ಚಾಮರಾಜನಗರದ ರಥೋತ್ಸವದಲ್ಲಿ ನವದಂಪತಿಗಳ ಕಲರವ, ಜಾತ್ರೆ ವಿಶೇಷತೆಗಳು
ಚಾಮರಾಜನಗರ, ಜುಲೈ 20: ಪ್ರತಿ ವರ್ಷದ ಆಷಾಢದಲ್ಲಿ ಚಾಮರಾಜನಗರದಲ್ಲಿ ಅದ್ಧೂರಿಯಾಗಿ ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ನಡೆಯುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಈ ರಥೋತ್ಸವ ಬೇರೆ ಕಡೆ ನಡೆಯುವ ರಥೋತ್ಸವಕ್ಕಿಂತ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಆಷಾಢದ ವೇಳೆಗೆ ಎಲ್ಲ ಕಡೆಗಳಲ್ಲೂ ಜಾತ್ರೆ, ರಥೋತ್ಸವ ಮುಗಿದು ಹೋಗಿ ಬಿಡುತ್ತದೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಆಷಾಢದಲ್ಲಿಯೇ ಚಾಮರಾಜೇಶ್ವರ ರಥೋತ್ಸವ ನಡೆಯುವುದು ವಿಶೇಷವಾಗಿದೆ. ಈ ರಥೋತ್ಸವದ ಮತ್ತೊಂದು ಮೆರಗು ತರುವುದು ನವದಂಪತಿಗಳು.
ನೂತನವಾಗಿ ವಿವಾಹವಾದ ವಧುವರರು ಸೇರಿದಂತೆ ಎಲ್ಲ ದಂಪತಿಗಳು ಚಾಮರಾಜೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡು ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿ ರಥಕ್ಕೆ ಹಣ್ಣು, ದವನ ಎಸೆದರೆ ಇಷ್ಟಾರ್ಥ ಸಿದ್ಧಿಸುವುದಲ್ಲದೆ, ಸಂತಾನವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿಯೇ ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ, ಹೊರರಾಜ್ಯಗಳ ದಂಪತಿಗಳು ರಥೋತ್ಸವಕ್ಕೆ ಆಗಮಿಸಿ ಹರಕೆ ತೀರಿಸುವುದು ವಾಡಿಕೆಯಾಗಿದೆ.

ಇನ್ನು ಈ ರಥೋತ್ಸವ ಆಷಾಢದಲ್ಲಿಯೇ ಏಕೆ ನಡೆಯುತ್ತದೆ?, ಇದರ ಹಿನ್ನಲೆಯೇನು?, ಎಂಬುದನ್ನು ನೋಡುವುದಾದರೆ ನಾವು ಒಂದೆರಡು ಶತಮಾನಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್-3 ಅವರ ಆಡಳಿತ ಅವಧಿಯಲ್ಲಿ ಇಂದಿನ ಚಾಮರಾಜನಗರವನ್ನು ಅರಿಕುಟಾರವೆಂದು ಕರೆಯಲಾಗುತ್ತಿತ್ತು.
ಇವರ ತಂದೆ ಚಾಮರಾಜೇಂದ್ರ ಒಡೆಯರ್ 1774ರಲ್ಲಿ ಇಲ್ಲಿ ಜನಿಸಿದ್ದರಿಂದ. ಇದು ಜನನ ಮಂಟಪ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಆ ಸಮಯದಲ್ಲಿ ಪ್ರಮುಖ ಹಬ್ಬಗಳು ಮತ್ತು ಹೋಳಿ ಆಚರಣೆಗಳು ಈ ಸ್ಥಳದಲ್ಲಿಯೇ ಜರುಗುತ್ತಿದ್ದವಂತೆ. ಆ ನಂತರ ಈ ಸ್ಥಳವು ಚಾಮರಾಜೇಂದ್ರ ಒಡೆಯರ್ ಅವರ ಜನ್ಮಸ್ಥಳವಾದ್ದರಿಂದ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತಂತೆ.
