ಕಾಂಗ್ರೆಸ್ ಶಾಸಕರನ್ನು ಭ್ರಷ್ಟರನ್ನಾಗಿ ಮಾಡಿದವರೇ ಬಿಜೆಪಿಗರು- ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ, ಆಗಸ್ಟ್ 23: ರಾಜಕೀಯವನ್ನು ಕಲುಷಿತ ಮಾಡಿದವರೇ ಬಿಜೆಪಿಯವರು. ಅಧಿಕಾರಕ್ಕಾಗಿ ಎಲ್ಲೆಲ್ಲೋ ಇದ್ದವರನ್ನು ಹಿಡಿದಿಟ್ಟುಕೊಂಡಿದ್ದು ಯಾಕೆ ಎಂದು ಬಿಜೆಪಿ ವಿರುದ್ಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಕಿಡಿಕಾರಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಡಿಗೆ ಸಿಪಾಯಿ ದೇಶ ಕಾಯ್ತಾನಾ ಎನ್ನುವ ಹಾಗೆ ಕಾಂಗ್ರೆಸ್‌ನಲ್ಲಿ ಇದ್ದವರನ್ನು ಬಿಜೆಪಿ ಕರೆದುಕೊಂಡಿದ್ದು ಯಾಕೆ..? ಇವತ್ತು ರಾಜಕೀಯವನ್ನ ಹೊಲಸೆಬ್ಬಿಸಿದವರು ಈ ಬಿಜೆಪಿಯವರು, ಅದೇ ಅವರಿಗೆ ಈಗ ತಿರುಗು ಬಾಣ ಆಗಿದೆ, ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದಾರೆ ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದರು.

ಮಾತು ಮುಂದುವರಿಸಿದ ಅವರು, ರಾಜ್ಯ ರಾಜಕೀಯದಲ್ಲಿ ಆಪರೇಷನ್ ಮಾಡುವುದನ್ನು ಕಲಿಸಿದವರೇ ಬಿಜೆಪಿಯವರು. ರಾಜಕೀಯವನ್ನು ಕಲುಷಿತ ಮಾಡಿ, ಕಾಂಗ್ರೆಸ್ ಶಾಸಕರನ್ನು ಭ್ರಷ್ಟರನ್ನಾಗಿ ಮಾಡಿದವರೆ ಬಿಜೆಪಿಗರು. ಈಗ ಅವರಿಗೆ ತಿರುಗು ಬಾಣವಾಗಿದೆ. ಆಪರೇಷನ್ ಹಸ್ತ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್‌ನ 40 ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಮಾಜಿ ಶಾಸಕ ಅಮೃತ ದೇಸಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ,
ಅವನ್ಯಾವನೋ ತಲೆ ಕೆಟ್ಟವನು ಹೇಳಿರಬೇಕು. ನಮ್ಮ ಸರ್ಕಾರ ಬಂದು ಕೇವಲ ಮೂರು ತಿಂಗಳಾಗಿದೆ. ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇಂತಹ ಒಂದೇ ಒಂದು ಕಾರ್ಯಕ್ರಮ ತರಲಿಲ್ಲ ಅವರು ಎಂದು ಟೀಕಿಸಿದರು.
ಇನ್ನು ಬಿಜೆಪಿಯಿಂದ ಕಾಂಗ್ರೆಸ್ ಬರುತ್ತಿರುವ ಶಾಸಕರಿಗೆ ಸ್ಥಾನಮಾನ ಸಿಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಈಗಲೇ 136 ಜನ ಇದ್ದೇವೆ. ಯಾರನ್ನೂ ಕರೆಯುವ ಪ್ರಮೆಯವೇ ಇಲ್ಲ, ಅವರು ಕಾಂಗ್ರೆಸ್ ಸೇರುವುದೇ ಅವರಿಗೆ ಗೌರವ, ಅಲ್ಲಿನ ಸಿದ್ಧಾಂತ ಒಪ್ಪುತ್ತಿಲ್ಲ, ಅವರಿಗೆ ಬೆದರಿಕೆ ಹಾಕಿ ಕರೆಸಿಕೊಂಡಿದ್ದರು ಎಂದ ಅವರು ಕಾಂಗ್ರೆಸ್‌ಗೆ ಬರುವವರಿಗೆ ಯಾವುದೇ ಸ್ಥಾನಮಾನ ಕೊಡಲ್ಲ, ಅವರನ್ನು ಸೇರಿಸಿಕೊಳ್ಳುವುದೇ ಸ್ಥಾನಮಾನ ಕೊಟ್ಟ ಹಾಗೆ ಎಂದರು.
ಇನ್ನು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಆಪರೇಷನ್ ಹಸ್ತ್ದ ಮೂಲಕ ಬಿಜೆಪಿಯ 10ರಿಂದ 15 ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಸಹ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಸಚಿವರು ಹಾಗೂ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications