ಹನೂರಿನಲ್ಲಿ ಭರ್ಜರಿ ಮಳೆ-ಅಂಗಡಿಗಳಿಗೆ ನುಗ್ಗಿದ ಚರಂಡಿ ನೀರು
ಚಾಮರಾಜನಗರ, ಮೇ, 17: ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗುತ್ತಿದೆ. ಹಾಗೆಯೇ ಇದೀಗ ಇಂದು (ಮೇ 17) ಸಂಜೆ 4:45ರ ವೇಳೆಗೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿದು ಅವಾಂತರಗಳೇ ಸೃಷ್ಟಿಯಾಗಿವೆ.
ಹನೂರು ತಾಲೂಕಿನ ಕೌದಳ್ಳಿ, ಬಂಡಳ್ಳಿ, ಅಜ್ಜಿಪುರ ಸುತ್ತಮುತ್ತ ಒಂದೂವರೆ ತಾಸು ಭರ್ಜರಿ ಮಳೆಯಾಗಿದೆ.

ಹನೂರು ತಾಲೂಕಿನಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಕೌದಳ್ಳಿ ಗ್ರಾಮದಲ್ಲಿ ಪ್ರತಿ ಮಳೆಯೂ ಅವಾಂತರ ಸೃಷ್ಟಿಸುತ್ತಿದೆ. ಕೌದಳ್ಳಿಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿರದ ಕಾರಣ, ಇಂದು ಸುರಿದ ಭರ್ಜರಿ ಮಳೆಗೆ ಚರಂಡಿ ತುಂಬಿ ಹೊಳೆಯಂತೆ ಅಂಗಡಿ-ಮಳಿಗೆಗಳಿಗೆ ನುಗ್ಗಿ ವ್ಯಾಪಾರಿಗಳನ್ನು ಪರದಾಡುವಂತೆ ಮಾಡಿದೆ.
ವಾಹನ ಸವಾರರ ಪರದಾಟ: ಸಂಜೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಭರ್ಜರಿ ಮಳೆಯಾಗಿದೆ. ಈ ಹಿನ್ನೆಲೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಕೆರೆಯಂತಾಗಿದ್ದು, ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯು ಬೇಗೂರಿನಲ್ಲಿ ಹಾದು ಹೋಗಲಿದ್ದು, ಗುಂಡ್ಲುಪೇಟೆ, ಕೇರಳ, ತಮಿಳುನಾಡಿಗೆ ತೆರಳುವವರು ಮಳೆಯ ನೀರಿನ ಮಧ್ಯೆ ವಾಹನ ಚಲಾಯಿಸಲು ಹರಸಾಹಸಪಟ್ಟರು.
ಇನ್ನು ಬೇಗೂರು, ಬೆಳಚಲವಾಡಿ ಸುತ್ತಮುತ್ತಲೂ ಕೂಡ ಭರ್ಜರಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಂತರ್ಜಲ ಮಟ್ಟ ಹೆಚ್ಚಿ ಕೊಳವೆಬಾವಿಗಳಲ್ಲಿ ಮತ್ತೇ ನೀರಿನ ಸಿಂಚನ ಹೊಮ್ಮುವ ನಿರೀಕ್ಷೆ ಮೂಡಿಸಿದೆ.












Click it and Unblock the Notifications