Ginger Price: ಪಾತಾಳಕ್ಕಿಳಿದ ಶುಂಠಿ ಬೆಲೆಯಿಂದ ಕಂಗಾಲಾದ ಕೃಷಿಕರು!
ಚಾಮರಾಜನಗರ, ಫೆಬ್ರವರಿ 01: ಶುಂಠಿ ಕೃಷಿ ಎಂದರೆ ಅದೊಂದು ರೀತಿಯ ಜೂಜಾಟ ಎಂದರೂ ತಪ್ಪಾಗಲಾರದು. ಏಕೆಂದರೆ ಯಾವಾಗ ಅದರ ಬೆಲೆ ಏರಿಕೆಯಾಗುತ್ತದೆಯೋ? ಇಳಿಕೆಯಾಗುತ್ತದೆಯೋ ಗೊತ್ತಾಗುವುದಿಲ್ಲ. ಹೀಗಾಗಿ ಕೃಷಿ ಮಾಡಿದ ಕೆಲವರು ಬಂಪರ್ ಫಸಲು ಮತ್ತು ಆದಾಯ ಪಡೆದಿದ್ದರೆ, ಮತ್ತೆ ಕೆಲವರು ಇಳುವರಿ ಬಂದರೂ ದರ ಕುಸಿತದ ಕಾರಣದಿಂದಾಗಿ ಖರ್ಚು ಮಾಡಿದ ಹಣವೂ ಬಾರದೆ ಸಾಲಗಾರರಾದ ಪ್ರಕರಣಗಳು ಇಲ್ಲದಿಲ್ಲ.
ಕಳೆದ ಬಾರಿ ಶುಂಠಿ ಬೆಲೆ ಗಗನಕ್ಕೇರಿದ ಹಿನ್ನಲೆಯಲ್ಲಿ ರೈತರು ನಿರೀಕ್ಷೆಗೂ ಮೀರಿ ಶುಂಠಿ ಕೃಷಿ ಮಾಡಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿದ್ದರಲ್ಲದೆ, ಕೃಷಿಗಾಗಿ ಸಾಲ ಮಾಡಿ ಬಂಡವಾಳ ಸುರಿದಿದ್ದರು. ಆದರೆ ಇದೀಗ ಬೆಲೆ ನೆಲಕಚ್ಚಿರುವುದರಿಂದ ಕೃಷಿಕರು ಆಕಾಶ ನೋಡುವಂತಾಗಿದೆ. ಅಷ್ಟೇ ಅಲ್ಲದೆ ಬೆಂಬಲ ಬೆಲೆ ನೀಡುವಂತೆ ಸರ್ಕಾರವನ್ನು ಕೋರುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ.

ಒಂದೆರಡು ದಶಕಗಳ ಹಿಂದೆ ಕೇರಳದಿಂದ ರಾಜ್ಯಕ್ಕೆ ಆಗಮಿಸಿದ ಕೇರಳದ ಕೃಷಿಕರು ಕೊಡಗು, ಮೈಸೂರು, ಚಾಮರಾಜನಗರ ಹೀಗೆ ಹಲವು ಕಡೆ ರೈತರಿಂದ ಜಮೀನನ್ನು ಗುತ್ತಿಗೆ ಪಡೆದು ಶುಂಠಿ ಕೃಷಿ ಮಾಡಿ ಲಾಭ ಮಾಡಿಕೊಂಡಿದ್ದರು. ಅವರ ನಂತರ ಸ್ಥಳೀಯ ಕೃಷಿಕರು ಅದನ್ನು ಮುಂದುವರೆಸಿದ್ದಾರೆ. ಹೀಗಾಗಿ ಇವತ್ತಿಗೂ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಶುಂಠಿ ಕೃಷಿ ಮಾಡುವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ.
ಚಾಮರಾಜನಗರದಲ್ಲಿ 500 ಎಕರೆಯಲ್ಲಿ ಕೃಷಿ
ಈ ಬಾರಿ ಉತ್ತಮ ಬೆಲೆ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಶುಂಠಿ ಬೆಳೆದ ಕೃಷಿಕರಿದ್ದರು ಆದರೀಗ ಶುಂಠಿ ಬೆಲೆ ತೀವ್ರ ಕುಸಿತ ಕಂಡಿದ್ದು, ಶುಂಠಿ ಬೆಳೆದ ರೈತರು ಆಕಾಶ ನೋಡುವಂತಾಗಿದೆ. ಅಷ್ಟೇ ಅಲ್ಲದೆ ಸರ್ಕಾರ ರೈತರ ನೆರವಿಗೆ ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿ ಕೇಂದ್ರ ತೆರೆಯುವಂತೆ ಬೇಡಿಕೆಯನ್ನಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಈರುಳ್ಳಿ, ತರಕಾರಿ, ಸೂರ್ಯಕಾಂತಿ, ಚೆಂಡುಹೂವು, ಟೊಮ್ಯಾಟೋ ಹೀಗೆ ಹತ್ತಾರು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ.

