ಸಂತೇಮರಳ್ಳಿ ಸರ್ಕಲ್ ನಲ್ಲಿ ಅಡ್ಡಾದಿಡ್ಡಿ ಚಲಿಸಿದ ಬಸ್
ಚಾಮರಾಜನಗರ, ಅಕ್ಟೋಬರ್ 10 : ಬ್ರೇಕ್ ವಿಫಲಗೊಂಡ ಸಾರಿಗೆ ಬಸ್ ಅಡ್ಡಾದಿಡ್ಡಿ ಚಲಿಸಿ, ಬೈಕ್ ಸೇರಿದಂತೆ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಸಂತೇಮರಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಹಲವು ಬೈಕ್ ಗಳು ಜಖಂಗೊಂಡಿವೆ.
ಈ ಘಟನೆ ಸೋಮವಾರ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಂತೇಮರಹಳ್ಳಿಯ ಬಸ್ ನಿಲ್ದಾಣ ಬಳಿಯ ವೃತ್ತದಲ್ಲಿ ನಡೆದ ಈ ಘಟನೆ ಜನರಲ್ಲಿ ಭಯವನ್ನುಂಟು ಮಾಡಿತ್ತು.

ಸಾರಿಗೆ ಬಸ್ (ಕೆಎ 09 ಎಫ್ 3759) ಸಂತೇಮರಹಳ್ಳಿಯ ವೃತ್ತದಲ್ಲಿ ಕೊಳ್ಳೇಗಾಲ ಮಾರ್ಗಕ್ಕೆ ತಿರುಗುವ ವೇಳೆ ಬ್ರೇಕ್ ವಿಫಲಗೊಂಡು ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಹೀಗಾಗಿ ಬಸ್ ಅಡ್ಡಾದಿಡ್ಡಿ ಚಲಿಸಿದ್ದು, ಪರಿಣಾಮ ರಸ್ತೆಯಲ್ಲಿ ಎದುರಿಗೆ ಸಿಕ್ಕ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸವಾರ ನೆಲಕ್ಕುರುಳಿದ್ದಾನೆ. ಬಳಿಕ ಮುಂದೆ ತೆರಳಿ ದಂಪತಿ ಸಾಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದನ್ನು ಕಂಡು ಕೆಲವರು ಸ್ಥಳದಿಂದ ಓಡಿ, ಜೀವ ಉಳಿಸಿಕೊಂಡಿದ್ದಾರೆ.

ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಗಳು ಜಖಂಗೊಂಡಿವೆ. ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಚಾಮರಾಜನಗರದ ನಿವಾಸಿಯಾದ ಮಹದೇವಶೆಟ್ಟಿ, ಶಿವಮಲ್ಲು ಮತ್ತು ಪದ್ಮಿನಿ ದಂಪತಿ, ಯರಯೂರಿನ ನಿವಾಸಿಯೊಬ್ಬರು ಸೇರಿದಂತೆ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications