ಬರಗಾಲಕ್ಕೆ ಬೆದರಿ ಬೇಗೂರು ಸಂತೆಯಲ್ಲಿ ಬಾಯಿಲ್ಲದ ಜೀವಗಳು ಬಿಕರಿಗೆ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಅಕ್ಟೋಬರ್ 5: ಈ ಬಾರಿಯೂ ಮಳೆ ಕೈಕೊಟ್ಟು, ಬರ ಪರಿಸ್ಥಿತಿ ಕಾಣಿಸಿಕೊಂಡಿರುವುದರಿಂದ ಕೃಷಿ ಮಾಡಲಾಗದ ರೈತರು ತಮ್ಮ ಬಳಿಯಿದ್ದ ಜಾನುವಾರುಗಳಿಗೆ ಮೇವು ಒದಗಿಸಲಾಗದೆ ಮಾರಾಟ ಮಾಡುವ ಹೀನಾಯ ಸ್ಥಿತಿಗೆ ಬಂದು ತಲುಪಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಂತೆಯಲ್ಲಿ ರೈತರು ದನ ಮಾರಾಟಕ್ಕೆ ಮುಗಿಬಿದ್ದಿರುವ ದೃಶ್ಯ ಮನಕಲಕುತ್ತಿದೆ.

ಬೇಗೂರಲ್ಲಿ ನಡೆಯುವ ಸಂತೆಗೆ ದಾಖಲೆ ಪ್ರಮಾಣದ ಜಾನುವಾರುಗಳು ಮಾರಾಟಕ್ಕೆ ಬರುತ್ತಿದ್ದು, ಬರದ ಹಿನ್ನಲೆಯಲ್ಲಿ ದನಗಳನ್ನು ಸಾಕಲಾಗುತ್ತಿಲ್ಲ ಎಂಬ ನೋವಿನ ಮಾತುಗಳು ರೈತರಿಂದ ಕೇಳಿ ಬರುತ್ತಿವೆ. ಈ ಬಾರಿ ಮಳೆಯಾಗದೆ ರೈತರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಹೀಗಾಗಿ ಜಾನುವಾರುಗಳಿಗೆ ಮೇವು ಒದಗಿಸಿ, ಅವುಗಳನ್ನು ಸಾಕುವುದು ರೈತರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಮಾರಲು ಮುಂದಾಗುತ್ತಿದ್ದಾರೆ.[ರಾಜ್ಯದ 22 ಜಿಲ್ಲೆಯ 68 ತಾಲೂಕುಗಳು ಬರಪೀಡಿತ]

Farmers selling their cattle due to drought

ಸುಮಾರು 80 ಸಾವಿರ ರುಪಾಯಿ ಬೆಲೆಬಾಳುವ ಎತ್ತುಗಳನ್ನು 50 ರಿಂದ 55 ಸಾವಿರಕ್ಕೂ ಕೊಳ್ಳಲು ಮುಂದೆ ಬರುತ್ತಿಲ್ಲ. ಕೇವಲ ಕಸಾಯಿಖಾನೆಗೆಳಿಗೆ ಮಾರಾಟ ಯೋಗ್ಯ ಜಾನುವಾರುಗಳಿಗೆ ಮಾತ್ರ ಸಂತೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಬೇಸಾಯ ಮಾಡಲು ಯೋಗ್ಯವಾದ ಜಾನುವಾರು ಕೊಳ್ಳುವವರಿಲ್ಲದೆ, ಖರೀದಿದಾರರು ಕೇಳಿದ ಬೆಲೆಗೆ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ.

ಇನ್ನೂ ಕೆಲವು ರೈತರು ತಾವು ಪ್ರೀತಿಯಿಂದ ಸಲಹಿದ ಜಾನುವಾರನ್ನು ಕಡಿಮೆ ಬೆಲೆಗೆ ಕಟುಕರಿಗೆ ಮಾರಲು ಮನಸ್ಸೊಪ್ಪದೆ ವಾಪಸಾಗುತ್ತಿದ್ದಾರೆ. ಸೋಮವಾರದ ಸಂತೆಗೆ 700ಕ್ಕೂ ಹೆಚ್ಚಿನ ಎತ್ತುಗಳು ಹಾಗೂ 200 ಹಸುಗಳು ಮಾರುಕಟ್ಟೆಗೆ ಬಂದಿದ್ದವು. , ಹೆಚ್ಚಿನ ಪ್ರಮಾಣದ ರಾಸುಗಳು ಕೊಳ್ಳುವವರಿಲ್ಲದೆ ಹಿಂದಕ್ಕೆ ಹೋಗಿವೆ.[ಮತ್ತೊಂದು ಬರಗಾಲದ ಹೊಡೆತಕ್ಕೆ ಸಜ್ಜಾಗಬೇಕಿದೆ ಕರ್ನಾಟಕ!]

Farmers selling their cattle due to drought

ಬಹಳಷ್ಟು ರೈತರು ಸಾಲ ಮಾಡಿ ಸಮೀಪದ ನಂಜನಗೂಡು, ಟಿ.ನರಸೀಪುರ ಮುಂತಾದ ಕಡೆಗೆ ತೆರಳಿ ಒಣ ಹುಲ್ಲು ಹಾಗೂ ಮುಸುಕಿನ ಜೋಳದ ಕಡ್ಡಿ, ಕಬ್ಬಿನ ಸೋಗೆಯನ್ನು ಟೆಂಪೋದಲ್ಲಿ ತುಂಬಿಸಿಕೊಂಡು ತಂದು ಜಾನುವಾರುಗಳಿಗೆ ಮೇವು ಒದಗಿಸುತ್ತಿದ್ದಾರೆ. ಒಟ್ಟಾರೆ ರೈತರಿಗೆ ಜಾನುವಾರುಗಳನ್ನು ಸಲಹುವುದು ಕಷ್ಟವಾಗಿ ಪರಿಣಮಿಸಿದೆ.[ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾಣಿಪಕ್ಷಿಗಳಿಗೆ ನೀರಿನ ಕೊರತೆ]

ಜಿಲ್ಲಾಡಳಿತವು ಇನ್ನಾದರೂ ಗೋಶಾಲೆಗಳ ಸ್ಥಾಪನೆ ಮಾಡುವ ಮೂಲಕ ರೈತರ ಜಾನುವಾರುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Farmers of Chamarajanagar district selling their cattle due to drought situation. Even cattle are selling at lesser than market price, nobody is buying. People demanding district administration to start Goshala.
Please Wait while comments are loading...