ಧೂಪ ಮಾರಾಟದಿಂದ ಮಕ್ಕಳ ಭವಿಷ್ಯಕ್ಕೆ ಹೊಗೆ!

By: ಬಿ. ಎಂ. ಲವಕುಮಾರ್
Subscribe to Oneindia Kannada

ಹನೂರು, ಅಕ್ಟೋಬರ್, 15: ಇಲ್ಲಿಯ ಮಾದಪ್ಪನ ಬೆಟ್ಟಕ್ಕೆ ತಲುಪುವ ಮುನ್ನ ಸಿಗುವ ತಾಳು ಬೆಟ್ಟದಲ್ಲಿ ಧೂಪ ಹಾಕಬೇಕೆನ್ನುವ ಸಂಪ್ರದಾಯ ಆಚರಣೆಯಲ್ಲಿದ್ದು ಅದರಂತೆ ಭಕ್ತರು ಹಿಂದಿನಿಂದಲೂ ಧೂಪ ಹಾಕುವ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದಾರೆ.

ಈ ನಂಬಿಕೆಯಿಂದ ಇಲ್ಲಿ ಧೂಪ ಮಾರಾಟ ಭರದಿಂದ ಸಾಗುತ್ತಿದ್ದು, ಇದು ಈ ಭಾಗದ ಕೆಲವು ಮಕ್ಕಳ ಭವಿಷ್ಯಕ್ಕೆ ಶಾಪವಾಗಿ ಪರಿಣಮಿಸಿದೆ. ಕಾರಣ ಇಲ್ಲಿನ ಮಕ್ಕಳು ಶಾಲೆ ಬಿಟ್ಟು ಧೂಪ ಮಾರುವ ಕಾಯಕದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ.

ಧೂಪ ಮಾರಾಟದಿಂದ ಮಕ್ಕಳ ಭವಿಷ್ಯ ಹೊಗೆ!

ಇಲ್ಲಿಗೆ ಭೇಟಿ ನೀಡುತ್ತಿದ್ದಂತೆಯೇ ಅಣ್ಣಾ ಧೂಪ, ಅಕ್ಕ ಧೂಪ, ಧೂಪ ಅಕ್ಕ ಧೂಪ, ಎಂದು ಕೂಗುತ್ತಾ ಭಕ್ತರಿಗೆ ಧೂಪ ತೆಗೆದುಕೊಳ್ಳಿ ಎಂದು ದುಂಬಾಲು ಬೀಳುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ.

ಮಲೈ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ ವರ್ಷದ ಹಲವು ತಿಂಗಳುಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ವೇಳೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಭಕ್ತರು ಹಾಗೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಧೂಪ ಮಾರಾಟದಿಂದ ಮಕ್ಕಳ ಭವಿಷ್ಯ ಹೊಗೆ!

ಅವರನ್ನು ಕಾಡಿ, ಬೇಡಿ ಧೂಪ ಮಾರಾಟ ಮಾಡುವುದು ಮಕ್ಕಳ ಕೆಲಸವಾಗಿದೆ. ಧೂಪ ಮಾರಾಟದಲ್ಲಿ ಹಣ ಬರುವುದರಿಂದ ಶಾಲೆ ಕಡೆಗೆ ಆಸಕ್ತಿ ಕಳೆದುಕೊಂಡಿರುವ ಮಕ್ಕಳು ತಮ್ಮ ಭವಿಷ್ಯಕ್ಕೆ ಹೊಗೆ ಹಾಕಿಸಿಕೊಳ್ಳುತ್ತಿದ್ದಾರೆ.

