ಬಂಡೀಪುರ ಬಳಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಹತ್ವದ ಮಾಹಿತಿ
ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ವಿಚಾರ ಆಗಾಗ ಮುನ್ನಲೆಗೆ ಬರುತ್ತಿರುತ್ತದೆ. ಈ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಪ್ರಾಣಿಗಳು ಕಂಡ ತಕ್ಷಣ ಅವುಗಳ ಜೊತೆಗೆ ಸೆಲ್ಫೀ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದರಿಂದ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಮತ್ತೊಂದೆಡೆ ಪ್ರಾಣಿಗಳಿಗೂ ಸಹ ಹಿಂಸೆ ಮಾಡಿದಂತಾಗುತ್ತದೆ. ಈಗಾಗಲೇ ಇಂತಹ ಘಟನೆಗಳು ನಡೆದಿದ್ದು, ಇದೀಗ ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಬಂಡೀಪುರದ ಅರಣ್ಯದ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರು ಫೋಟೋ ಹಾಗೂ ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ಈ ವೇಳೆ ಪೋಸ್ ಕೊಡಲು ಚೇಷ್ಟೆಗಳನ್ನು ಮಾಡುವ ಮೂಲ ಕಹುಚ್ಚಾಟ ಮೆರೆಯುತ್ತಿದ್ದಾರೆ. ಇದರಿಂದ ಪ್ರಯಾಣಿಕರ ಪ್ರಾಣಕ್ಕೆ ಆಪತ್ತು ಎದುರಾಗುತ್ತಿದೆ ಮತ್ತು ವನ್ಯಜೀವಿಗಳು ಸ್ವತಂತ್ರ್ಯವಾಗಿ ಓಡಾಟ ನಡೆಸಲು ಸಹ ಕಷ್ಟ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಈ ಮಾರ್ಗಗಳಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಈ ರಸ್ತೆಗಳ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಹಾಗೂ ಪ್ರವಾಸಿಗರು ರಸ್ತೆ ಬದಿಯಲ್ಲಿ ವನ್ಯಪ್ರಾಣಿಗಳು ಕಂಡರೆ ಸಾಕು ವಾಹನಗಳಿಂದ ಕೆಳಗಿಳಿದು ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಿದ್ದಾರೆ.
ಅಷ್ಟೇ ಸಾಲದೆಂಬಂತೆ ವನ್ಯ ಜೀವಿಗಳ ಮುಂದೆಯೇ ಹೋಗಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟವನ್ನು ಕೂಡ ಮಾಡುತ್ತಿದ್ದಾರೆ. ಈ ವೇಳೆ ಸಂದರ್ಭಗಳಲ್ಲಿ ವನ್ಯಜೀವಿಗಳು ದಾಳಿ ಮಾಡಿರುವ ಘಟನೆಗಳು ಈಗಾಗಲೇ ನಡೆದಿವೆ. ಬಳಿಕ ಹುಚ್ಚಾಟ ಮೆರೆದ ಪ್ರಯಾಣಿಕರಿಗೆ ಅರಣ್ಯ ಇಲಾಖೆ ದಂಡ ವಿಧಿಸಿ ಎಚ್ಚರಿಕೆಯನ್ನೂ ನೀಡಿದೆ. ಇಷ್ಟಾದರೂ ಕೂಡ ಪ್ರಯಾಣಿಕರು ಈ ಹುಚ್ಚು ಸಾಹಸವನ್ನು ಮಾತ್ರ ಕೈಬಿಟ್ಟಿಲ್ಲ. ಆದ್ದರಿಂದ ಇದಕ್ಕೆ ಅಂತ್ಯವಾಡಲು ಖಡಕ್ ನಿರ್ಧಾರದ ಮೊರೆ ಹೋಗಿದೆ.
ಈ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಮಾಡುವ ಸೆಲ್ಪೀ, ಫೋಟೋ ತೆಗೆದುಕೊಳ್ಳುವ ಹುಚ್ಚಾಟದಿಂದ ವನ್ಯಜೀವಿಗಳ ಏಕಾಗ್ರತೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅರಣ್ಯದ ನಡುವೆ ವಾಹನ ನಿಲ್ಲಿಸುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಅರಣ್ಯ ಇಲಾಖೆ ಮುಂದಾಗಿದೆ. ಸದ್ಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 67 ಲ್ಲಿ 3 ಕಡೆಗಳಲ್ಲಿ ಸೋಲಾರ್ ಆಧಾರಿತ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇದರ ಮೂಲಕ ಪ್ರಯಾಣಿಕರ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗಿದೆ
ಅಲ್ಲದೆ, ಬಂಡೀಪುರ ಮೂಲಕ ಕೇರಳದ ವಯನಾಡ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ಧಾರಿ 766 ರಲ್ಲೂ ಇದೇ ರೀತಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೆ ಮೂಲೆ ಹೊಳೆ ಹಾಗು ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆ ರಸ್ತೆಯ ಎರಡೂ ಬದಿಗಳಲ್ಲಿ ನಾಮಫಲಕ ಅಳವಡಿಕೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಇನ್ಮುಂದೆ ಬಂಡೀಪುರದ ಬಳಿಯ ಹೆದ್ದಾರಿಗಳಲ್ಲಿ ವಾಹನದಿಂದ ಇಳಿಯುವ ಹಾಗು ವನ್ಯಜೀವಿಗಳ ಫೋಟೋ ಅಥವಾ ಸೆಲ್ಫಿ ತೆಗೆಯುವ ಹುಚ್ಚಾಟ ನಡೆಸಿದರೆ, ಪ್ರಯಾಣಿಕರು 25,000 ರೂಪಾಯಿ ದಂಡದ ಜೊತೆಗೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ. ಇಲ್ಲಿ ಹಾದುಹೋಗುವ ಹೆದ್ದಾರಿಗಳಲ್ಲಿ ಪ್ರಯಾಣಿಕರು ಪ್ರಾಣಿಗಳ ಜೊತೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಅವುಗಳಿಗೆ ಹಾಗೂ ಅವರಿಗೆ ತೊಂದರೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದಿನಿಂದಲೂ ಕೂಡ ಪ್ರಯಾಣಿಕರು ಈ ಹೆಚ್ಚಾಟ ಮುಂದುವರೆಸಿದ್ದರು. ಆದ್ದರಿಂದಲೇ ಅರಣ್ಯ ಇಲಾಖೆ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.












Click it and Unblock the Notifications