ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ರಸ್ತೆಯಲ್ಲಿ ರೈತರ ಒಕ್ಕಣೆ, ಕೇಳೋರಿಲ್ಲ ವಾಹನ ಸವಾರರ ಬವಣೆ!

|
Google Oneindia Kannada News

ಚಾಮರಾಜನಗರ, ಜನವರಿ 7: ಗ್ರಾಮೀಣ ಪ್ರದೇಶದಲ್ಲಿ ಹುರುಳಿಯನ್ನು ಕೊಯ್ಲು ಮಾಡಿ ಒಕ್ಕಣೆಗಾಗಿ ರಸ್ತೆಗೆ ಹಾಕುವುದರಿಂದ ವಾಹನ ಚಾಲಕರು ಭಯದಲ್ಲಿ ತಮ್ಮ ವಾಹನವನ್ನು ಓಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ಒಕ್ಕಣೆಯನ್ನು ನಿರ್ಬಂಧಿಸಿದ್ದರೂ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ರೈತರು ಕಾನೂನನ್ನು ಗಾಳಿಗೆ ತೂರಿ ಒಕ್ಕಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಸರ್ಕಾರ ಹಲವು ಕಡೆಗಳಲ್ಲಿ ಒಕ್ಕಣೆಗೆ ಅನುಕೂಲವಾಗುವಂತೆ ಕಣಗಳನ್ನು ನಿರ್ಮಿಸಿ ಕೊಟ್ಟಿದ್ದರೂ, ಇನ್ನೊಂದೆಡೆ ರೈತರಿಗೆ ಸ್ವಂತ ಕಣ ಇದ್ದರೂ ಕೂಡ ಹೆಚ್ಚಿನ ರೈತರು ನೇರವಾಗಿ ಹುರುಳಿಯನ್ನು ತಂದು ರಸ್ತೆಗೆ ಹಾಕುತ್ತಾರೆ. ಇದರ ಮೇಲೆ ವಾಹನಗಳು ಹಾದು ಹೋದಾಗ ಕಾಳುಗಳು ಉದುರುತ್ತವೆ. ಆ ನಂತರ ಬಳ್ಳಿಗಳನ್ನು ತೆಗೆದು ಕಾಳುಗಳನ್ನು ತೆಗೆದು ಸ್ವಚ್ಛಗೊಳಿಸಿ ಚೀಲಗಳಲ್ಲಿ ತುಂಬಿಸಿ ಮನೆಗೆ ಕೊಂಡೊಯ್ಯುತ್ತಾರೆ.

 ವಾಹನ ಸವಾರರ ಚಕ್ರಗಳಿಗೆ ಬಳ್ಳಿ ಸಿಕ್ಕಿಕೊಳ್ಳುತ್ತದೆ

ವಾಹನ ಸವಾರರ ಚಕ್ರಗಳಿಗೆ ಬಳ್ಳಿ ಸಿಕ್ಕಿಕೊಳ್ಳುತ್ತದೆ

ಕೆಲವು ವರ್ಷಗಳ ಹಿಂದೆ ಇದು ಎಲ್ಲೆಂದರಲ್ಲಿ ನಡೆಯುತ್ತಿತ್ತಾದರೂ ಮೇಲಿಂದ ಮೇಲೆ ವಾಹನ ಸವಾರರಿಗೆ ಸಮಸ್ಯೆಗಳು ಎದುರಾಗ ತೊಡಗಿದವು. ದ್ವಿಚಕ್ರ ವಾಹನ ಸವಾರರ ಚಕ್ರಗಳಿಗೆ ಬಳ್ಳಿ ಸಿಕ್ಕಿಕೊಂಡು ಬಿದ್ದು ಕೈಕಾಲು ಮುರಿದುಕೊಂಡರೆ, ಇತರೆ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಉರಿದು ಹೋಗಿದ್ದವು. ಈ ವೇಳೆ ಸಂಬಂಧಿಸಿದವರು ಎಚ್ಚೆತ್ತುಕೊಂಡು ರಸ್ತೆಯಲ್ಲಿ ಒಕ್ಕಣೆಗೆ ತಡೆಯೊಡ್ಡಿದ್ದರು. ಆದರೆ ಅದು ಸಂಪೂರ್ಣ ಎಲ್ಲ ಕಡೆಯೂ ನಿಂತಿಲ್ಲ. ಬಹಳಷ್ಟು ಕಡೆಗಳಲ್ಲಿ ಈಗಲೂ ನಡೆಯುತ್ತಿದೆ.

