ಕೇರಳದಲ್ಲಿ ಮುಂದುವರೆದ ಭಾರೀ ಮಳೆ: ಗುಂಡ್ಲುಪೇಟೆ-ಕೇರಳ ರಸ್ತೆ ಸಂಪರ್ಕ ಬಂದ್
ಚಾಮರಾಜನಗರ, ಜುಲೈ, 30: ಭಾರೀ ಮಳೆ ಹಿನ್ನೆಲೆ ಕೇರಳದ ವೈನಾಡು ಭಾಗದಲ್ಲಿ ಭೂಕುಸಿತ ಸಂಭವಿಸಿ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ-ಕೇರಳ ರಸ್ತೆ ಸಂಪರ್ಕ ಕಡಿತವಾಗಿದೆ.
ಭಾರೀ ಮಳೆಯಿಂದ ಕೇರಳದ ಮುತ್ತಂಗ ಚೆಕ್ ಪೋಸ್ಟ್‌ನಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಇಂದು (ಜುಲೈ 30) ಸಂಜೆ 5 ಗಂಟೆಯಿಂದಲೇ ಗುಂಡ್ಲುಪೇಟೆಯಿಂದ ವೈನಾಡು, ಬತ್ತೇರಿಗೆ ತೆರಳುವ ರಸ್ತೆ ಮಾರ್ಗ ಬಂದ್ ಮಾಡಲಾಗಿದೆ. ಹಾಗೆಯೇ ತಮಿಳುನಾಡಿನ ಮೂಲಕ ಕೇರಳಕ್ಕೆ ತೆರಳಲು ಬದಲಿ ಮಾರ್ಗವನ್ನು ಸೂಚಿಸಲಾಗಿದೆ.

ವೈನಾಡಿನಲ್ಲಿ ಗುಡ್ಡ ಕುಸಿತ ಪ್ರಕರಣ ಹಿನ್ನೆಲೆ ಚಾಮರಾಜನಗರ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ ಮಾಡಲಾಗಿದೆ. ವೈನಾಡು, ಬತ್ತೇರಿ ಭಾಗಕ್ಕೆ ಕೂಲಿ ಅರಸಿ ಹೋಗಿರುವ ಚಾಮರಾಜನಗರ, ಗುಂಡ್ಲುಪೇಟೆ ಜನರಿಗೆ ಅನುಕೂಲ ಆಗುವ ದೃಷ್ಟಿಯಿಂದ ಈ ಸಹಾಯವಾನಿಯನ್ನು ಆರಂಭಿಸಲಾಗಿದೆ.
ಇನ್ನು ಈಗಾಗಲೇ ಗುಂಡ್ಲುಪೇಟೆ ತಹಶಿಲ್ದಾರ್ ತಂಡ ಕೇರಳಕ್ಕೆ ತೆರಳಿದ್ದು, ಗುಡ್ಡ ಕುಸಿತದಲ್ಲಿ ಗಡಿಜಿಲ್ಲೆ ಜನರು ಸಿಲುಕಿರುವ, ನಿರಾಶ್ರಿತರಾಗಿರುವ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸ ಆರಂಭಿಸಿದೆ ಎಂದು ತಿಳಿದುಬಂದಿದೆ.
ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಪ್ರವಾಸ, ಜೀವನೋಪಾಯ ಹಾಗೂ ಇನ್ನಿತರೆ ಕಾರಣಕ್ಕೆ ತೆರಳಿರುವವರ ಮಾಹಿತಿಯನ್ನು ಅವರ ಕುಟುಂಬಸ್ಥರು ತಿಳಿಸಿದ್ದಲ್ಲಿ ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ತೆರೆದಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08226-223163, 08226-223161, 08226-223160 ಹಾಗೂ ಮೊಬೈಲ್ ಸಂಖ್ಯೆ 9740942901ಗೆ ಸಂಪರ್ಕಿಸಬಹುದಾಗಿದೆ.
ಸಾಗರ ರೂಪ ತಾಳಿದ ಕಾವೇರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆಯುತ್ತಿರುವ ಪರಿಣಾಮ ಅನೇಕ ಜಲಮೂಲಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗೆಯೇ ಭಾರತದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಕಾವೇರಿ ಅಕ್ಷರಶಃ ರುದ್ರ ತಾಂಡವ ಆಡುತ್ತಿದ್ದು, ಸಾಗರದ ಮಾದರಿ ಇಡೀ ಪರಿಸರ ಗೋಚರಿಸುತ್ತಿದೆ.
ಕಲ್ಲು ಬಂಡೆಗಳ ಮೇಲೆ ಧುಮ್ಮಿಕ್ಕುತ್ತಿದ್ದ ನೀರು ಈಗ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಧುಮ್ಮಿಕ್ಕುವ ದೃಶ್ಯ ಕಣ್ಮರೆಯಾಗಿದ್ದು, ಜಲಪಾತವೇ ಕಾವೇರಿ ಆರ್ಭಟಕ್ಕೆ ಮುಳುಗಡೆಯಾಗಿದೆ. ನಯಾಗರ ಜಲಪಾತದಂತೆ ಕಲ್ಲು ಬಂಡೆಗಳಿಂದ ಧುಮ್ಮಿಕ್ಕುತ್ತಿದ್ದ ನೀರು ಈಗ ಡ್ರೋಣ್ ದೃಶ್ಯದಲ್ಲಿ ಸಾಗರದಂತೆ ಗೋಚರಿಸುತ್ತಿದ್ದು, 1.20 ಲಕ್ಷ ಕ್ಯೂಸೆಕ್ ನೀರಿನ ಹರಿವಿದ್ದು, ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಕರ್ನಾಟಕದ ರೀತಿ ತಮಿಳುನಾಡಿನಲ್ಲೂ ಕಾವೇರಿ ಪ್ರವಾಹ ಭೀತಿ ಎದುರಾಗಿದ್ದು, ಧರ್ಮಪುರಿ, ಕೃಷ್ಣಗಿರಿ, ಸೇಲಂ, ಈರೋಡ್, ನಾಮಕ್ಕಲ್, ಕರೂರ್, ತಿರುಚಿ, ತಂಜಾವೂರು ಭಾಗಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಲ್ಲಿನ ಸಿಡಬ್ಲೂಸಿ ಎಂಜಿನಿಯರ್ ಪನ್ನೀರಸೆಲ್ವಂ ಹೇಳಿದ್ದಾರೆ.
ಕೊಳ್ಳೇಗಾಲ ಭಾಗದಲ್ಲಿ ಪ್ರವಾಹ ಭೀತಿ: ಕಾವೇರಿ ಹೊರಹರಿವು ಹೆಚ್ಚಾದಂತೆ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಸರಗೂರು, ಅಗ್ರಹಾರ, ಹಳೇ ಹಂಪಾಪುರ ಸೇರಿದಂತೆ 9 ಊರುಗಳಲ್ಲಿ ಆತಂಕ ಎದುರಾಗಿದ್ದು, ಕಾಳಜಿ ಕೇಂದ್ರಗಳಿಗೆ ಜನರೆಲ್ಲರೂ ಬರುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಜಾನುವಾರುಗಳಿಗಾಗಿ ಗೋಶಾಲೆ ತೆರೆಯಲಾಗುತ್ತಿದೆ.












Click it and Unblock the Notifications