ತಮಿಳುನಾಡು ಗಡಿಯಲ್ಲಿರುವ ಕೊಂಗಳ್ಳಿ ಮಲ್ಲಿಕಾರ್ಜುನನಿಗೆ ದೀಪಾವಳಿ ವಿಶೇಷ ಪೂಜೆ

By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಅಕ್ಟೋಬರ್ 20: ಗುಂಡ್ಲುಪೇಟೆ ತಾಲೂಕಿನ ಗಡಿಭಾಗ ತಾಳವಾಡಿ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀ ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಗುಂಡ್ಲುಪೇಟೆಯಿಂದ ಸುಮಾರು 32 ಕಿಮೀ ದೂರದಲ್ಲಿ ತಮಿಳುನಾಡಿನ ತಾಳವಾಡಿ ಪಿರ್ಕಾದಲ್ಲಿರುವ ಬೆಟ್ಟಕ್ಕೆ ದೀಪಾವಳಿ ಹಬ್ಬ ಹಾಗೂ ಕಾರ್ತಿಕ ಮಾಸಗಳಲ್ಲಿ ಅತಿ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.

Diwali special Puja for Kongalli Mallikarjuna on the border of Tamil Nadu

ದೀಪಾವಳಿ ಹಿನ್ನಲೆಯಲ್ಲಿ ಜಿಲ್ಲೆ ಮಾತ್ರವಲ್ಲದೆ ಹೊರ ಊರುಗಳಿಂದ ಆಗಮಿಸಿದ ಭಕ್ತರು ಕೊಂಗಳ್ಳಿ ಮಲ್ಲಿಕಾರ್ಜುನನಿಗೆ ವಿಶೇಷ ಪೂಜೆ ಸಲ್ಲಿಸಿದರು. ದ್ವಿಚಕ್ರ ವಾಹನಗಳು, ಆಟೋ, ಕಾರು. ಟೆಂಪೋಗಳಲ್ಲಿ ಗುಂಪುಗುಂಪಾಗಿ ಆಗಮಿಸುತ್ತಿರುವ ಭಕ್ತರು ಹರಕೆ ಸಲ್ಲಿಸಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದಾರೆ.

ಹಬ್ಬದ ಹಿನ್ನಲೆಯಲ್ಲಿ ಕೊಂಗಳ್ಳಿ ಮಲ್ಲಿಕಾರ್ಜುನನಿಗೆ ಹುಲಿವಾಹನ ಸೇವೆ ಹಾಗೂ ವಿಶೇಷ ಪೂಜೆಗಳನ್ನು ಭಕ್ತರು ಸಲ್ಲಿಸುತ್ತಿದ್ದಾರೆ. ಹರಕೆ ಹೊತ್ತವರು ಮಾತ್ರವಲ್ಲದೆ ಕೆಲವು ಗ್ರಾಮಗಳ ಜನರು ಸಾಮೂಹಿಕವಾಗಿ ತೆರಳಿ ಪೂಜೆ ಸಲ್ಲಿಸಿ, ಸಾಮೂಹಿಕ ಭೋಜನ ಮಾಡಿ ಹಿಂತಿರುಗುತ್ತಿರುವುದು ಕಂಡು ಬರುತ್ತಿದೆ.

ತಮಿಳುನಾಡಿನ ಸರ್ಕಾರವು ಇತ್ತೀಚೆಗೆ ಬೆಟ್ಟದಲ್ಲಿ ಉಳಿಯುವವರಿಗೆ ಸಾಕಷ್ಟು ವಸತಿ ಗೃಹಗಳನ್ನು ಹಾಗೂ ನೀರಿನ ಸೌಲಭ್ಯಗಳನ್ನು ಒದಗಿಸಿದೆ. ಮೊದಲೆಲ್ಲ ವಿದ್ಯುತ್ ಸಂಪರ್ಕ ಇರಲಿಲ್ಲವಾದರೂ ಇತ್ತೀಚೆಗೆ ವಿದ್ಯುತ್ ಸೌಲಭ್ಯವೂ ಇದೆ. ಇನ್ನು ಭಕ್ತರಿಗೆ ಅಡುಗೆ ಮಾಡಲು ಬೇಕಾದ ಪಾತ್ರೆಗಳನ್ನು ದೇವಸ್ಥಾನದಿಂದಲೇ ನೀಡಲಾಗುತ್ತಿದೆ.

ನಿಸರ್ಗ ರಮಣೀಯ ತಾಣದಲ್ಲಿರುವ ಕೊಂಗಾಕಾರದ ಬೆಟ್ಟಗಳ ನಡುವೆ ಇರುವ ಕೊಂಗಳ್ಳಿ ಮಲ್ಲಿಕಾರ್ಜುನನ ಸನ್ನಿಧಿಗೆ ಹೋಗುವವರು ಹೆಚ್ಚಿನವರು ಕರ್ನಾಟಕದವರೇ ಆಗಿದ್ದು, ವರ್ಷದ ಕಾರ್ತಿಕ ಮಾಸದಲ್ಲಿ ತಪ್ಪದೆ ಭೇಟಿ ನೀಡಿ ತಮ್ಮ ಕುಟುಂಬ ಹಾಗೂ ಜಾನುವಾರುಗಳ ರಕ್ಷಣೆಗೆ ಮೊರೆಯಿಟ್ಟು ಹರಕೆ ಸಲ್ಲಿಸಿ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ಈ ಸನ್ನಿಧಿಗೆ ಮಹಿಳೆಯರಿಗೆ ಪ್ರವೇಶ ನಿಷಿದ್ಧವಾಗಿದ್ದು ಮಹಿಳೆಯರು ಇಲ್ಲಿಗೆ ಭೇಟಿ ನೀಡುವುದಿಲ್ಲ. ಗಂಡಸರೇ ದೇವಾಲಯಕ್ಕೆ ತೆರಳಿ ಪೂಜಾಕಾರ್ಯಗಳನ್ನು ನೆರವೇರಿಸಿಕೊಂಡು ಬರುವುದು ರೂಢಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The devotees visit the historic Sri Kongalli Hill Mallikarjuna temple and offer special prayers for the Diwali festival. The temple is located in Talavadi on the border of Gundlupet Taluk.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