Ugadi Jatra 2024: ಮಾದಪ್ಪನ ಬೆಟ್ಟದಲ್ಲಿ ವೈಭವದಿಂದ ನಡೆದ ಯುಗಾದಿ ರಥೋತ್ಸವ
ಚಾಮರಾಜನಗರ, ಏಪ್ರಿಲ್, 09: ಹನೂರು ತಾಲೂಕಿನ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೊನೆಯ ದಿನವಾದ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ವಿವಿಧ ಬಗೆಯ ಪುಷ್ಪಗಳು, ತಳಿರು ತೋರಣ, ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿತ್ತು.

ರಥೋತ್ಸವಕ್ಕೂ ಮುನ್ನ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕ ವೃಂದದವರು ದೇಗುಲದ ಗರ್ಭಗುಡಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೇರಿನ ಬಳಿ ಧಾರ್ಮಿಕ ವಿಧಿ ವಿಧಾನ ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವ ಮೂರ್ತಿ ಇರಿಸಿ ಬೂದುಕುಂಬಳಕಾಯಿ ದೃಷ್ಟಿ ತೆಗೆದು ಮಹಾಮಂಗಳಾರತಿ ಹಾಗೂ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ಬೆಲ್ಲದ ಆರತಿ ಬೆಳಗಿದ ನಂತರ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಿಪಾನಿ, ಛತ್ರಿ, ಚಾಮರ, ನಂದಿ ದ್ವಜ ಹಾಗೂ ಮಂಗಳವಾದ್ಯದೊಂದಿಗೆ ತೇರನ್ನು ಎಳೆಯಲಾಯಿತು. ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವೂ ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು. ಭಕ್ತರು ತೇರಿಗೆ ಹಣ್ಣು ಜವನ, ದವಸ ಧಾನ್ಯಗಳನ್ನು ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು. ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.












Click it and Unblock the Notifications