ಬಿಸಿಲಿಗೂ ಬತ್ತದ ಉತ್ಸಾಹ, ಗುಂಡ್ಲುಪೇಟೆಯಲ್ಲಿ ಶೇಕಡಾ 75 ಮತದಾನ

Subscribe to Oneindia Kannada

ಗುಂಡ್ಲುಪೇಟೆ, ಏಪ್ರಿಲ್ 9: ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಇಂದು ಮತದಾನ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಗುಂಡ್ಲುಪೇಟೆ ಕಣ ಪ್ರತಿಷ್ಠೆಯಾಗಿದ್ದು ಎರಡೂ ಪಕ್ಷಗಳು ಶಕ್ತಿ ಮೀರಿ ಪ್ರಚಾರ ನಡೆಸಿದ್ದು ಹಣದ ಹೊಳೆಯನ್ನೇ ಹರಿಸಿವೆ.

ಒಟ್ಟು 250 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 1,375 ಚುನಾವಣಾ ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. 270 ವೀಕ್ಷಕರು ಚುನಾವಣೆಯ ಮೇಲೆ ಕಣ್ಣಿಡಲು ನೇಮಕವಾಗಿದ್ದಾರೆ. ಇದೇ ಮೊದಲ ಬಾರಿಗೆ ಗುಂಡ್ಲುಪೇಟೆಯಲ್ಲಿ ಮತದಾನ ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಮತದಾರರು ಮತದಾನ ಮಾಡಿದ ನಂತರ ಮತ ಸರಿಯಾಗಿ ಬಿದ್ದಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು.

Gundlupe Live: By-poll Voting begins at 7 am

ಇಲ್ಲಿ ಬಿಜೆಪಿಯ ನಿರಂಜನ್ ಕುಮಾರ್ ಮತ್ತು ಕಾಂಗ್ರೆಸ್ ನ ಗೀತಾ ಮಹದೇವ ಪ್ರಸಾದ್ (ಡಾ ಮೋಹನ್ ಕುಮಾರಿ) ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಗುಂಡ್ಲುಪೇಟೆ ಚುನಾವಣೆಯ ಮತದಾನಕ್ಕೆ ಸಂಬಂಧಿಸಿದ ಲೈವ್ ಅಪ್ಡೇಟ್ಸ್ ಇಲ್ಲಿದೆ.

6.30: ಬಿಸಿಲಿಗೂ ಜನ ಬಗ್ಗದೆ ಮತದಾನದಲ್ಲಿ ಪಾಲ್ಗೊಂಡಿದ್ದರಿಂದ ಗುಂಡ್ಲುಪೇಟೆಯಲ್ಲೂ ಭರ್ಜರಿ ಮತದಾನವಾಗಿದೆ. ಶೇಕಡಾ 75 ರಷ್ಟು ಜನ ತಮ್ಮ ಮತ ಚಲಾಯಿಸಿದ್ದಾರೆ.

4.30: ಇತ್ತೀಚಿನ ಮಾಹಿತಿಗಳು ಬಂದಾಗ ಗುಂಡ್ಲುಪೇಟೆಯಲ್ಲಿ ಶೇಕಡಾ 55 ಮತದಾನ ನಡೆದ ವರದಿಯಾಗಿದೆ. ಈ ಮೂಲಕ ಮತದಾನ 50ರ ಗಡಿ ದಾಟಿದೆ.

1.45: ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇಕಡಾ 41.6 ರಷ್ಟು ಮತದಾನವಾಗಿದೆ ಎಂಬ ವರದಿಗಳು ಬರುತ್ತಿವೆ.

1.30: ಕಂದೇಗಾಲ ಗ್ರಾಮದ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.ಇದರಿಂದ ಮಧ್ಯಾಹ್ನ ಒಂದು ಗಂಟೆಯಿಂದಲೇ ಮತದಾನ ಸ್ಥಗಿತಗೊಂಡಿದೆ.

1.15: ಗುಂಡ್ಲುಪೇಟೆಯಲ್ಲಿ ಹಣ ಹಂಚುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮಾರಶೆಟ್ಟಿ ಎಂಬಾತನ ಮತಗಟ್ಟೆಯ ಮುಂಭಾಗವೇ ಹಣದ ಆಮಿಷ ತೋರಿಸಿದ್. ಬಂಧಿತನಿಂದ 5 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

1.00:ಮತ ಚಲಾಯಿಸಿ ಮನೆಗೆ ತೆರಳಿದ ಹಂಗಳ ಗ್ರಾಮದ ವೃದ್ ದೇವಮ್ಮ (80) ವರುಷ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಅವರು ಹಂಗಳ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದರು. [ಗುಂಡ್ಲುಪೇಟೆಯ ಬೇಗೂರಿನಲ್ಲಿ ಕೈ-ಕಮಲ ಕಾರ್ಯಕರ್ತರ ಸಂಘರ್ಷ]

Gundlupe Live: By-poll Voting begins at 7 am

11.30: ಇಲ್ಲಿಯವರೆಗೆ ಶೇಕಡಾ 29.2 ರಷ್ಟು ಮತದಾನವಾಗಿದೆ. ಬಿರು ಬಿಸಿಲನ್ನೂ ಲೆಕ್ಕಿಸಿದೆ ಜನ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

