ಚಾಮರಾಜನಗರ: ಬಾವಿಯಲ್ಲಿ ಕೊಳೆತ ನವಜಾತ ಶಿಶು ಪತ್ತೆ
ಚಾಮರಾಜನಗರ, ಸೆಪ್ಟೆಂಬರ್ 9: ಯಾರೋ ಮಹಿಳೆಯೊಬ್ಬಳು ತನ್ನ ಕರಳು ಕುಡಿಯನ್ನೇ ಬಾವಿಗೆ ಎಸೆದು ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.
ನವಜಾತ ಶಿಶು ಯಾರದ್ದು ಎಂಬುದು ಗೊತ್ತಾಗಿಲ್ಲ. ಮಗುವಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಕಳೆದ ಎರಡು ದಿನಗಳ ಹಿಂದೆಯೇ ಎಸೆದು ಹೋಗಿರಬಹುದೆಂದು ಶಂಕಿಸಲಾಗಿದೆ.

ನವಜಾತ ಗಂಡು ಶಿಶು ಹನೂರು ಪಟ್ಟಣದ ಹೊರವಲಯದಲ್ಲಿರುವ ತಿಪ್ಪರಾಯ ಎಂಬುವರಿಗೆ ಸೇರಿದ ಬಾವಿಯಲ್ಲಿ ಪತ್ತೆಯಾಗಿದೆ. ಬಹುಶಃ ಅನೈತಿಕ ಸಂಬಂಧದಿಂದ ಹುಟ್ಟಿದ ಮಗು ಇದಾಗಿರಬಹುದೇ? ಅದರಿಂದ ಸಮಾಜಕ್ಕೆ ಹೆದರಿ ಮಗುವನ್ನು ಬಾವಿಗೆ ಎಸೆದು ಹೋಗಿರಬಹುದೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಯಾರೋ ದಾರಿ ಹೋಕರು ಬಾವಿಗೆ ಇಣುಕಿ ನೋಡಿದಾಗ ಮಗುವಿನ ಶವವಿರುವುದು ಗೋಚರಿಸಿದ್ದು, ಈ ವಿಷಯವನ್ನು ಹನೂರು ಪೊಲೀಸರ ಗಮನಕ್ಕೆ ತಂದ ಕಾರಣದಿಂದ ಸ್ಥಳಕ್ಕೆ ಬಂದ ಪೊಲೀಸರು ಶಿಶುವಿನ ಮೃತ ದೇಹವನ್ನು ಬಾವಿಯಿಂದ ಹೊರತೆಗೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications