ಹೊಗೆನಕಲ್ ಫಾಲ್ಸ್‌ನಲ್ಲಿ ಪ್ರವಾಸಿಗರಿಗಿಲ್ಲ ಪ್ರವೇಶ, ಏಕೆ ಮತ್ತು ಎಷ್ಟು ದಿನ? ಮಾಹಿತಿ ತಿಳಿಯಿರಿ
ಚಾಮರಾಜನಗರ, ಡಿಸೆಂಬರ್, 04: ಪ್ರಸಿದ್ಧ ಪ್ರವಾಸಿ ತಾಣವಾದ ಹನೂರು ತಾಲೂಕಿನ ಹೊಗೆನಕಲ್ ಫಾಲ್ಸ್‌ನಲ್ಲಿ ತೆಪ್ಪ ನಡೆಸಲು ಒಬ್ಬರಿಗೆ 1,200 ರೂಪಾಯಿ ನಿಗದಿ ಮಾಡುವಂತೆ ಒತ್ತಾಯಿಸಿ ಅಂಬಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಪ್ರಸಿದ್ಧಿ ಪಡೆದಿರುವ ಹೊಗೆನಕಲ್ ಫಾಲ್ಸ್‌ಗೆ ವಾರಾಂತ್ಯದ ರಜಾ ದಿನಗಳು ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಫಾಲ್ಸ್‌ಗೆ ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಫಾಲ್ಸ್ ವೀಕ್ಷಣೆ ಮಾಡುತ್ತಿದ್ದಾರೆ. ಆದರೆ ಹೊಗೆನಕಲ್ ಫಾಲ್ಸ್‌ಗೆ ಬರುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯವರು ಒಬ್ಬರಿಗೆ 500 ನಿಗದಿ ಮಾಡಿದ್ದರು. ಇದರಲ್ಲಿ ಸರ್ಕಾರಕ್ಕೆ ನೂರು ರೂಪಾಯಿ ಹಾಗೂ ತೆಪ್ಪ ನಡೆಸುವವರಿಗೆ 400 ರೂಪಾಯಿ ನೀಡಲಾಗುತ್ತಿತ್ತು.

ನೂರು ರೂಪಾಯಿಯನ್ನು ಪಡೆಯುವ ಅರಣ್ಯ ಇಲಾಖೆಯವರು ಬರುವಂತಹ ಪ್ರವಾಸಿಗರಿಗೆ ಯಾವುದೇ ವ್ಯವಸ್ಥೆಯನ್ನು ಮಾಡದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಪ್ರವಾಸಿಗರಿಗೆ ಉತ್ತಮ ಶೌಚಾಲಯ ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಶ್ರಾಂತಿ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯವರು ಪಡೆಯುವ ನೂರು ರೂಪಾಯಿಯಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ನಮಗೂ 400 ರೂಪಾಯಿ ಸಾಲುತ್ತಿಲ್ಲ ಎಂದು ತೆಪ್ಪ ನಡೆಸುವವರು ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ, ಪೆಟ್ರೋಲ್ ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಯಾಗಿರುವುದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ನೆರೆಯ ತಮಿಳುನಾಡು ರಾಜ್ಯದವರು ತೆಪ್ಪ ನಡೆಸುವವರಿಗೆ 1,700 ನಿಗದಿ ಮಾಡಿದ್ದಾರೆ. ಅದರಂತೆ ಕರ್ನಾಟಕದಲ್ಲಿಯೂ 1,200 ರೂಪಾಯಿ ನಿಗದಿ ಮಾಡಬೇಕೆಂದು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಇವರ ಬೇಡಿಕೆ ಈಡೇರಿಸದೆ ಇರುವುದರಿಂದ ಅಂಬಿಗರು ಈ ಪ್ರತಿಭಟನೆ ಕೈಗೊಂಡಿದ್ದಾರೆ.
ಇನ್ನು, ಅಂಬಿಗರು ಮುಷ್ಕರ ಮಾಡುತ್ತಿರುವುದರಿಂದ ಹೊಗೆನಕಲ್ ಜಲಪಾತಕ್ಕೆ ತೆರಳಲು ಪ್ರವಾಸಿಗರಿಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ನಿರ್ಬಂಧ ಹೇರಿದ್ದಾರೆ. ಹೊಗೇನಕಲ್ ಫಾಲ್ಸ್‌ನಲ್ಲಿ ತೆಪ್ಪ ನಡೆಸುವವರಿಗೆ 800 ರೂಪಾಯಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ ನಂತರ ದರ ಹೆಚ್ಚಳ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ಅಂಕರಾಜು ಮಾಹಿತಿ ನೀಡಿದ್ದಾರೆ.
ಪ್ರವಾಸಿಗರಿಗೆ ನಿರ್ಬಂಧ
ಇತ್ತೀಚೆಗಷ್ಟೇ ಭಾರೀ ಮಳೆ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಪಶ್ಚಿಮ ಘಟ್ಟಗಳಂತಹ ಪ್ರವಾಸಿ ತಾಣಗಳಲ್ಲಿ ಜಲಮೂಗಳು ಅಪಾಯದ ಮಟ್ಟ ಮೀರಿ ಹರಿದಿದ್ದವು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.
ಉಡುಪಿಯ ಜಲಪಾತದಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದ ಬೆನ್ನೆಲ್ಲೇ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ ಆಗಿತ್ತು. ಮುಂಜಾಗ್ರತಾ ಕ್ರಮವಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ ಫಾಲ್ಸ್ ಸೇರಿದಂತೆ ಇನ್ನಿತರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಅದರಲ್ಲೂ ವೀಕೆಂಡ್‌ನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಿಬ್ಬಂದಿ ಮುಂಜಾಗ್ರತಾ ಕ್ರಮವಹಿಸಿದ್ದು, ಕೈಮರ ಚೆಕ್ ಪೋಸ್ಟ್‌ನಲ್ಲೇ ಪ್ರವಾಸಿಗನ್ನು ತಡೆದು ವಾಪಾಸ್ ಕಳುಹಿಸಿದ್ದರು.
ಅಲ್ಲದೆ 2-3 ದಿನದಿಂದ ಜಿಲ್ಲೆ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡುತ್ತಲೇ ಇತ್ತು. ಆದರೆ ಪ್ರವಾಸಿಗರು ಮನವಿಗೆ ಸ್ಪಂದಿಸದ ಹಿನ್ನೆಲೆ ಜಿಲ್ಲೆಯ ಗಿರಿ ಪ್ರದೇಶಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.












Click it and Unblock the Notifications