ಹಾಸನೂರಿನಲ್ಲಿ ಕಬ್ಬಿನ ಲಾರಿ ಅಡ್ಡ ಹಾಕಿದ ಒಂಟಿ ಸಲಗ
ಚಾಮರಾಜನಗರ, ಜೂನ್ 25: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಗಜರಾಜ, ಆನಂದವಾಗಿ ಕಬ್ಬಿನ ಸಿಹಿ ಸವಿಯುತ್ತಾ ರಸ್ತೆ ಮಧ್ಯದಲ್ಲಿಯೇ ನಿಂತ ಪರಿಣಾಮ ಕೆಲಕಾಲ ವಾಹನ ಸಂಚಾರ ಬಂದ್ ಆದ ಪ್ರಸಂಗ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿರುವ ತಮಿಳುನಾಡಿನ ಹಾಸನೂರಿನಲ್ಲಿ ನಡೆದಿದೆ.
ಕಬ್ಬು ತುಂಬಿಕೊಂಡು ಸತ್ಯಮಂಗಲದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಲಾರಿಗೆ ಅಡ್ಡಲಾಗಿ ಬಂದ ಗಜರಾಜ, ಕಬ್ಬು ತಿನ್ನುತ್ತ ಅಲ್ಲೇ ನಿಂತಿದ್ದ. ರಸ್ತೆಯಲ್ಲಿ ನಿಂತ ಒಂಟಿ ಸಲಗನ ಕಂಡು ಭಯಭೀತರಾದ ಪ್ರಯಾಣಿಕರು ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದು ನಿಂತಿದ್ದರು.

ಒಂಟಿ ಸಲಗನ ತುಂಟಾಟ ನೋಡಿ, ಪ್ರಯಾಣಿಕರು ಭಯದ ನಡುವೆಯೂ ಸಂತಸಗೊಂಡರು. ಕೆಲವರು ಆನೆ ಕಬ್ಬು ತಿನ್ನುತ್ತಿದ್ದುದನ್ನು ವೀಡಿಯೋ ಮಾಡಿದರು. ಸುಮಾರು ಅರ್ಧ ಗಂಟೆ ಕಾಲ ರಸ್ತೆಯಿಂದ ಕದಲದ ಗಜರಾಜನಿಂದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಲಕಾಲ ಸಂಚಾರ ಬಂದ್‌ಆಗಿತ್ತು. ಇಷ್ಟಾದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications