ಹನೂರು: ಕಾಂಗ್ರೆಸ್ ಕಾರ್ಯಕರ್ತರು ಸಚಿವ ಎಚ್.ಸಿ.ಮಹಾದೇವಪ್ಪನವರ ಆ ಒಂದು ಮಾತಿಗೆ ಮುನಿಸಿಕೊಂಡಿದ್ದೇಕೆ?
ಚಾಮರಾಜನಗರ, ಮಾರ್ಚ್, 13: ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಹನೂರು ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಆರ್ ಮಂಜುನಾಥ್ ಅವರು ಮುಂದಿನ ದಿನಗಳಲ್ಲಿ ನಮ್ಮ ಜೊತೆ ಕೈಜೋಡಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನು ಈ ಹೇಳಿಕೆ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ನರೇಂದ್ರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಮುಖಂಡರ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ (ಮಾರ್ಚ್ 13) ನಡೆದ ಗ್ಯಾರಂಟಿ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್.ಸಿ. ಮಹದೇವಪ್ಪ ಮಾತನಾಡುವ ವೇಳೆ, ಜಿಲ್ಲೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನರೇಂದ್ರ ರವರು ಅಲ್ಪ ಮತಗಳಿಂದ ಪರಾಭವಗೊಂಡಿದ್ದಾರೆ. ಶಾಸಕರಾಗಿರುವ ಮಂಜುನಾಥ್ ರವರು ಮುಂದಿನ ದಿನಗಳಲ್ಲಿ ನಮ್ಮ ಜೊತೆ ಕೈಜೋಡಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳಿಗೆ ಆತ್ಮಸ್ಥರ್ಯ ಕುಗ್ಗಿಸಿದಂತಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಕಳೆದ 50 ವರ್ಷಗಳಿಂದ ದಿ.ರಾಜುಗೌಡರ ಕುಟುಂಬ ಹನೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿಯೂ ಹನೂರು ವಿಧಾನಸಭಾ ಕ್ಷೇತ್ರದಿಂದ ಅತಿಹೆಚ್ಚಿನ ಮತ ಕೊಡಿಸುವಲ್ಲಿ ನರೇಂದ್ರ ಅವರು ಶ್ರಮವಹಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಎಲ್ಲರೂ ಶ್ರಮಿಸುತ್ತೇವೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಹದೇವಪ್ಪ ನಮ್ಮ ಪಕ್ಷದ ಮಾಜಿ ಶಾಸಕ ಆರ್ ನರೇಂದ್ರ ಅವರಿಗೆ ಮನ್ನಣೆ ನೀಡಬೇಕೆ ಹೊರತು, ಬೇರೆ ಪಕ್ಷದಿಂದ ಗೆದ್ದಿರುವ ಶಾಸಕರಿಗೆ ಯಾವುದೇ ಕಾರಣಕ್ಕೂ ಮನ್ನಣೆ ನೀಡಬಾರದು.
ತಾವು ಲೋಕೋಪಯೋಗಿ ಸಚಿವರಾಗಿ ಐದು ವರ್ಷ ಉತ್ತಮ ಸೇವೆ ಸಲ್ಲಿಸಿದ್ದೀರಿ. ಆದರೆ ತಾವು ಸಹ ಕಳೆದ ಬಾರಿಯ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೀರಿ, ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷ ನಿಮ್ಮನ್ನು ಕಡೆಗಣಿಸಿಲ್ಲ. ಅದೇ ರೀತಿ ಆರ್ ನರೇಂದ್ರ ಅವರು ಸತತವಾಗಿ ಮೂರು ಬಾರಿ ಶಾಸಕರಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ನಮ್ಮ ನಾಯಕರಿಗೂ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಮಹದೇವಪ್ಪನವರ ಹೇಳಿಕೆ ಹನೂರು ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ನೋವನ್ನುಂಟು ಮಾಡಿದೆ. ನಿಷ್ಠಾವಂತ ಕಾರ್ಯಕರ್ತರು ಪಕ್ಷ ಬಿಡುವ ಯೋಚನೆಯಲ್ಲಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮಂಜುನಾಥ್ ಅವರೆ ನಮಗೆ ಪ್ರತಿಸ್ಪರ್ಧಿ, ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿ ಅವರ ಜೊತೆ ಹೊಂದಾಣಿಕೆ ರಾಜಕಾರಣ ಮಾಡಲು ನಮ್ಮ ಕಾರ್ಯಕರ್ತರಿಗೆ ಸಾಧ್ಯವಾಗುವುದಿಲ್ಲ.
ಇಡೀ ರಾಜ್ಯದಲ್ಲಿ ಪಕ್ಷ ನಿಷ್ಠೆಗೆ ಹೆಸರಾದ ಕುಟುಂಬ ರಾಜುಗೌಡರವರ ಕುಟುಂಬ. ಇದನ್ನು ಎಲ್ಲಿ ಬೇಕಾದರೂ ಎದೆತಟ್ಟಿ ಹೇಳುತ್ತೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟೇ ಒತ್ತಡ, ಆಮಿಷ ಒಡ್ಡಿದರೂ ನಮ್ಮ ನಾಯಕರಾದ ಆರ್ ನರೇಂದ್ರ ಅವರು ಪಕ್ಷನಿಷ್ಠೆ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ನಾಯಕರ ಅಭಿಪ್ರಾಯ ಪಡೆದದೇ ಮುಂದಿನ ಕ್ರಮ ಕೈಗೊಳ್ಳಬೇಕು. ನಾವು ಅವರ ಹಿಂಬಾಲಕರಾಗಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದರು.












Click it and Unblock the Notifications