ನವದೆಹಲಿಯಲ್ಲಿ ಸಿದ್ದರಾಮಯ್ಯ ಮಾಂಸಹಾರ ಸೇವನೆ ಮಾಡಿಲ್ಲ ಮಾರಾಯ.. ಸುಮ್ನೆ ಸುಳ್ ಹೇಳ್ತಾರೆ: ಹೀಗೇಳಿದ್ದು ಯಾರು?
ಚಾಮರಾಜನಗರ, ಫೆಬ್ರವರಿ, 08: ನವದೆಹಲಿಯಲ್ಲಿ ಸಿದ್ದರಾಮಯ್ಯ ಮಾಂಸಹಾರ ಸೇವನೆ ಮಾಡಿಲ್ಲ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿ, ಬಿಜೆಪಿಯವರು ಸುಮ್ಮನೆ ಸುಳ್ಳು ಹಬ್ಬಿಸುತ್ತಿದ್ದಾರೆ, ಸಿದ್ದರಾಮಯ್ಯ, ಸಚಿವ ವೆಂಕಟೇಶ್ ಅವರೆಲ್ಲಾ ಊಟ ಮಾಡದೇ ಹಾಗೆ ಹೊರಟುಬಿಟ್ಟರು. ನಾನು, ಮಹಾದೇವಪ್ಪ ಊಟ ಮಾಡಿದೆವು. ಒಂದು ನಿಮಿಷ ಕುಳಿತುಕೊಳ್ಳಿ ಎಂದು ಕೂರಿಸಿ ಎಲ್ಲರ ಒಟ್ಟಿಗೆ ಫೋಟೋ ತೆಗೆಯಲಾಗಿದೆ ಅಷ್ಟೇ, ಅವರು ಊಟ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆಗೆ ಪ್ರಬಲ ಅಭ್ಯರ್ಥಿ: ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಕಾಂಗ್ರೆಸ್ ಪರ ಒಲವಿದ್ದರೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ದಲಿತ ಮತಗಳನ್ನು ಸೆಳೆಯುವ ನಾಯಕ ಅಭ್ಯರ್ಥಿ ಆಗಲಿದ್ದಾರೆ. ಈ ಬಗ್ಗೆ ವರಿಷ್ಠರು ಸಭೆಗಳನ್ನು ನಡೆಸಿದ್ದಾರೆ ಎಂದರು.
ಕರ್ನಾಟಕದಲ್ಲಿ ನರೇಂದ್ರ ಮೋದಿ ಅಲೆ ಇಲ್ಲ, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ ಅಂಥಾ ಅವರಿಗೆ ಮತ ಹಾಕುತ್ತಾರೆ.? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಏನು ಮಾಡಲಿಲ್ಲ. ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣವನ್ನು ಕೊಡುತ್ತಿಲ್ಲ. ಹೀಗಾದಾಗ ಕರ್ನಾಟಕದ ಜನ ಮತ ಯಾಕೆ ಹಾಕುತ್ತಾರೆ ಎಂದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿ ಎಂದು ಕೇಳಿದಾಗ ಅಕ್ಕಿ ಇಲ್ಲ ಎಂದರು. ಈಗ 29 ರೂಪಾಯಿಗೆ ಅಕ್ಕಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಈ ಮೂಲಕ ವಾಮಮಾರ್ಗದ ರಾಜಕಾರಣ ಮಾಡುತ್ತಿದ್ದಾರೆ. ಸಂಸತ್ತಿನಲ್ಲಿ ಕಾಂಗ್ರೆಸ್ ಕುರಿತು ಹಾಗೆ-ಹೀಗೆ ಎಂದು ಮಾತನಾಡುತ್ತಾರೆ. ಅದನ್ನು ಹೇಳುವುದಕ್ಕಾ ಪ್ರಧಾನಿ ಇರುವುದು? ಯಾರು ಏನೆಂದು ಜನರು ತೀರ್ಮಾನ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಭಾಷಣದ ವಿರುದ್ಧ ವಾಗ್ದಾಳಿ ನಡೆಸಿದರು.
ಅನುದಾನ ಕೊರತೆ: ಅನುದಾನ ಕೊರತೆ ಎಂದು ಚಾಮರಾಜನಗರ ಜಿಲ್ಲೆಯ ಯಳಂದೂರು ತಹಶಿಲ್ದಾರ್ ಅಳಲು ತೋಡಿಕೊಂಡ ಘಟನೆ ಇಂದು ನಡೆದಿದೆ.
ಯಳಂದೂರಿನ ತಹಶಿಲ್ದಾರ್ ಕಚೇರಿಯಲ್ಲಿ ಇಂದು (ಫೆಬ್ರವರಿ 08) ಸವಿತಾ ಮಹರ್ಷಿ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸವಿತಾ ಸಮುದಾಯದ ಮುಖಂಡರು ಮಾತನಾಡಿ, ಸವಿತಾ ಮಹರ್ಷಿ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು. ಕಾಟಾಚಾರದ ಜಯಂತಿ ಆಚರಣೆ ಮಾಡುವುದು ಸರಿಯಲ್ಲ. ಮಹನೀಯರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು ಎಂದರು.
ತಹಶಿಲ್ದಾರ್ ಜಯಪ್ರಕಾಶ್ ಮಾತನಾಡಿ, ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ನಮ್ಮ ಸಂಬಳದ ಕಥೆ ಮುಂದೆ ಏನಾಗತ್ತೋ ಗೊತ್ತಿಲ್ಲ. ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಸರಳವಾಗಿ ಆಚರಿಸಿ ಮಹನೀಯರಿಗೆ ಗೌರವಿಸೋಣ ಎಂದಿದ್ದಾರೆ.












Click it and Unblock the Notifications