Kabini Dam: ಮುಂದುವರೆದ ಮುಂಗಾರು ಮಳೆ: ಕಬಿನಿ ಜಲಾಶಯ ವ್ಯಾಪ್ತಿಯ ಕೆರೆಗಳಿಗೆ ನೀರು
ಚಾಮರಾಜನಗರ, ಜುಲೈ, 07: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದ ಪರಿಣಾಮ ನದಿ-ಹಳ್ಳ ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ಕೂಡ ಹೆಚ್ಚಾಗಿದೆ. ಹಾಗೆಯೇ ಕಬಿನಿ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆ ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಮಾಹಿತಿ ಇಲ್ಲಿದೆ ಗಮನಿಸಿ.
2024-25ನೇ ಸಾಲಿನ ವರ್ಷದಲ್ಲಿ ಕಬಿನಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಜಲಾಶಯಕ್ಕೆ ಒಳಹರಿವು ಬರುತ್ತಿದೆ. ಒಳಹರಿವಿನ ನೀರಿನ ಪ್ರಮಾಣ ಹಾಗೂ ಒಟ್ಟಾರೆ ಜಲಾಶಯದಲ್ಲಿ ಸಂಗ್ರಹ ಆಗಿರುವ ನೀರಿನ ಲಭ್ಯತೆ ಮೇರೆಗೆ ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮುಖಾಂತರ ಜನ ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುವಂತೆ ಕೆರೆ-ಕಟ್ಟೆಗಳಿಗೆ ಜುಲೈ 10 ರಿಂದ 25ರವರೆಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

ಕಬಿನಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸಿ ಕೆರೆ ಕಟ್ಟೆಗಳಿಗೆ ಕುಡಿಯುವ ಮತ್ತು ಜನ ಜಾನುವಾರುಗಳ ಉಪಯೋಗಕ್ಕಾಗಿ ಮಾತ್ರ ನೀರನ್ನು ಬಳಸಬೇಕು. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಬರುವ ಒಳಹರಿವಿನ ಪ್ರಮಾಣವನ್ನು ಆಧರಿಸಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ತೀರ್ಮಾನಿಸಲಾಗುತ್ತದೆ ಎಂದು ಕಬಿನಿ ನೀರಾವರಿ ಸಲಹಾ ಸಮಿತಿ ಮತ್ತು ವರಣಾ ನಾಲಾ ವೃತ್ತ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಮಹೇಶ್ ಕೆ ತಿಳಿಸಿದ್ದಾರೆ.
2024-25ನೇ ಸಾಲಿನ ಖಾರೀಪ್ ಬೆಳೆಗಳಿಗೆ ನಾಲೆಗಳ ಮುಖೇನ ನೀರು ಬಿಡುವ ಬಗ್ಗೆ ಕಬಿನಿ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ಸಮಿತಿಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಕಬಿನಿ ನೀರಾವರಿ ಸಲಹಾ ಸಮಿತಿಯ ಕಬಿನಿ ಮತ್ತು ವರಣಾ ನಾಲಾ ವೃತ್ತ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಮಹೇಶ ಕೆ ತಿಳಿಸಿದ್ದಾರೆ.
ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು: ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 47 ಹಾಗೂ ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ತುಂಬಿಸಲು ಪ್ರಾಯೋಗಿಕ ಹರಿವು ಆರಂಭಿಸಲಾಗಿದೆ.
ತುಂಗಭದ್ರಾ ನದಿಗೆ ದೀಟೂರು ಬಳಿ ನಿರ್ಮಿಸಿರುವ ಪಂಪ್‌ಹೌಸ್ ಮತ್ತು ಜಗಳೂರು ತಾಲ್ಲೂಕಿನ ತುಪ್ಪದಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ವೀಕ್ಷಣೆ ಮಾಡಿದರು.
ಜಗಳೂರು ತಾಲ್ಲೂಕಿನ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯನ್ನು 660.34 ಕೋಟಿ ರೂಪಾಯಿಯಲ್ಲಿ ಕೈಗೊಂಡು 2019ರ ಡಿಸೆಂಬರ್ 9ರಿಂದ ಕಾಮಗಾರಿ ಆರಂಭಿಸಲಾಗಿದೆ. ಯೋಜನೆಯಡಿ 1.379 ಟಿಎಂಸಿ ನೀರು ಮಳೆಗಾಲದಲ್ಲಿ ಬಳಕೆ ಮಾಡಿಕೊಂಡು ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಯೋಜನೆಯಿಂದ 65 ಗ್ರಾಮಗಳಿಗೆ ಅನುಕೂಲ ಆಗಲಿದ್ದು 1 ಲಕ್ಷ ರೈತರಿಗಿಂತ ಹೆಚ್ಚು ಜನರಿಗೆ ಉಪಯೋಗ ಆಗುವುದರ ಜೊತೆಗೆ ತಾಲ್ಲೂಕಿನ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಯೋಜನೆಯಡಿ 220.68 ಕಿಲೋ ಮೀಟರ್ ಮುಖ್ಯ ಪೈಪ್ ಲೈನ್ ಉದ್ದ ಇರಲಿದೆ.
ಎಂ.ಎಸ್ ಪೈಪ್ 142.62 ಕಿಲೋ ಮೀಟರ್ ಇದ್ದು, 115 ಕಿಲೋ ಮೀಟರ್ ಅಳವಡಿಸಲಾಗಿದೆ. ಜಾಕ್ ವೆಲ್ ಮತ್ತು ಪಂಪ್ ಹೌಸ್ ಕಾಮಗಾರಿ ಮುಗಿದಿರುವುದರಿಂದ ಈಗಾಗಲೇ ನೀರೆತ್ತುವ ಪ್ರಾಯೋಗಿಕ ಕಾರ್ಯ ಆರಂಭಿಸಲಾಗಿದ್ದು, ಪ್ರಸಕ್ತ ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ಪಂಪ್ ಮಾಡಿ ಭರ್ತಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ.ತಿಳಿಸಿದರು. ಈ ವೇಳೆ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications