1 ಮತದ ಮೌಲ್ಯ ತಿಳಿಸಿಕೊಟ್ಟ ಧ್ರುವನಾರಾಯಣಗೆ ಮೊದಲ-ಕೊನೆಯ ಚುನಾವಣೆಯಲ್ಲಿ ಕಾಡಿದ ಸೋಲು
2004ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿ ಎಂಎಲ್ಎ ಚುನಾವಣೆಗೆ ನಿಂತಿದ್ದ ಧ್ರುವನಾರಾಯಣ ಕೇವಲ 1 ಮತದ ಅಂತರದಿಂದ ಪ್ರತಿಸ್ಪರ್ಧಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು.
ಚಾಮರಾಜನಗರ, ಮಾರ್ಚ್ 11: ಮೃದು ಭಾಷಿ, ಅಜಾತಶತ್ರು ವ್ಯಕ್ತಿತ್ವದ, ಸದಾ ಅಭಿವೃದ್ಧಿ, ಜನರ ಜೊತೆ ಇರುತ್ತಿದ್ದ ರಾಜಕಾರಣಿ ಎಂದು ಹೆಸರು ಪಡೆದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಇಡೀ ದೇಶಕ್ಕೆ 1 ಮತದ ಮೌಲ್ಯವನ್ನು ತೋರಿಸಿಕೊಟ್ಟವರು.
2004ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿ ಎಂಎಲ್ಎ ಚುನಾವಣೆಗೆ ನಿಂತಿದ್ದ ಧ್ರುವನಾರಾಯಣ ಕೇವಲ 1 ಮತದ ಅಂತರದಿಂದ ಪ್ರತಿಸ್ಪರ್ಧಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು.

ತಾನು ಮತ ಹಾಕದಿದ್ದರೇ ರಾಜ್ಯ ಏನು ಬದಲಾಗಲ್ಲ ಎಂಬ ಮನಸ್ಸಿನ ಜನರಿಗೆ ಒಂದು ಮತದ ಅಂತರದಲ್ಲಿ ವಿಧಾನಸಭೆ ಪ್ರವೇಶಿಸಿ ಮತಕ್ಕಿರುವ ಬೆಲೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದರು. ಅಂದು ರಾಜ್ಯದಲ್ಲಿ ಅತಿ ಹೆಚ್ಚಿನ ಮತದ ಅಂತರದಿಂದ ಗೆದ್ದ ಕೃಷ್ಣ ಬೈರೇಗೌಡ ಹಾಗೂ ಕಡಿಮೆ ಮತದ ಅಂತರದಿಂದ ಗೆದ್ದು ಬೀಗಿದ್ದ ಧ್ರುವನಾರಾಯಣ ಅವರಿಬ್ಬರನ್ನೂ ಕರೆದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸನ್ಮಾನಿಸಿದ್ದು ಇಂದು ಇತಿಹಾಸವಾಗಿದೆ.
ಇನ್ನೇನೂ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಧ್ರುವನಾರಾಯಣ ಸಕಲ ತಯಾರಿ ನಡೆಸಿದ್ದರು. ಕಾಂಗ್ರೆಸ್ ಟಿಕಟ್ ಅವರಿಗೆ ಅಂತಿಮ ಎನ್ನುವ ವಾತಾವರಣ, ಗೆಲ್ಲುವ ವಿಶ್ವಾಸ ಎರಡೂ ಕಾಂಗ್ರೆಸ್ ಪಾಳೇಯದಲ್ಲಿ ಮನೆ ಮಾಡಿತ್ತು. ಅಷ್ಟರಲ್ಲಾಗಲೇ, ಅವರ ನಿಧನ ಕಾಂಗ್ರೆಸ್‌ಗೆ ಬರಸಿಡಿಲನ್ನೇ ಬಡಿದಿದೆ.
