ಚಾಮರಾಜನಗರ: ಫೇಸ್ ಬುಕ್‌ನಿಂದ ಸರ್ಕಾರಿ ಶಾಲೆಗಳಿಗೆ ನೆರವು- ಇದೊಂದು ಹೊಸ ಮೆರುಗು
ಚಾಮರಾಜನಗರ, ಡಿಸೆಂಬರ್, 10: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ವಂಚನೆ, ಸೈಬರ್ ಅಪರಾಧ ಸೇರಿ ಲವ್ ಕಹಾನಿ ಹೀಗೆ ನಕಾರಾತ್ಮಕವಾಗಿ ಬಳಸುವವರೇ ಬಹಳ ಮಂದಿ. ಆದರೆ, ಅದೇ ಸಾಮಾಜಿಕ ಜಾಲತಾಣದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿವೆ, ಮಕ್ಕಳಿಗೆ ನೆರವು ಸಿಗುತ್ತಿದೆ ಎಂದರೆ ನೀವು ನಂಬಲೇಬೇಕು.
ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಎಂಬವರು ಫೇಸ್ ಬುಕ್ ಅನ್ನು ಶಾಲಾಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಾನಿಗಳನ್ನು ಹುಡುಕಿ ಶಾಲೆಗಳಿಗೆ ನೆರವು ಕೊಡಿಸುತ್ತಿದ್ದಾರೆ.
ಶಿಥಿಲಾವಸ್ಥೆ ಶಾಲೆ, ಶಿಕ್ಷಕರ ಕೊರತೆ, ದಾಖಲಾಗದ ಮಕ್ಕಳು ಎಂಬ ಸಮಸ್ಯೆಗಳ ಸುಳಿಯಲ್ಲೇ ತಿರುಗುವ ಸರ್ಕಾರಿ ಶಾಲೆಗಳಿಗಿಂತ ಸಿದ್ದಯ್ಯನಪುರ ಶಾಲೆ ವಿಭಿನ್ನವಾಗಿದೆ. 1 ರಿಂದ 8ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಪರಿಸರ ಕಾಳಜಿ, ಪ್ರತಿಭಾ ಕಾರಂಜಿಯಲ್ಲಿ ಈ ಶಾಲೆಯೇ ನಂ1.

ಪರಿಸರ ಪ್ರೀತಿ- ನೃತ್ಯದ ಮೂಲಕ ಅಆಇಈ ಕಲಿಕೆ
ಶಾಲೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಮತ್ತು ಒಣ ಕಸಗಳನ್ನು ಮಿತ್ರ ಕಸ-ಶತೃ ಕಸ ಎಂದು ಬೇರ್ಪಡಿಸುವ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಒಂದೊಂದು ಗಿಡವನ್ನು ದತ್ತು ನೀಡಿದ್ದು, ಬಿಡುವಿನ ವೇಳೆಯಲ್ಲಿ ಅವರೇ ಅದರ ಪೋಷಣೆ ಮಾಡುತ್ತಾರೆ. ಶಾಲಾ ಆವರಣದಲ್ಲಿ ತೆಂಗು, ಮಾವು, ಸೀಬೆ, ಬಾಳೆ, ನಿಂಬೆ, ಕರಿಬೇವು, ನುಗ್ಗೆ, ಹಲಸು, ಮೂಲಂಗಿ, ಪುದೀನ, ಇತರೆ ಸೊಪ್ಲು-ತರಕಾರಿಗಳನ್ನು ಬೆಳೆದಿದ್ದು, ಇವು ಬಿಸಿಯೂಟಕ್ಕೆ ಬಳಕೆಯಾಗುತ್ತಿದೆ.
