ಗುಂಡ್ಲುಪೇಟೆ: 2010ರಿಂದ ಇಲ್ಲಿವರೆಗೂ ಶಾಲಾ ಶೌಚಾಲಯ ಶುಚಿಗೊಳಿಸುತ್ತಿರುವ ಮುಖ್ಯ ಶಿಕ್ಷಕ, ಇದರ ಉದ್ದೇಶ ಏನು ಗೊತ್ತಾ?-ಮಾಹಿತಿ
ಚಾಮರಾಜನಗರ, ಡಿಸೆಂಬರ್, 25: ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸುವ ಘಟನೆಗಳ ನಡುವೆ ಕಳೆದ 13 ವರ್ಷಗಳಿಂದ ಶಾಲಾ ಶೌಚಾಲಯವನ್ನು ಮುಖ್ಯ ಶಿಕ್ಷಕರೊಬ್ಬರು ಶುಚಿ ಮಾಡುವ ಅಪರೂಪದ, ಮಾದರಿ ಕಾರ್ಯ ಗಡಿಜಿಲ್ಲೆಯ ಶಾಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಹಾದೇಶ್ವರಸ್ವಾಮಿ ಎಂಬವವರು ಶಾಲಾ ಶೌಚಾಲಯವನ್ನು ಸ್ವತಃ ಅವರೇ ಶುಚಿ ಮಾಡಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಪಾಠ ಮಾಡುತ್ತಿದ್ದಾರೆ.

ಮಹಾತ್ಮಾ ಗಾಂಧಿ, ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಮಹಾದೇಶ್ವರಸ್ವಾಮಿ ಸ್ವಚ್ಛತೆಯೇ ದೈವತ್ವ ಎಂದು ನಂಬಿದ್ದು, ಶೌಚಾಲಯಗಳನ್ನು ಶುಚಿಯಾಗಿಟ್ಟಿಕೊಳ್ಳಿ ಎನ್ನುವ ನಾವೇ ಶುಚಿ ಮಾಡಿದರೇ ವಿದ್ಯಾರ್ಥಿಗಳು ಅದನ್ನು ಕಲಿತುಕೊಂಡು ಮನೆಯಲ್ಲಿ ಪಾಲನೆ ಮಾಡುತ್ತಾರೆ ಎಂದು ತಾವೇ ಶೌಚಾಲಯಗಳನ್ನು ಕ್ಲೀನ್ ಮಾಡುತ್ತಾರೆ.
ಶಾಲೆಯಲ್ಲಿ ಬಾಲಕಿಯರಿಗೆ ಎರಡು, ಬಾಲಕರಿಗೆ ಎರಡು ಹಾಗೂ ಶಿಕ್ಷಕರಿಗೆ 1 ಶೌಚಾಲಯವಿದ್ದು, 5 ಶೌಚಾಲಯಗಳನ್ನು ವಾರಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕರೆದು ಅವರ ಮುಂದೆ ಶುಚಿಗೊಳಿಸುತ್ತಾರೆ. ತಮ್ಮ ಹಣದಲ್ಲಿ ಪೆನಾಯಿಲ್, ಸೋಪ್ ತಂದಿಡುವ ಮಹಾದೇಶ್ವರಸ್ವಾಮಿ ಅವರು ಶಾಲೆಯ ಪ್ರತಿ ತರಗತಿಯಲ್ಲಿ ಕನ್ನಡಿ, ಬಾಚಣಿಗೆ, ಪೌಡರ್, ವಿಭೂತಿ, ಕುಂಕುಮ ತಂದಿಟ್ಟಿದ್ದಾರೆ.
ಕಳೆದ 2010ರಲ್ಲಿ ಗಾಂಧಿ ಜಯಂತಿ ದಿನದಿಂದ ನಾನು ಈ ಕಾರ್ಯ ಆರಂಭ ಮಾಡಿದ್ದು, ಅಂದಿನಿಂದಲೂ ಇದನ್ನು ಮುಂದುವರೆಸಿಕೊಂಡು ಹೋಗಿದ್ದೇನೆ. ಶಿಕ್ಷಕರನ್ನು ನೋಡಿಯೇ ಮಕ್ಕಳು ಕಲಿಯಲಿದ್ದು, ನಾವೇ ಕ್ಲೀನ್ ಮಾಡಿದಾಗ ಮಕ್ಕಳಿಗೂ ಕೂಡ ಶುಚಿ ಪ್ರಜ್ಞೆ ಮೂಡಲಿದೆ. ಮನೆಯಲ್ಲೂ ಮುಂದೆ ಅವರ ಜೀವನದಲ್ಲೂ ಅದನ್ನು ಪಾಲನೆ ಮಾಡುತ್ತಾರೆ ಎನ್ನುತ್ತಾರೆ ಮಹಾದೇಶ್ವರಸ್ವಾಮಿ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಘಟನೆ
ಇನ್ನು ಇತ್ತೀಚೆಗಷ್ಟೇ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಯಲವಳ್ಳಿಯಯಲ್ಲಿ ನಡೆದಿತ್ತು.
ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ
ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರು ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಶಿಕ್ಷಕರ ವಿರುದ್ದ ಕ್ರಮಕ್ಕೆ ಪೋಷಕರ ಆಗ್ರಹ
ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇನ್ನು ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಮಕ್ಕಳಿಗೆ ಕಿರುಕುಳ ನೀಡಿರುವ ಶಿಕ್ಷಕರ ವಿರುದ್ದ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದರು.
ಪ್ರಾಂಶುಪಾಲ, ವಾರ್ಡನ್, ಶಿಕ್ಷಕ ಅಮಾನತು
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರಾದ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಮುನಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜ್, ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಇದೊಂದು ತೀರಾ ಗಂಭೀರವಾದ ವಿಚಾರ. ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ದೊಡ್ಡ ಲೋಪ ಎಸಗಿದ್ದಾರೆ. ಆದ್ದರಿಂದ ಅಮಾನತುಗೊಳಿಸಿ ತನಿಖೆ ನಡೆಸಲು ನಿರ್ದೇಶನ ನೀಡಿದ್ದೇನೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದರು.
ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ನ್ಯಾಯಾಧೀಶರಾದ ಸುನೀಲ್ ಹೊಸಮಣಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಮಕ್ಕಳ ಬಳಿಯೂ ಸಮಸ್ಯೆಯನ್ನು ವಿಚಾರಿಸಿದ್ದಾರೆ. ಪ್ರತಿ ಕೊಠಡಿಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನ್ಯಾಯಾಧೀಶರು ಮಕ್ಕಳಿಂದ ದೂರು ಪಡೆದುಕೊಂಡರು ಎಂದು ತಿಳಿದುಬಂದಿದೆ.












Click it and Unblock the Notifications