ಕೆಲವು ಮಕ್ಕಳು ಶಾಲೆಯ ರಜಾ ದಿನಗಳಲ್ಲಿ ಈ ಕೆಲಸ ಮಾಡಿದರೆ, ಮತ್ತೆ ಕೆಲವು ಮಕ್ಕಳು ಶಾಲಾ ದಿನಗಳಲ್ಲಿಯೂ ಶಾಲೆಗೆ ಹೋಗದೆ ಧೂಪ ಮಾರುವುದರಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

ಇನ್ನೂ ಕೆಲವು ಮಕ್ಕಳು ಶಾಲೆ ಬಿಟ್ಟು ಧೂಪ ಮಾರುತ್ತಾ, ಹೋಟೆಲ್‍ಗಳಿಗೆ ಸೌದೆ, ನೀರು ತಂದುಕೊಡುತ್ತಾ ತಟ್ಟೆಗಳನ್ನು ತೊಳೆಯುತ್ತಾ ಕಾಲ ಕಳೆಯುತ್ತಿರುತ್ತಾರೆ. ಧೂಪ ಮಾರುವ ಮಕ್ಕಳು ಪೊನ್ನಾಚಿ, ಮರೂರು, ಅಸ್ತೂರು ದಂಟಳ್ಳಿ ಗ್ರಾಮವಲ್ಲದೆ, ಹನೂರು ಸಮೀಪದ ಮಂಗಲ ಸರ್ಕಾರಿ ಶಾಲೆಯ ಒಂದೆರಡು ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ.

ಧೂಪ ಮಾರಾಟದಿಂದ ಮಕ್ಕಳ ಭವಿಷ್ಯ ಹೊಗೆ!

ಮಕ್ಕಳು ಹಣ ಸಂಪಾದಿಸುತ್ತಾರೆ ಎಂಬ ಕಾರಣಕ್ಕೆ ಮಕ್ಕಳನ್ನು ಪೋಷಕರು ಶಾಲೆ ಬಿಡಿಸಿ ಧೂಪ ಮಾರಾಟಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳಿಗೂ ಒಂದಷ್ಟು ಹಣ ಕೈಗೆ ಬರುವುದರಿಂದ ಓದಬೇಕೆಂದ ಆಸಕ್ತಿಯೂ ಇಲ್ಲದಾಗಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ. ಅಷ್ಟೇ ಅಲ್ಲ ಸರ್ಕಾರ ಕೂಡ ಮಕ್ಕಳು ಧೂಪ ಮಾರುವುದನ್ನು ನಿರ್ಬಂಧಿಸಬೇಕಿದೆ. ಇಲ್ಲದೆ ಹೋದರೆ ಮಕ್ಕಳ ಭವಿಷ್ಯ ಹಾಳಾಗುವುದರಲ್ಲಿ ಎರಡು ಮಾತಿಲ್ಲ.

ಧೂಪ ಮಾರಾಟದಿಂದ ಮಕ್ಕಳ ಭವಿಷ್ಯ ಹೊಗೆ!

ಮರಳಿ ಬಾ ಶಾಲೆಗೆ ಎಂಬ ಕಾರ್ಯಕ್ರಮಕ್ಕೆ ಇಲ್ಲಿ ಕಿಮ್ಮತ್ತೇ ಇಲ್ಲದಾಗಿದೆ. ದಸರಾ ರಜೆಯಿರುವುದರಿಂದ ಈಗಾಗಲೇ ಇರುವ ಮಕ್ಕಳ ಜೊತೆಗೆ ಮತ್ತೊಂದಷ್ಟು ಶಾಲಾ ಮಕ್ಕಳು ಧೂಪದ ವ್ಯಾಪಾರದಲ್ಲಿ ತೊಡಗಿಕೊಂಡು ಅವರು ಮುಂದೆ ಶಾಲೆಗೆ ಹೋಗದೆ ಇದೇ ವ್ಯಾಪಾರವನ್ನು ಮುಂದುವರೆಸಿದರೆ ಮಕ್ಕಳ ಭವಿಷ್ಯದ ಗತಿಯೇನು? ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Childrenes involving in merchandise to frankincence at Malai Mahadeshwara Temple in Hanur, Chamarajanagar district. effect of this they were forgets school and education.
Please Wait while comments are loading...