ಇದೆಲ್ಲದರ ನಡುವೆ ಶುಂಠಿ ಬೆಳೆದರೆ ಹೆಚ್ಚಿನ ಆದಾಯ ಪಡೆಯಬಹುದು ಎಂಬ ಬಯಕೆಯಿಂದ ರೈತರು ಎಕರೆಗೆ ಸುಮಾರು ನಾಲ್ಕೈದು ಲಕ್ಷ ರೂಪಾಯಿಗಳನ್ನು ವ್ಯಯಿಸಿ ಶುಂಠಿ ಬೆಳೆದಿದ್ದರು. ಆದರೀಗ ಬೆಲೆ ಕುಸಿತ ಕೃಷಿಕರಲ್ಲಿ ಭಯವನ್ನುಂಟು ಮಾಡಿದೆ. ಚಾಮರಾಜನಗರ ಜಿಲ್ಲಾ ತೋಟಗಾರಿಕೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 500 ರೈತರು ಶುಂಠಿ ಕೃಷಿಯಲ್ಲಿ ಮಾಡಿದ್ದಾರೆ.
ಶುಂಠಿ ಕೃಷಿ ಖರೀದಿ ಕೇಂದ್ರಕ್ಕೆ ಒತ್ತಾಯ
ಜಿಲ್ಲೆಯಲ್ಲಿ ತಾಲೂಕುವಾರು ಕೃಷಿ ಮಾಡಿರುವ ಪ್ರಮಾಣವನ್ನು ನೋಡಿದ್ದೇ ಆದರೆ ಚಾಮರಾಜನಗರ ತಾಲೂಕಿನಲ್ಲಿ 71.58 ಹೆಕ್ಟೇರ್, ಗುಂಡ್ಲುಪೇಟೆ ತಾಲೂಕಿನಲ್ಲಿ 138.20 ಹೆಕ್ಟೇರ್, ಕೊಳ್ಳೇಗಾಲ ತಾಲೂಕಿನಲ್ಲಿ 17.18ಹೆಕ್ಟೇರ್, ಹನೂರು ತಾಲೂಕಿನಲ್ಲಿ 1.53 ಹೆಕ್ಟೇರ್, ಯಳಂದೂರು ತಾಲೂಕಿನಲ್ಲಿ 13.31ಹೆಕ್ಟೇರ್ನಲ್ಲಿ ಶುಂಠಿ ಬೆಳೆಯಲಾಗಿದೆ. ಇಲ್ಲಿ ಶುಂಠಿ ಬೆಳೆದ ರೈತರೆಲ್ಲರೂ ಲಕ್ಷಾಂತರ ರೂಪಾಯಿ ಸಾಲ ಮಾಡಿತಂದು ಕೃಷಿ ಮೇಲೆ ಬಂಡವಾಳ ಸುರಿದಿದ್ದು, ಒಂದು ವೇಳೆ ಉತ್ತಮ ದರ ದೊರೆತಿದ್ದರೆ ಬದುಕು ಹಸನಾಗುತ್ತಿತ್ತು.

ಇದು ಶುಂಠಿಯ ಕಾಲವಾಗಿದ್ದು, ಮಣ್ಣಿನಡಿಯಲ್ಲಿ ಶುಂಠಿ ಭದ್ರವಾಗಿದೆ. ಈ ಸಮಯದಲ್ಲಿ ಕಿತ್ತು ಮಾರಾಟ ಮಾಡಬೇಕಾಗಿತ್ತು. ಆದರೆ ಬೆಲೆ ಪಾತಾಳಕ್ಕಿಳಿದಿದೆ ವರ್ಷದ ಹಿಂದೆ ಕ್ವಿಂಟಾಲ್ ಗೆ 20 ರಿಂದ 24 ಸಾವಿರ ತನಕ ಏರಿಕೆಯಾಗಿತ್ತು. ಇದೀಗ ಪ್ರತಿ ಕ್ವಿಂಟಾಲ್ 1500ರೂ.ಗಳಿಂದ 2000ರೂ.ಗೆ ಇಳಿದಿದೆ. ಹೀಗಾಗಿ ಇವತ್ತಿನ ಪರಿಸ್ಥಿತಿಯಲ್ಲಿ ಕೃಷಿಗೆ ಮಾಡಿದ ಖರ್ಚು ಕೂಡ ಬಾರದ ಸ್ಥಿತಿಯಲ್ಲಿ ರೈತರಿದ್ದಾರೆ. ಹೀಗಾಗಿ ಶುಂಠಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ತೆರೆಯಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications