• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ ಒಂದೂವರೆ ವರ್ಷದಲ್ಲಿ 8 ಮೆಡಿಕಲ್ ಕಾಲೇಜು: ಮುಖ್ಯಮಂತ್ರಿ

|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 7, ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಇನ್ನೂ ಎಂಟು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಆನುಮತಿ ನೀಡಿದೆ. ಈ ಸರ್ಕಾರದ ಅವಧಿಯೊಳಗೆ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಎಂಟು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಚಾಮರಾಜನಗರಕ್ಕೆ ಬರದಿದ್ದರೆ ಕರ್ತವ್ಯ ಲೋಪ:

"ನಾನು ಚಾಮರಾಜನಗರಕ್ಕೆ ಬರುವುದರ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಆದರೆ, ನಾನು ಹೀಗೆ ಸಂಕುಚಿತವಾಗಿ ಯೋಚಿಸುವುದಿಲ್ಲ. ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಕೆಲಸಗಳನ್ನು ಮಾಡಿದರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಅಂತಹ ನಂಬಿಕೆಗಳಿಗೆ ನಾನು ಬೆಲೆ ನೀಡುವುದಿಲ್ಲ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

'ಚಾಮರಾಜನಗರವೂ ಸಹ ರಾಜ್ಯದ ಒಂದು ಅಂಗ. ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಾರದಿದ್ದರೆ ಕರ್ತವ್ಯ ಲೋಪವಾಗುತ್ತದೆ. ಈ ಹಿಂದೆ ನಡೆದಿದ್ದ ಅಧಿಕಾರಿಗಳ ಸಭೆಯಲ್ಲಿ ಆಗಲೇ ಹೇಳಿದ್ದೆ. ನಿಮ್ಮ ಜಿಲ್ಲೆಗೆ ಬರುತ್ತೇನೆ ಎಂದು. ಇಂದು ರಾಷ್ಟ್ರಪತಿಗಳೊಂದಿಗೆ ಬರುವ ಸೌಭಾಗ್ಯ ಸಿಕ್ಕಿದೆ. ಇನ್ನು ಮುಂದೆಯೂ ಬಂದು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸುತ್ತೇನೆ' ಎಂದು ಹೇಳಿದರು.

450 ಹಾಸಿಗೆಗಳ ಆಸ್ಪತ್ರೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, "ಚಾಮರಾಜನಗರ ವೈದ್ಯಕೀಯ ಸಂಸ್ಥೆಯಲ್ಲಿ 450 ಹಾಸಿಗೆಗಳ ಹೊಸ ಆರೋಗ್ಯ ಸೌಲಭ್ಯ ನೀಡಲಾಗಿದೆ. ಇದು ದುರ್ಬಲ ವರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಆರೋಗ್ಯ ಕ್ಷೇತ್ರಕ್ಕೆ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಒತ್ತು ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೂಡ ಈ ಸಂಸ್ಥೆ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ" ಎಂದರು.

Eight more medical colleges will be set up in the state - CM Basavaraj Bommai

ವೈದ್ಯಕೀಯ ಸೀಟುಗಳಲ್ಲಿ ಶೇ.50 ರಷ್ಟು ಹಾಗೂ ಪಿಜಿ ಸೀಟುಗಳಲ್ಲಿ ಶೇ.80 ರಷ್ಟು ಸೀಟುಗಳು ಹೆಚ್ಚಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಪ್ರಧಾನಿಗಳು ಹೊಸ ಮಾನವ ಸಂಪನ್ಮೂಲ ತಂದಿದ್ದಾರೆ. ಇಂದು ಕೂಡ ಪಿಎಂ ಕೇರ್ಸ್ ಫಂಡ್ ನಡಿ ವಿವಿಧೆಡೆ ಆಕ್ಸಿಜನ್ ಘಟಕಗಳನ್ನು ಉದ್ಘಾಟಿಸಲಾಗಿದೆ. ರಾಜ್ಯದಲ್ಲಿ ವೆಂಟಿಲೇಟರ್, ಆಕ್ಸಿಜನ್ ಹಾಸಿಗೆ, ಆಕ್ಸಿಜನ್ ಸಂಗ್ರಹಣೆ ಹೆಚ್ಚಾಗಿದೆ. ಈ ಮೂಲಕ ರಾಜ್ಯದ ಆರೋಗ್ಯ ವಲಯ ಬಲವಾಗಿದೆ ಎಂದರು.

ಈ ಬಾರಿ ರಾಜ್ಯದಲ್ಲಿ ಇತಿಹಾಸದಲ್ಲಿ ಹಿಂದೆ ಎಲ್ಲೂ ಇಲ್ಲದಂತೆ 4 ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದೆ. ಲಸಿಕೆ ಬಗ್ಗೆ ಅನೇಕರು ಟೀಕೆಗಳನ್ನು ಮಾಡಿದ್ದರು. ಲಸಿಕೆ ಇದೇ ರೀತಿ ನೀಡಿದರೆ 2024 ಕ್ಕೆ ಲಸಿಕಾಕರಣ ಮುಗಿಯಲಿದೆ ಎಂದು ಹೇಳಿದ್ದರು. ಆದರೆ ಇಂದು ದೇಶದಲ್ಲಿ 93 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಎಲ್ಲ ಕಡೆ ಅತಿ ಹೆಚ್ಚು ಲಸಿಕೆ ನೀಡಿ, ಶೇ.85ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೇ.30 ರಷ್ಟು ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಲಸಿಕೆ ಪಡೆದು ಕೋವಿಡ್ ಅನ್ನು ನಾಶ ಮಾಡಬೇಕು ಎಂದು ಸಚಿವ ಸುಧಾಕರ್ ವಿವರಿಸಿದರು.

ಭಾರತ ವಿವಿಧತೆಯನ್ನು ಹೊಂದಿರುವ ದೇಶ. ಕೋವಿಡ್ ಸಾಂಕ್ರಾಮಿಕವು ನಮ್ಮ ದೇಶ ಏಕತೆಯನ್ನು ಹೊಂದಿರುವ ದೇಶ ಎಂಬುದನ್ನು ಸಾಬೀತುಪಡಿಸಿದೆ. ಸಾಂಕ್ರಾಮಿಕದಲ್ಲೂ ಒಗ್ಗಟ್ಟು ಹೊಂದಿದ್ದೇವೆ ಎಂಬುದು ಕಂಡುಬಂದಿದೆ. ಈ ಸಾಂಕ್ರಾಮಿಕವನ್ನು ತಡೆಗಟ್ಟಲು ಎಲ್ಲರ ಒಗ್ಗಟ್ಟು ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ಭೀಕರ ಸಾಂಕ್ರಾಮಿಕಕ್ಕೆ ಉತ್ತರ ನೀಡಿದೆ. 2014 ರಲ್ಲಿ ಪ್ರಧಾನಿಯಾದ ಅವರು, 7 ವರ್ಷಗಳಲ್ಲಿ 157 ಹೊಸ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಿದ್ದಾರೆ. 30,000 ಗೂ ಅಧಿಕ ಹೊಸ ಮೆಡಿಕಲ್ ಸೀಟುಗಳನ್ನು ನೀಡಲಾಗಿದೆ ಎಂದು ಹೇಳಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸವಿತಾ ಕೋವಿಂದ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಚಿವರಾದ ಎಸ್.ಟಿ. ಸೋಮಶೇಖರ್ ಉಪಸ್ಥಿತರಿದ್ದರು.

Recommended Video

   ಮತ್ತಷ್ಟು ಬಲಿಷ್ವ ವಾಗಲಿದೆ ನಮ್ಮ ವಾಯುಪಡೆ | Oneindia Kannada

   English summary
   Eight more medical colleges will be set up in the state in the next one-and-a-half years- Chief Minister Basavaraj Bommai
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X