ಚಾಮರಾಜನಗರ: ಮದುವೆಯ ಹಿಂದಿನ ದಿನವೇ ಪ್ರೇಮಿ ಪರಾರಿ, ಪ್ರೇಯಸಿ ಮಾಡಿದ್ದೇನು ಗೊತ್ತಾ?
ಚಾಮರಾಜನಗರ, ಡಿಸೆಂಬರ್, 11: ಮದುವೆ ಹಿಂದಿನ ದಿನ ವರನೋರ್ವ ಕೈಕೊಟ್ಟು ಪರಾರಿಯಾದ ಹಿನ್ನೆಲೆ ಮದುವೆಗಾಗಿ ತಿಂಗಳುಗಟ್ಟಲೇ ಕಾದು ಬೇಸತ್ತ ಯುವತಿ ಹುಡುಗನ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ನಡೆದಿದೆ.
ಕೊಳ್ಳೇಗಾಲದ ಶಂಕನಪುರ ಬಡಾವಣೆಯ ನಿವಾಸಿ ದಿವ್ಯಶ್ರೀ ಪ್ರತಿಭಟನೆ ಮಾಡಿದ ಯುವತಿಯಾಗಿದ್ದು, ಕುಂತೂರು ಗ್ರಾಮದ ಮಹೇಶ್ ಎಂಬಾತ ಮದುವೆ ಹಿಂದಿನ ದಿನ ಪರಾರಿಯಾದ ವರನಾಗಿದ್ದಾನೆ.

ಬೆಂಗಳೂರಿನಲ್ಲಿ ಪ್ರೇಮ್ ಕಹಾನಿ
ಬೆಂಗಳೂರಿನಲ್ಲಿ ದಿವ್ಯಾಶ್ರೀ ಹಾಗೂ ಮಹೇಶ್ ನಡುವೆ ಪರಿಚಯವಾಗಿ ಪ್ರೇಮಾಂಕುರ ಆಗಿತ್ತು. ಇವರಿಬ್ಬರು ಕಳೆದ 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹಾಗೆಯೇ ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಒಟ್ಟಾಗಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಯುವತಿ ನನ್ನನ್ನು ಮದುವೆಯಾಗು ಎಂದು ಹೇಳಿದ್ದಕ್ಕೆ ಇನ್ನು ಮೂರು ತಿಂಗಳು ಇಬ್ಬರು ಮದುವೆ ಆಗೋಣ ಎಂಬ ಭರವಸೆಯನ್ನು ಮಹೇಶ್ ನೀಡಿದ್ದ.
ಆದರೆ ಮಹೇಶ್ ಮಾತಿಗೆ ನಡೆದುಕೊಳ್ಳದ ಕಾರಣ ತನ್ನ ಪಾಲಕರ ಬಳಿ ಯುವತಿ ಅಳಲು ತೋಡಿಕೊಂಡಿದ್ದಳು. ಅದರಂತೆ ಇತ್ತೀಚೆಗಷ್ಟೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಮತ್ತು ಯುವತಿ ಪಾಲಕರು ಎರಡು ಊರಿನ ಯಜಮಾನರು ಒಂದೆಡೆ ಸೇರಿ ಪಂಚಾಯಿತಿ ಮಾಡುವ ಮೂಲಕ ಇವರಿಬ್ಬರಿಗೂ ಚಿಲಕವಾಡಿ ದೇವಾಲಯದಲ್ಲಿ ಮದುವೆ ನಿಶ್ಚಯ ಮಾಡಿದ್ದರು.