10.15: ಇಲ್ಲಿನ ಬೇಗೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಣ್ಣ ಸಂಘರ್ಷ ಏರ್ಪಟ್ಟಿದ್ದು ವರದಿಯಾಗಿದೆ. 18, 19, 20 ಮತಗಟ್ಟೆಯಲ್ಲಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

10.00: 9.30ರ ವೇಳೆಗೆ ಗುಂಡ್ಲುಪೇಟೆಯಲ್ಲಿ ಶೇಕಡಾ 17 ರಷ್ಟು ಮತದಾನ ನಡೆದ ವರದಿಯಾಗಿದೆ. ಬಿರು ಬಿಸಿಲಿನ ನಡುವೆಯೂ ಮತದಾರರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. [ನಂಜನಗೂಡಲ್ಲಿ ಗೊಂದಲ ಮೂಡಿಸಿದ ಚುನಾವಣಾ ಆಯೋಗದ ಸುತ್ತೋಲೆ]

9.25: ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಮತ ಚಲಾವಣೆ. ಗವಿ ಸಿದ್ದೇಶ್ವರ್ ದೇವಲಾಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಸ್ವಗ್ರಾಮ ಚೌಡಹಳ್ಳಿಯಲ್ಲಿ ಮತ ಚಲಾವಣೆ.

9.20: ತ್ರಿಯಂಬಕಪುರ, ಭೀಮನಬೀಡು, ಮಡಹಳ್ಳಿ ಮತಗಟ್ಟೆಗಳಲ್ಲಿ ಇನ್ನು ಆರಂಭವಾಗದ ಮತದಾನ ಪ್ರಕ್ರಿಯೆ. ಮತಯಂತ್ರ ಸರಿಪಡಿಸಲು ಅಧಿಕಾರಿಗಳ ಹರ ಸಾಹಸ. ಮತಗಟ್ಟೆಯ ಮುಂಭಾಗ ಮತದಾರರು ಸಾಲುಗಟ್ಟಿದ್ದಾರೆ.

Gundlupe Live: By-poll Voting begins at 7 am

9.05: "ಪತಿಯೊಂದಿಗೆ 7 ಬಾರಿ ಮತ ಚಲಾಯಿಸಿದ್ದೆ. ಇದು ಅವರಿಲ್ಲದ ಮತ ಚಲಾವಣೆ .ನನಗಿದು ಬೇಸರ ಮೂಡಿಸಿದೆ," ಮತದಾನದ ನಂತರ ಗೀತಾ ಮಹದೇವ ಪ್ರಸಾದ್ ಪ್ರತಿಕ್ರಿಯೆ.

9.00: ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ರಿಂದ ಮತದಾನ. ಮತಗಟ್ಟೆ ಸಂಖ್ಯೆ 16, ಹಾಲಳ್ಳಿಯಲ್ಲಿ ಮತದಾನ ಮಾಡಿದ ಗೀತಾ ಮಹದೇವ ಪ್ರಸಾದ್. ಮತದಾನಕ್ಕೂ ಮುನ್ನ ಪತಿ ಮಹದೇವ ಪ್ರಸಾದ್ ಸಮಾಧಿಗೆ ಪೂಜೆ ಸಲ್ಲಿಸಿದ ಗೀತಾ. ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮತದಾನ.

8.45: ಗುಂಡ್ಲುಪೇಟೆಯಲ್ಲಿ ಏಳು ಮಂದಿ ಕಣಕ್ಕಿಳಿದಿದ್ದಾರೆ. ಬಿಜೆಪಿಯ ನಿರಂಜನ್‍ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿರಂಜನ್‍ಕುಮಾರ್ ಗೆ ಇದು ಮೂರನೇ ಚುನಾವಣೆಯಾಗಿದ್ದರೆ, ಗೀತಾಗೆ ಇದು ಮೊದಲ ಚುನಾವಣೆಯಾಗಿದೆ. ಇಲ್ಲಿ ಇದುವರೆಗೆ ಬಿಜೆಪಿ ಖಾತೆ ತೆರೆದಿಲ್ಲ.

8.40:ಗುಂಡ್ಲುಪೇಟೆಯಲ್ಲಿ 250 ಮತಗಟ್ಟೆಗಳಿದ್ದು, 33 ಸೂಕ್ಷ್ಮ ಹಾಗೂ 39 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗ ಗುರುತಿಸಿದೆ. ಒಟ್ಟು 2,00,862 ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಬರೆಯಲಿದ್ದಾರೆ.

8.10: ಎರಡು ಮತಗಟ್ಟೆಗಳ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಮತದಾನ ವಿಳಂಬವಾಗಿದೆ. ಮತಗಟ್ಟೆ ಸಂಖ್ಯೆ 194 ಭೀಮನಬೀಡು ಹಾಗೂ ಮತಗಟ್ಟೆ ಸಂಖ್ಯೆ 241 ಮಡಹಳ್ಳಿಯ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ದೋಷ ಸರಿಪಡಿಸಲು ಚುನಾವಣಾ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. [ಕೊರಳಲ್ಲಿ ಕಾಂಗ್ರೆಸ್ ಶಾಲು, ನೀತಿ ಸಂಹಿತೆ ಉಲ್ಲಂಘಿಸಿದ ಕಳಲೆ]

7.30: ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯ ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಜನ ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಮತಗಟ್ಟೆಗಳ ಮುಂದೆ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gundlupet constituency by-election voting begins from 7am today. Here are the live updates of voting.
Please Wait while comments are loading...