ಮೊದಲ-ಕೊನೆಯ ಚುನಾವಣೆಯಲ್ಲಿ ಸೋಲು
ಧ್ರುವನಾರಾಯಣ 70-80ರ ದಶಕದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿ ಬಳಿಕ ರಾಜಶೇಖರಮೂರ್ತಿ ಅವರ ಗರಡಿಯಲ್ಲಿ ಪಳಗಿ 1999 ರಲ್ಲಿ ಬಿಜೆಪಿ ಚಿಹ್ನೆಯಡಿ ಸಂತೇಮರಹಳ್ಳಿ ಕ್ಷೇತ್ರದಿಂದ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ, 2004 ರಲ್ಲಿ ಅದೇ ಕ್ಷೇತ್ರದಿಂದ ಎಆರ್ ಕೆ ಅವರನ್ನು 1 ಮತದ ಅಂತರದಲ್ಲಿ ಸೋಲಿಸಿ ಶಾಸಕರಾದರು.
ಸಂತೇಮರಹಳ್ಳಿ ಕ್ಷೇತ್ರ ರದ್ದಾಗಿ ಕೊಳ್ಳೇಗಾಲ ಮೀಸಲು ಕ್ಷೇತ್ರ ಉದಯಿಸಿದ್ದರಿಂದ 2008 ರಲ್ಲಿ ಕೊಳ್ಳೇಗಾಲದಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಅದಾದ ನಂತರ 2009, 2014 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದ ಧ್ರುವ 2019ರಲ್ಲಿ ಎದುರಿಸಿದ್ದ ಲೋಕ ಚುನಾವಣೆಯೇ ಅವರ ಕೊನೆಯ ಚುನಾವಣೆ ಆಗಿತ್ತು. ಮೊದಲ ಹಾಗೂ ಕೊನೆಯ ಚುನಾವಣೆಯಲ್ಲಿ ಸೋಲು ಕಂಡು ವಿಧಿಯಾಟದ ಮುಂದೆಯೂ ಧ್ರುವ ಸೋಲು ಅನುಭವಿಸಿ ಅಪಾರ ಅಭಿಮಾನಿಗಳು, ಕಾರ್ಯಕರ್ತರನ್ನು ಅಗಲಿದ್ದಾರೆ.
ಹೆಚ್ಚು ಅನುದಾನ ತಂದ ರಾಜ್ಯದ ಮೊದಲ ಸಂಸದ
ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಧ್ರುವನಾರಾಯಣ ನಂಬರ್ ೧ ಸಂಸದ ಎನಿಸಿಕೊಂಡಿದ್ದರು. ರಾಜ್ಯದ ಸಂಸದರುಗಳ ಪೈಕಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದು, ಸಂಸತ್ತಿನಲ್ಲಿ ಭಾಗಿಯಾಗಿದ್ದು, ಹೆಚ್ಚು ಅನುದಾನ ತಂದ ರಾಜ್ಯದ ಮೊದಲ ಸಂಸದ ಎಂಬ ಹೆಗ್ಗಳಿಕೆ ಇವರದಾಗಿತ್ತು. ಕೃಷಿ ಎಂಎಸ್ಸಿ ಮಾಡಿದ್ದ ಧ್ರುವನಾರಾಯಣ ಅವರು ಚಾಮರಾಜನಗರಕ್ಕೆ ಕೃಷಿ ಕಾಲೇಜನ್ನು ತಂದಿದ್ದರು, ಲಾ ಕಾಲೇಜು ಮಂಜೂರು ಮಾಡಿಸಿದ್ದರು. ವಸತಿ ಶಾಲೆಗಳು, ಇಂಜಿನಿಯರಿಂಗ್ ಕಾಲೇಜು ಹೀಗೆ ಅಭಿವೃದ್ಧಿ ಮೂಲಕ ಜನರ ಮನಸ್ಸಿನಲ್ಲಿ ಉಳಿದ ವಿಶೇಷ ರಾಜಕಾರಣಿ ಧ್ರುವನಾರಾಯಣ ಆಗಿದ್ದಾರೆ.












Click it and Unblock the Notifications