ಸೃಷ್ಟಿಯಾಗಿದೆ.
ಕಳೆದ ವರ್ಷ ಬರ ಆವರಿಸಿದ್ದ ಹಿನ್ನೆಲೆ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿತ್ತು. ಆದರೆ, ಈ ಬಾರಿ ಉತ್ತಮ ಮಳೆ ಆಗುತ್ತಿದ್ದು, ಹೊಗೆನಕಲ್‌ನಲ್ಲಿ ಮತ್ತೇ ಜಲ ವೈಭವ ಮರುಕಳಿಸಿದೆ. ನೀರಿನ ಪ್ರಮಾಣ ಏರುಗತಿ ಇರುವುದರಿಂದ ತಮಿಳುನಾಡು ಮತ್ತು ಕರ್ನಾಟಕ ಎರಡೂ ಭಾಗದಲ್ಲೂ ಜಲಪಾತದ ಅದ್ಭುತ ನೋಟ ಸಿಗುತ್ತಿದೆ.
ಪ್ರವಾಸಿಗರಿಗೆ ನಿರ್ಬಂಧ: ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತಕ್ಕೆ 21 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಲಪಾತದ ತಮಿಳುನಾಡು ಭಾಗದಲ್ಲಿ ತೆಪ್ಪ ಸವಾರಿ, ಪ್ರವಾಸಿಗರು ನದಿಗೆ ಇಳಿಯುವುದನ್ನು ನಿರ್ಬಂಧಿಸಿ ಧರ್ಮಪುರಿ ಜಿಲ್ಲಾಧಿಕಾರಿ ಶಾಂತಿ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಭಾಗದಲ್ಲಿ ಯಾವುದೇ ರೀತಿಯ ನಿರ್ಬಂಧ ಇಲ್ಲ. ನೀರಿನ ಪ್ರಮಾಣ ನೋಡಿಕೊಂಡು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಸಭೆ ನಡೆಸಬೇಕು: ಭದ್ರಾ ಅಚ್ಚುಕಟ್ಟುದಾರರ ಹಿತ ಕಾಪಾಡಲು ಕೂಡಲೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ರೈತರ ಜೀವನಾಡಿ, ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಪುನರ್ವಸು ಮಳೆ ಬಿಟ್ಟುಬಿಡದೇ, ಸುರಿಯುತ್ತಿದೆ. ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಬೇಸಿಗೆ ಹಂಗಾಮಿನಲ್ಲಿ ಬೀಕರ ಬಿಸಿಲಿನ ತಾಪಮಾನದಿಂದ ಬಸವಳಿದ ರೈತರು ಪ್ರಸ್ತುತ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಮೀನು ಉಳಿಮೆ ಮಾಡಿಕೊಂಡು ಭತ್ತದ ಬೀಜ ಬಿತ್ತನೆಗೆ ಸಜ್ಜಾಗಿ ಡ್ಯಾಂನ ಒಳಹರಿವಿನ ಪ್ರಮಾಣವನ್ನು ಚಾತಕ ಪಕ್ಷಿಯಂತೆ ನೋಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೀಗ ಭದ್ರಾ ಡ್ಯಾಂನ ಒಳಹರಿವು 27,839 ಕ್ಯೂಸೆಕ್ ಇದ್ದು, ನೀರಿನ ಮಟ್ಟ 144 ಅಡಿ 7 ಇಂಚು ಇದೆ. 30.142 ಟಿಎಂಸಿಯಷ್ಟು ನೀರಿನ ಸಂಗ್ರಹ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತದೆ. ಹೀಗಾಗಿ ಈ ಬಾರಿ ಡ್ಯಾಂ ತುಂಬುತ್ತದೆ ಎಂದು ರೈತರಲ್ಲಿ ಭರವಸೆ ಮೂಡಿದೆ. ಇದರಿಂದ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ಅಣಿಯಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಡ್ಯಾಂನಿಂದ ನೀರು ಹರಿಸಬೇಕೆಂದು ಆಗ್ರಹಿಸಲಾಗಿದೆ.
ಭದ್ರಾ ಡ್ಯಾಂನಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ ನೀರು ಬಿಡುವ ನಿರ್ಧಾರ ಮಾಡಬೇಕು. ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆಯಾಗುತ್ತಿದೆ. ಸೋರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಲೂಯಿಸ್ ಭದ್ರತೆ ಬಗ್ಗೆ ಸ್ಪಷ್ಟನೆ ನೀಡಬೇಕು. 1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಬೇಕು.
ಹಳೆಯಾದಾಗಿರುವ ಡ್ಯಾಂ ಗೇಟ್‌ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು. ಡ್ಯಾಂನ ಸುತ್ತಲೂ ಬೇಲಿ ನಿರ್ಮಿಸಿ ಸುಭದ್ರತೆ ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.












Click it and Unblock the Notifications