ನಲಿ-ಕಲಿಯಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ವರ್ಣಮಾಲೆಯನ್ನು ನೃತ್ಯದ ಮೂಲಕ ಹೇಳಿಕೊಟ್ಟಿರುವುದು ಮಕ್ಕಳಿಗೆ ಕಲಿಕಾಸಕ್ತಿ ಮೂಡಿಸಲಿದೆ. ಶಾಲೆಯ ಹಳೇ ವಿದ್ಯಾರ್ಥಿಗಳು, ಸ್ನೇಹಿತರು ಮತ್ತು ಫೇಸ್‌ಬುಕ್ ದಾನಿಗಳೇ ಈ ಶಾಲೆಯ ಪ್ರಗತಿಗೆ ಕಾರಣ. ಗೋಡೆ ಮೇಲೆ ದೇಶಭಕ್ತರ ಚಿತ್ರಗಳು, ಗಿಡಗಳು, ಬಿಸಿಯೂಟದ ಅಡುಗೆ ಮನೆಗೆ ಗ್ರಾನೈಟ್, ಶಾಲೆಯ ಮುಂಭಾಗ ಧ್ವಜಸ್ತಂಭಗಳು, ಪೆನ್ನು-ಪುಸ್ತಕ ಎಲ್ಲವೂ ದಾನಿಗಳ ಮೂಲಕವೇ ಸಿಕ್ಕಿರುವುದು ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಹೇಳುತ್ತಾರೆ.
ಬೇರೆ ಶಾಲೆಗಳಿಗೂ ನೆರವು
ಆರಂಭದಲ್ಲಿ ತಮ್ಮ ಶಾಲೆಗಷ್ಟೇ ದಾನಿಗಳಿಂದ ನೆರವು ಕೊಡಿಸುತ್ತಿದ್ದ ನಾರಾಯಣ ದಿನಗಳು ಉರುಳಿದಂತೆ ಬೇರೆ ಶಾಲೆಗಳ ಅಭಿವೃದ್ಧಿಗೂ ಗಮನ ಹರಿಸಿದ್ದಾರೆ. ಸಿದ್ದಯ್ಯನಪುರ ಸುತ್ತಮುತ್ತಲಿನ ಶಾಲೆಗಳಿಗೆ ದಾನಿಗಳನ್ನು ಕರೆದೊಯ್ದು ವಿದ್ಯಾರ್ಥಿಗಳಿಗೆ ಬೇಕಾದ ಕಲಿಕಾ ಸಾಮಾಗ್ರಿ, ಶಾಲೆಗೆ ಬೇಕಾದ ಸೌಲಭ್ಯಗಳನ್ನು ಕೊಡಿಸುತ್ತಿದ್ದಾರೆ. ಕೆಲವರಿಗೆ ಹಣ ಸಹಾಯ, ಲ್ಯಾಪ್ ಟಾಪ್‌ಗಳನ್ನು ಫೇಸ್ ಬುಕ್ ದಾನಿಗಳಿಂದ ಮಾಡಿಸಿದ್ದಾರೆ.
ಫೇಸ್ ಬುಕ್‌ನಿಂದ ಹೇಗೆ ಸಹಾಯ.?
ಶಾಲೆಗಳ ಅಭಿವೃದ್ಧಿಗೆ ಫೇಸ್ ಬುಕ್ ಬಳಸುತ್ತಿರುವ ನಾರಾಯಣ, ದಿನವೂ ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಅವರ ಹುಟ್ಟುಹಬ್ಬ, ವಾರ್ಷಿಕೋತ್ಸವ, ವೀಕೆಂಡ್ ಶ್ರಮದಾನವನ್ನು ಶಾಲೆಯಲ್ಲಿ ಬಂದು ಆಚರಿಸುವಂತೆ ಕೋರಿಕೊಳ್ಳುತ್ತಾರೆ. ಶಾಲೆಗೆ ಅಗತ್ಯವಾದ, ವಿದ್ಯಾರ್ಥಿಗಳಿಗೆ ಬೇಕಾದ ಸಾಮಾಗ್ರಿಗಳ ಬಗ್ಗೆ ಮಾಹಿತಿ ಕೊಟ್ಟು ನೆರವು ಕೊಡಿಸುತ್ತಿದ್ದಾರೆ.
ನಟರಾದ ಭುವನ್, ಶೈನ್ ಶೆಟ್ಟಿ ಕೂಡ ತಮ್ಮ ಹುಟ್ಟುಹಬ್ಬ, ಸಿನಿಮಾ ಸಕ್ಸಸ್ ಅನ್ನು ಸಿದ್ದಯ್ಯನಪುರ ಶಾಲೆಯಲ್ಲಿ ಕಲಿಕಾ ಸಾಮಾಗ್ರಿ ವಿತರಿಸಿ, ಗಿಡ ನೆಟ್ಟು ಆಚರಿಸಿರುವುದು ವಿಶೇಷ.












Click it and Unblock the Notifications