 ಈ ಹಿಂದೆ ಹಲವು ಅವಘಡ ಸಂಭವಿಸಿವೆ

ಈ ಹಿಂದೆ ಹಲವು ಅವಘಡ ಸಂಭವಿಸಿವೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹಲವೆಡೆ ರಸ್ತೆಯಲ್ಲಿ ನಡೆಸುವ ಒಕ್ಕಣೆಯಿಂದ ಈ ಹಿಂದೆ ಕಾರು ಬೆಂಕಿಗೆ ಆಹುತಿಯಾಗಿದ್ದರೆ, ಟಾಟಾ ಏಸ್ ವಾಹನ ಪಲ್ಟಿ ಹೊಡೆದಿತ್ತು. ಇನ್ನು ದ್ವಿಚಕ್ರ ವಾಹನ ಸವಾರರಿಗಂತು ಇದೊಂದು ಶಿಕ್ಷೆ ಎಂದರೆ ತಪ್ಪಾಗಲಾರದು. ರಸ್ತೆ ತುಂಬೆಲ್ಲ ಹುರುಳಿ ಬಳ್ಳಿಯನ್ನು ಹರಡುವುದರಿಂದ ಅದರ ಮೇಲೆ ಚಲಿಸಿಕೊಂಡು ಬರಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿ ಸರ್ಕಸ್ ಮಾಡಿಕೊಂಡು ಮುಂದೆ ಸಾಗಬೇಕು. ಈ ವೇಳೆ ನಿಯಂತ್ರಣ ತಪ್ಪಿ ಬಿದ್ದು ಕೈಕಾಲುಗಳಿಗೆ ಗಾಯ ಮಾಡಿಕೊಂಡ ನಿದರ್ಶನಗಳಿವೆ. ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ತಿಳಿ ಹೇಳಿದರೂ ಯಾರೂ ಅದಕ್ಕೆ ಸೊಪ್ಪು ಹಾಕದೆ ತಮ್ಮ ಕಾಯಕವನ್ನು ಮುಂದುವರೆಸುತ್ತಾರೆಯಲ್ಲದೆ, ವಾಹನ ಸವಾರರ ಮೇಲೆಯೇ ಜಗಳಕ್ಕೆ ನಿಲ್ಲುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತವೆ.

 ರೈತರಿಗೆ ಮನವರಿಕೆ ಮಾಡಿಕೊಡಬೇಕು

ರೈತರಿಗೆ ಮನವರಿಕೆ ಮಾಡಿಕೊಡಬೇಕು

ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ತಡೆಯಬೇಕಾದರೆ ಆಯಾಯ ಗ್ರಾಮ ಪಂಚಾಯಿತಿ ಸೂಕ್ತ ಕಣದ ವ್ಯವಸ್ಥೆ ಮಾಡಬೇಕು. ಅಲ್ಲದೆ ರಸ್ತೆಯಲ್ಲಿ ಒಕ್ಕಣೆ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅದ್ಯಾವುದೂ ಮಾಡದ ಕಾರಣ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ರಸ್ತೆಯಲ್ಲಿ ಓಡಾಡುವ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಜಿಲ್ಲಾಡಳಿತವೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಿದ್ದು, ಎಲ್ಲೆಲ್ಲಿ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಾರೋ ಅಲ್ಲಿಗೆ ಪೊಲೀಸರು ತೆರಳಿ ಅದನ್ನು ತೆರವುಗೊಳಿಸುವ ಕೆಲಸವನ್ನು ಮಾಡಬೇಕಿದೆ. ಸವಾರರು ಈ ಬಗ್ಗೆ ಪ್ರಶ್ನಿಸಿದರೆ ಕೆಟ್ಟದಾಗಿ ಮಾತನಾಡುವುದಲ್ಲದೆ, ನಮ್ಮ ಮೇಲೆ ಹಲ್ಲೆಗೆ ಬರುತ್ತಾರೆ ಎಂಬುದು ವಾಹನ ಮಾಲೀಕರ ಅಳಲಾಗಿದೆ.

 ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು

ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು

ಇನ್ನು ಮುಂದೆಯಾದರೂ ಪೊಲೀಸರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ಹುರುಳಿ ಒಕ್ಕಣೆ ಮಾಡುವವರಿಗೆ ಎಚ್ಚರಿಕೆ ನೀಡಿ, ವಾಹನಗಳು ಓಡಾಡಲು ಅವಕಾಶ ಮಾಡಿ ಕೊಡಬೇಕು. ಇಲ್ಲದೆ ಹೋದರೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ ಎಂಬುದು ಸಾರ್ವಜನಿಕರ ಕಳಕಳಿಯ ಮನವಿಯಾಗಿದೆ.

ಮುಂದಿನ ದಿನಗಳಲ್ಲಿ ಸಂಬಂಧಿಸಿದವರು ರೈತರಿಗೆ ಒಕ್ಕಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಸಾರ್ವಜನಿಕ ಕಣಗಳ ನಿರ್ಮಾಣ ಮಾಡಿಕೊಡುವುದು, ಇಲ್ಲದಿದ್ದರೆ ಕಣ ನಿರ್ಮಾಣಕ್ಕೆ ಸಹಾಯಧನ ಒದಗಿಸುವುದು, ಜತೆಗೆ ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ಅವರು ಕಣಗಳಲ್ಲಿ ಒಕ್ಕಣೆ ಮಾಡುವಂತೆ ಪ್ರೇರೇಪಿಸಬೇಕಾಗಿದೆ. ಇದು ಸಾಧ್ಯವಾಗುತ್ತಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

English summary
Vehicle drivers facing problems due to Farmers drying crops in Roads in Chamarajanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X