ಮದುವೆ ಹಿಂದಿನ ದಿನ ನಾಪತ್ತೆ
ಅದರಂತೆ ಎರಡು ಮನೆಯವರು ಒಪ್ಪಿ ಕಳೆದ ನವೆಂಬರ್ 27ರಂದು ಚಿಲಕವಾಡಿ ಬೆಟ್ಟದಲ್ಲಿ ಮದುವೆ ನಿಶ್ಚಯ ಮಾಡಲಾಗಿತ್ತು. ವಧುವಿಗೆ ತಾಳಿ, ಸೀರೆ, ಕಾಲುಂಗುರ ತೆಗೆದು ಸಂಭ್ರಮದಲ್ಲಿ ಇದ್ದಾಗಲೇ ನವೆಂಬರ್ 26ರಂದು ಮಹೇಶ್ ತನ್ನ ಫೋನ್ ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಮಾಂಬಳ್ಳಿ ಠಾಣೆಗೆ ದಿವ್ಯಶ್ರೀ ದೂರು ಕೂಡ ಕೊಟ್ಟಿದ್ದಳು. ಆದರೆ, ತಿಂಗಳು ಆದರೂ ವರನ ಸುಳಿವಿಲ್ಲದಿದ್ದರಿಂದ ಬೇಸತ್ತು ಆತನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಸದ್ಯ, ಪೊಲೀಸರು ಮಹೇಶ್‌ನನ್ನು ಹುಡುಕಿ ಕೊಡಲಾಗುವುದು ಎಂದು ಸಮಾಧಾನ ಪಡಿಸಿ ಆಕೆಯನ್ನು ಶಂಕನಪುರ ಗ್ರಾಮಕ್ಕೆ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮದುವೆ ಬೇಡ ಎಂದ ಮದುಮಗಳು
ಹಾಗೆಯೇ ಹಸೆಮಣೆ ಏರಿ ತಾಳಿ ಕಟ್ಟುವ ವೇಳೆ ಮದುವೆಗಳು ತಾಳಿ ಕಟ್ಟಿಸಿಕೊಳ್ಳುವುದನ್ನು ನಿರಾಕರಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲೂ ನಡೆದಿತ್ತು.
ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುಮಗ ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಮದುಮಗಳು ನನಗೆ ಮದುವೆ ಬೇಡ ಎಂದಿದ್ದಾಳೆ. ಇದರಿಂದ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿರುವ ಮದುವೆ ರದ್ದಾಗಿದೆ.
ಆರತಕ್ಷತೆ ಸೇರಿದಂತೆ ಮದುವೆ ಎಲ್ಲಾ ಶಾಸ್ತ್ರಗಳು ಮುಗಿದು ತಾಳಿ ಕಟ್ಟುವ ಸಮಯದಲ್ಲಿ ಈ ಘಟನೆ ನಡೆದಿದೆ. ಮದುಮಗ ಇನ್ನೇನು ಮುಹೂರ್ತಕ್ಕೆ ಸಮಯ ಆಗಿದೆ, ತಾಳಿ ಕಟ್ಟು ಅಂತಾ ತಿಳಿಸಿದಾಗ, ತಾಳಿ ಕೈಯ್ಯಲ್ಲಿ ಹಿಡಿದುಕೊಂಡು ವಧು ಕುತ್ತಿಗೆಗೆ ಕಟ್ಟೋದಕ್ಕೆ ಮುಂದಾಗಿದ್ದಾನೆ. ವರ ಮುಂದೆ ತಂದಂತ ತಾಳಿಯನ್ನು ವಧು ಕೈ ಅಡ್ಡ ಹಿಡಿದು ಬೇಡ ಎಂಬುದಾಗಿ ತಿಳಿಸಿದ್ದಾಳೆ.
ಸಂಬಂಧಿಕರು ಯಾಕಮ್ಮ ಹೀಗೆ ಮಾಡ್ತಿದ್ದೀಯ ಅಂತಾ ಕೇಳಿದಾಗ ನನಗೆ ಮದುವೆ ಇಷ್ಟವಿಲ್ಲ. ಈ ಮದುವೆ ಬೇಡ ಎಂಬುದಾಗಿ ವಧು ನಿರಾಕರಿಸಿದ್ದಾಳೆ. ಆಕೆಯನ್ನು ಕುಟುಂಬಸ್ಥರು ಎಷ್ಟೇ ಮನವೊಲಿಕೆಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಮದುವೆ ರದ್ದುಗೊಂಡಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ದಿಕ್ಕು ತೋಚದಂತೆ ವಾಪಸ್ ತೆರಳಿದ್ದಾರೆ. ಇನ್ನು ಪ್ರಕರಣ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications