ಸಿದ್ದರಾಮಯ್ಯ ಸಿಎಂ ಆಗಲಿ ಚಾಮರಾಜೇಶ್ವರನಿಗೆ ಅಭಿಮಾನಿಗಳು ಹಣ್ಣು-ಧವನ!
ಚಾಮರಾಜನಗರ, ಜುಲೈ 13: ವಿಧಾನಸಭಾ ಚುನಾವಣಾ ಹತ್ತಿರವಾಗುತ್ತಿದೆ. ಪಕ್ಷಗಳಲ್ಲಿ ಈಗಾಗಲೇ ಜಿದ್ದಾಜಿದ್ದಿ ಶುರುವಾಗಿದೆ. ಆದರೆ ರಾಜಕೀಯ ನೇತಾರರಂತೆ ಅಲ್ಲದೇ ಅಭಿಮಾನಿಗಳಲ್ಲೂ ರಾಜಕೀಯ ಜಿದ್ದಾಜಿದ್ದಿ ಆರಂಭಗೊಂಡಿದೆ. ಬುಧವಾರ ಚಾಮರಾಜೇಶ್ವರ ಜಾತ್ರೆಯಲ್ಲೂ ಬಗೆ-ಬಗೆ ರಾಜಕೀಯ ಬೇಡಿಕೆಗಳ ಪ್ರಾರ್ಥನೆ ಸಲ್ಲಿಕೆಯಾಗಿದೆ.
ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯ ದಿನ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಜರುಗುತ್ತದೆ. 1836ರಲ್ಲಿನ ಆಷಾಢ ಶುದ್ಧ ಹುಣ್ಣಿಮೆಯ ಸೋಮವಾರ ಮೊದಲ ರಥೋತ್ಸವ ನಡೆಯಿತು.
ಅಂದಿನಿಂದ ಪ್ರತಿವರ್ಷ ಆಷಾಢ ಮಾಸದ ಹುಣ್ಣಿಮೆಯ ದಿನ ಈ ರಥೋತ್ಸವ ನಡೆದುಕೊಂಡು ಬಂದಿದೆ. ಆದರೆ 2017 ರಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಯಿಂದ ರಥ ಸುಟ್ಟುಹೋಗಿತ್ತು. ಇದೀಗ 1.2 ಕೋಟಿ ರೂ. ವೆಚ್ಛದಲ್ಲಿ ಹೊಸ ತೇರನ್ನು ನಿರ್ಮಿಸಿದ್ದು, 5 ವರ್ಷಗಳ ಬಳಿಕ ಚಾಮರಾಜೇಶ್ವರಸ್ವಾಮಿ ಉತ್ಸವ ನಡೆಯಿತು.

5 ವರ್ಷಗಳ ಬಳಿಕ ಚಾಮರಾಜನಗರದಲ್ಲಿ ನಡೆದ ಚಾಮರಾಜೇಶ್ವರ ರಥೋತ್ಸವದಲ್ಲಿ ತಮ್ಮ ನೆಚ್ಚಿನ ನಾಯಕರು ಮುಂದಿನ ಚುನಾವಣೆಯಲ್ಲಿ ಗದ್ದುಗೆ ಎರಲಿ ಎಂದು ಅಭಿಮಾನಿಗಳು ಹಣ್ಣು-ಧವನದ ಮೇಲೆ ಬರೆದು ರಥಕ್ಕೆ ಎಸೆದಿದ್ದಾರೆ.
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅಭಿಮಾನಿ ಕಿರಣ್ ಎಂಬಾತ ಮುಂದಿನ ಚುನಾವಣೆಯಲ್ಲೂ ಸಿ. ಪುಟ್ಟರಂಗಶೆಟ್ಟಿ ಗೆದ್ದುಬರಲಿ ಎಂದು ಬರೆದಿದ್ದರು. ಮತ್ತೋರ್ವ ಯುವಕ ಮುಂದಿನ ಸಿಎಂ ಸಿದ್ದರಾಮಯ್ಯ ಬಾಸ್ ಎಂದು ಬರೆದ ಹಣ್ಣು-ಧವನದ ಮೇಲೆ ಎಸೆದು ರಥಕ್ಕೆ ಎಸೆದು ಪ್ರಾರ್ಥನೆ ಸಲ್ಲಿಸಿದ್ದಾನೆ.
ಇನ್ನು, ಶಿವು ವಿರಾಟ್ ಎಂಬಾತ ಮುಂದಿನ ಮುಖ್ಯಮಂತ್ರಿ ಶ್ರೀರಾಮಲು ಎಂದು ಬಾಳೆಹಣ್ಣಿನ ಮೇಲೆ ಬರೆದು ಹಣ್ಣು-ಧವನ ಎಸೆದು ಅಭಿಮಾನಿಗಳು ಪ್ರಾರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇಷ್ಟು ವರ್ಷ ನಾಡಿನ ವಿವಿಧೆಡೆ ನಡೆದ ರಥೋತ್ಸವದಲ್ಲಿ ಆರ್‌ಸಿಬಿ, ಐಪಿಎಲ್ ಜ್ವರ ಕಾಣಿಸಿಕೊಳ್ಳುತ್ತಿತ್ತು. ಈಗ ಚುನಾವಣೆ ಜ್ವರ ಬಲು ಜೋರಾಗಿದೆ.

ಕರ್ತವ್ಯ ನಿರ್ವಹಣೆಯಲ್ಲಿ ವಿಫಲ: ಸಮರ್ಪಕವಾಗಿ ಕರ್ತವ್ಯ ನಿಭಾಯಿಸಲು ವಿಫಲರಾದ ಹಿನ್ನೆಲೆಯಲ್ಲಿ ಚಾಮರಾಜನಗರ ನಗರಸಭೆ ಆಯುಕ್ತ ಕರಿಬಸವಯ್ಯರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸಹಾಯಕ ಕಾರ್ಯಪಾಲಕ ಅಭಿಯಂತರ ನಟರಾಜು ಪ್ರಭಾರ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ರಸ್ತೆ ಅಭಿವೃದ್ಧಿಗೆ ಭೂ ಸ್ವಾಧೀನ ಪಡಿಸಿಕೊಳ್ಳದಿರುವುದು, 14 ಮತ್ತು 15 ನೇ ಹಣಕಾಸಿನ ಯೋಜನೆಯ ಕಾಮಗಾರಿ ಅಪೂರ್ಣ, ಕುಡಿಯುವ ನೀರು ಅಸಮರ್ಪಕ ಪೂರೈಕೆ, ಇ-ಸ್ವತ್ತು ಬಗ್ಗೆ ದೂರುಗಳು ಬಂದಿದ್ದು ಜೊತೆಗೆ ಹಲವು ಬಾರಿ ಸೂಚಿಸಿದ್ದರೂ ಕಾರ್ಯವೈಖರಿ ಬದಲಿಸಿಕೊಳ್ಳದಿರುವುದರಿಂದ ಡಿಸಿ ಈ ಅದೇಶ ಹೊರಡಿಸಿದ್ದಾರೆ.
ಈ ಹಿಂದೆ ನಗರಸಭೆಯ ಇಬ್ಬರು ನೌಕರರನ್ನು ಅಮಾನತು ಮಾಡಿದ್ದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಈಗ ಆಯುಕ್ತರನ್ನೇ ಹುದ್ದೆಯಿಂದ ಬಿಡುಗಡೆಗೊಳಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.












Click it and Unblock the Notifications