ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
ಚಾಮರಾಜನಗರ, ಏಪ್ರಿಲ್, 18: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ರಂಗೇರಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಜನರು ಅಭ್ಯರ್ಥಿಗಳ ಬಳಿ ತುಂಬಾ ಬೇಡಿಕೆಗಳನ್ನು ಇಟ್ಟಿದ್ದಾರೆ. ಅದೇ ರೀತಿ ಇದೀಗ ಚಾಮರಾಜನಗರ ಜಿಲ್ಲೆಯ ಹಲವು ಹಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಾದರೆ ಜನರು ಈ ನಿರ್ಧಾರ ಮಾಡಿದ್ದೇಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮಗಳು ತಮಗೆ ಮೂಲಸೌಕರ್ಯ ಒದಗಿಸಿಲ್ಲ, ಸಾಗುವಳಿಗೆ ಅವಕಾಶ ಕೊಟ್ಟಿಲ್ಲ ಎಂದು ಆರೋಪಿಸಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರದ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಹೊಸಪೋಡು, ಬಂಗ್ಲೆಪೋಡು, ಮುತ್ತುಗದ್ದೆಗದ್ದೆ, ಯರಕನಗದ್ದೆ, ಬಂಗ್ಲೆಪೋಡು, ಸೀಗೆಬೆಟ್ಟ, ಮಂಜಿಗುಂಡಿ, ಕಲ್ಯಾಣಿಪೋಡುಗಳಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್‌ಗಳನ್ನು ಸೋಲಿಗ ಸಮುದಾಯದ ಜನರು ಹಾಕಿದ್ದಾರೆ.

ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ನೀಡಬೇಕು, ಈಗಾಗಲೇ ಜಮೀನು ನೀಡಿರುವವರಿಗೆ ಆರ್.ಟಿ.ಸಿ ನೀಡಬೇಕು. ಇಲ್ಲದಿದ್ದರೇ ಮತ ಹಾಕುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮೂಡಹಳ್ಳಿ ಗ್ರಾಮಸ್ಥರು ಕೂಡ ಮುಖ್ಯರಸ್ತೆ, ಶಾಲೆ, ಅಂಗನವಾಡಿ, ಬಸ್ ಸೌಲಭ್ಯ, ನ್ಯಾಯ ಬೆಲೆ ಅಂಗಡಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.
ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಪ್ಲೆಕ್ಸ್ ಹಾಕಲಾಗಿದ್ದು, ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದಿದ್ದರೇ ಏಪ್ರಿಲ್ 26ರಂದು ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮುಂಟಿಪುರ ಹಾಗೂ ಬರಗಿ ಕಾಲೋನಿ ಗ್ರಾಮಸ್ಥರು ಕೂಡ ಚುನಾವಣಾ ಬಹಿಷ್ಕಾರ ಮಾಡಿದ್ದಾರೆ. ಗ್ರಾಮದಲ್ಲಿ 60 ವರ್ಷದ ಹಿಂದೆ ಸರ್ಕಾರ ಸಾಗುವಳಿ ಚೀಟಿ ನೀಡಿದ್ದರೂ ಕೂಡ ದುರಸ್ತಿ ಮಾಡಿಲ್ಲ, ಹೀಗಾಗಿ ಅರಣ್ಯ ಇಲಾಖೆ ತಮ್ಮ ಭೂಮಿಗೆ ಬೇಲಿ ಹಾಕಿಕೊಂಡಿದೆ. ಕೂಡಲೇ ತಮಗೆ ತಮ್ಮ ಭೂಮಿ ಕೊಡಿಸಬೇಕು, ಇಲ್ಲದಿದ್ದರೇ ಮತ ಹಾಕುವುದಿಲ್ಲ ಎಂದು ಎಚ್ಚರಿಸಿದ್ದಾರೆ.












Click it and Unblock the Notifications