ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿ, ನೀರಿಗಾಗಿ ಪಂಪ್ ಕೀಳುವ ಕಾಡಾನೆಗಳು!

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಜಮೀನುಗಳಿಗೆ ನುಗ್ಗುವ ಆನೆಗಳು ಫಸಲು ನಾಶ ಮಾಡುವುದಲ್ಲದೇ ನೀರು ಕುಡಿಯುವ ಸಲುವಾಗಿ ಕೃಷಿ ಪಂಪ್ ಸೆಟ್ ಗಳನ್ನೇ ಕಿತ್ತೊಗೆಯುತ್ತಿವೆ. ಇದರಿಂದ ರೈತರು ಅತಂಕಗೊಂಡಿದ್ದಾರೆ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜನವರಿ 9: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನೀರು ಮತ್ತು ಮೇವಿಗೆ ತೊಂದರೆ ಉಂಟಾಗಿದ್ದರಿಂದ ಮೇವು ಮತ್ತು ನೀರನ್ನು ಅರಸಿ ಬರುತ್ತಿರುವ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಬೆಳೆಯನ್ನು ನಾಶ ಮಾಡುತ್ತಿವೆ. ಪಂಪ್ ನೇ ಕಿತ್ತೆಸೆದು ನೀರಿಗಾಗಿ ಹುಡುಕಾಟ ನಡೆಸುತ್ತಿವೆ.

ಕಾಡಾನೆಗಳು ಅರಣ್ಯದಿಂದ ನಾಡಿನತ್ತ ಕಾಲಿಟ್ಟಿರುವ ವಿಚಾರ ತಿಳಿದ ಅರಣ್ಯದಂಚಿನ ರೈತರು ಭಯಗೊಂಡಿದ್ದಾರೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ಜನ ನಾವು, ಹೀಗೆ ಸಾವಿರಾರು ರುಪಾಯಿಯ ಪಂಪ್ ಅನ್ನೇ ಕಳೆದುಕೊಂಡರೆ ಮುಂದಿನ ಬದುಕು ಹೇಗಪ್ಪಾ ಎಂಬ ಚಿಂತೆಯಲ್ಲಿದ್ದಾರೆ.[ಕಾಡಾನೆ ತುಳಿದು ಗುಬ್ಬಿಯ ಇಬ್ಬರು ರೈತರು ಸಾವು]

ಈಗಾಗಲೇ ಓಂಕಾರ್ ಅರಣ್ಯ ವಲಯದ ಬೋಳೇಗೌಡನಕಟ್ಟೆ ಅರಣ್ಯ ಪ್ರದೇಶದಿಂದ ಹೊರಬಂದ 3 ಆನೆಗಳ ಹಿಂಡು ರೈತರ ಜಮೀನುಗಳಿಗೆ ನಿರಂತರ ದಾಳಿ ನಡೆಸುತ್ತಿವೆ. ಬೇಗೂರು ಸಮೀಪದ ದೇಪೇಗೌಡನ ಹೊಸಪುರ ಗ್ರಾಮದ ಹಾಲಹಳ್ಳಿ ಶಿವಪ್ಪ ಎಂಬುವರಿಗೆ ಸೇರಿದ ಜಮೀನಿಗೆ ಅಳವಡಿಸಿದ್ದ ಸೋಲಾರ್ ಬೇಲಿಯನ್ನು ಕಿತ್ತೆಸೆದು ರಾಜಾರೋಷವಾಗಿ ಜಮೀನಿಗೆ ನುಗ್ಗಿವೆ.

Elephants pulls out agriculture pumpset to drink water

ಫಸಲಿಗೆ ಬಂದಿದ್ದ 200ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಮೂರು ಕಾಡಾನೆಗಳು ತಿಂದು, ಕಿತ್ತು, ತುಳಿದು ನಾಶಪಡಿಸಿವೆ. ಅಷ್ಟಕ್ಕೆ ಸುಮ್ಮನಾಗದೆ ಕೊಳವೆ ಬಾವಿಯಿಂದ ನೀರೆತ್ತುವ ಪೈಪುಗಳನ್ನು ಕಿತ್ತು ಬಿಸಾಡುವ ಮೂಲಕ ನೀರು ಹುಡುಕುವ ಯತ್ನ ನಡೆಸಿವೆ. ಇದರಿಂದ ಕಷ್ಟ ಪಟ್ಟು ಬೆಳೆದ ಬೆಳೆ ಮಾತ್ರವಲ್ಲ, ಬಂಡವಾಳ ಹಾಕಿ ತಂದಿದ್ದ ಮೋಟಾರ್ ಮತ್ತು ಪೈಪ್ ಗಳು ನಾಶವಾಗಿವೆ.

ಇಷ್ಟಕ್ಕೆ ಸುಮ್ಮನಾಗದ ಕಾಡಾನೆಗಳು, ಅಲ್ಲಿಂದ ತೆರಳಿ ಸಮೀಪದ ಸಿದ್ದೇಗೌಡ, ಚಿನ್ನಸ್ವಾಮಿ, ಕಾಳಯ್ಯ ಎಂಬುವರ ಜಮೀನಿಗೂ ನುಗ್ಗಿ ಬಾಳೆ ಗಿಡಗಳನ್ನು ತಿಂದು, ಕಿತ್ತೆಸೆದಿವೆ. ಸಾಗಿದ ಹಾದಿಯಲ್ಲೆಲ್ಲ ರೈತರು ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಿವೆ.[ನೆಲಮಂಗಲ, ಕಾಡಾನೆ ತುಳಿತಕ್ಕೆ ಯುವಕ ಬಲಿ: ಗ್ರಾಮಸ್ಥರ ಆಕ್ರೋಶ]

ಹಗಲು- ರಾತ್ರಿ ಎನ್ನದೆ ಕಷ್ಟಪಟ್ಟು ದುಡಿದ ಬೆಳೆ ಫಸಲಿಗೆ ಬರುವ ವೇಳೆಗೆ ಕಾಡಾನೆಗಳ ದಾಳಿಗೆ ತುತ್ತಾಗಿ ನಷ್ಟವಾಗುತ್ತಿರುವುದರಿಂದ ಈ ವ್ಯಾಪ್ತಿಯ ರೈತರಿಗೆ ಕೃಷಿ ಮಾಡಲು ಆಸಕ್ತಿಯೇ ಹೋಗಿದೆ. ಇನ್ನು ನಾಶವಾದ ಫಸಲಿಗೂ ಅರಣ್ಯ ಇಲಾಖೆಯಿಂದ ಸಮರ್ಪಕ ಮತ್ತು ಸಕಾಲಿಕವಾಗಿ ಪರಿಹಾರ ಸಿಗುತ್ತಿಲ್ಲ. ಇದರಿಂದ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ.

6 ತಿಂಗಳ ಹಿಂದೆ ಜೋಳ ಬೆಳೆದಿದ್ದೆವು. ಆಗ ಕಾಡಾನೆಗಳು ದಾಳಿ ಮಾಡಿ, ನಾಶ ಮಾಡಿದ್ದವು. ಇದರ ಪರಿಹಾರ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಈ ವರೆಗೂ ಬಂದಿಲ್ಲ ಎನ್ನುವ ರಾಜು, ಹೀಗಾದರೆ ನಮ್ಮಂತ ರೈತರು ಹೇಗೆ ಜೀವನ ಮಾಡುವುದು ಎಂದು ಅಳಲು ತೋಡಿಕೊಳ್ಳುತ್ತಾರೆ.

ಮುಂದಿನ ಬೇಸಿಗೆಯ ದಿನಗಳಲ್ಲಿ ಇನ್ನಷ್ಟು ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳು ಅರಣ್ಯದಿಂದ ನಾಡಿಗೆ ಬರುವ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಅರಣ್ಯ ಇಲಾಖೆ ಇದನ್ನು ತಪ್ಪಿಸಿ ರೈತರನ್ನು ಕಾಪಾಡಲು ಅಗತ್ಯ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

English summary
Elephants pulls out agriculture pumpset in Bandipur national park surrounding area, Chamarajanagar district. Faramers urges forest department officers to take precautionary measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X