ಆಷಾಢದ ಹುಣ್ಣಿಮೆಯಲ್ಲಿ ನಡೆಯುವ ಜಾತ್ರೆ: ಇಷ್ಟೇ ಅಲ್ಲದೆ 1826ರಲ್ಲಿ ಚಾಮರಾಜೇಂದ್ರ ಒಡೆಯರ್ ಅವರ ಸ್ಮರಣಾರ್ಥವಾಗಿ ಶ್ರೀಶೈಲಾದಿಂದ ಲಿಂಗವೊಂದನ್ನು ತರಿಸಿ, ರಾಜತ್ವ ಮತ್ತು ದೈವತ್ವ ಹೊಂದಿದ ಶ್ರೀ ಚಾಮರಾಜೇಶ್ವರ ಸ್ವಾಮಿ ಮತ್ತು ಶ್ರೀ ಕೆಂಪನಂಜಾಂಬ ದೇಗುಲವನ್ನು ನಿರ್ಮಾಣ ಮಾಡಲಾಯಿತು. ಈಶ್ವರ ದೇವರ ವಿಗ್ರಹವು ಇಲ್ಲಿನ ಪ್ರಮುಖವಾದ ದೇವರ ಮೂರ್ತಿಯಾಗಿದೆ. ಈ ಚಾಮರಾಜೇಶ್ವರ ವಿಗ್ರಹದ ಎಡಭಾಗದಲ್ಲಿ ಶ್ರೀ ಕೆಂಪನಂಜಾಂಬ ಹಾಗೂ ಬಲಭಾಗದಲ್ಲಿ ಶ್ರೀ ಚಾಮುಂಡೇಶ್ವರಿ ಮೂರ್ತಿಗಳನ್ನು ಕಾಣಬಹುದು.
ದೇವಸ್ಥಾನದ ಮುಖ್ಯದ್ವಾರದ ಪೂರ್ವಭಾಗದಲ್ಲಿ ಸುಂದರವಾದ ಗೋಪುರ, ದಕ್ಷಿಣದಲ್ಲಿ ಸುಂದರ ಮೂರ್ತಿ ವಿಗ್ರಹ ಮತ್ತು ಇತರ ಹಲವಾರು ದೇವರುಗಳ ಮೂರ್ತಿಗಳು ಹಾಗೂ ಪಶ್ಚಿಮಕ್ಕೆ ಸಹಸ್ರಲಿಂಗ ನಾಮಸ್ವರಗಳು ಮತ್ತು ಪಂಚವಿಮಶ್ತಿ ಲೀಲಾ ಮೂರ್ತಿ, ಕ್ಷೇತ್ರಪಾಲಕ, ತಾಯಿ ಅನ್ನಪೂರ್ಣೇಶ್ವರಿ ವಿಗ್ರಹಗಳು ಸೇರಿದಂತೆ ಒಟ್ಟು 67 ಸುಂದರವಾದ ಕೆತ್ತನೆಗಳು ಇಲ್ಲಿವೆ.
ಇದರ ಜೊತೆಗೆ ದೇವಾಲಯದಲ್ಲಿ ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯಂದು ಬ್ರಹ್ಮರಥೋತ್ಸವ ನಡೆಸಲು ಶಾಸನ ಹೊರಡಿಸಿ, ಸುತ್ತ ಮುತ್ತಲಿನ ಗ್ರಾಮಗಳು ಜನರು ಆಗಮಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಹೋಗುವಂತೆ ಮಹಾರಾಜರು ಆಜ್ಞೆ ಹೊರಡಿಸುತ್ತಾರೆ. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷವೂ ಆಷಾಢ ಮಾಸದಲ್ಲಿ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವವು ಅದ್ಧೂರಿಯಾಗಿ ನಡೆಯುತ್ತಾ ಬರುತ್ತಿದೆ. ಈ ಬಾರಿ ಜುಲೈ 20(ಶನಿವಾರ) ರಂದು ಚಾಮರಾಜೇಶ್ವರ ಬ್ರಹ್ಮರಥೋತ್ಸವ ಮಧ್ಯಾಹ್ನ 12. 07 ರಿಂದ 12.30 ರ ಅಭಿಜಿತ್ ಲಗ್ನದಲ್ಲಿ ನಡೆಯಲಿದೆ.
ನವದಂಪತಿಗಳ ಪ್ರಾರ್ಥನೆ: ಸಾಮಾನ್ಯವಾಗಿ ಆಷಾಢದಲ್ಲಿ ನೂತನವಾಗಿ ಮದುವೆಯಾದ ನವದಂಪತಿಗಳು ಒಂದೇ ಮನೆಯಲ್ಲಿ ವಾಸ ಮಾಡುವುದಿಲ್ಲ ಹಾಗೂ ಭೇಟಿಯಾಗುವುದಿಲ್ಲ. ಹೀಗಾಗಿ ಆಷಾಢ ಮಾಸದಲ್ಲಿ ನೂತನವಾಗಿ ಮದುವೆಯಾದ ಹೆಣ್ಣುಮಗಳು ತವರಿಗೆ ಬರುವುದು ಸಂಪ್ರದಾಯ. ಆದರೆ ರಥೋತ್ಸವಕ್ಕೆ ನೂತನ ದಂಪತಿ ಒಟ್ಟಾಗಿ ತೆರಳಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಚಾಮರಾಜೇಶ್ವರ ರಥೋತ್ಸವದಲ್ಲಿ ಎಲ್ಲಿ ನೋಡಿದರಲ್ಲಿ ನವ ದಂಪತಿಗಳೇ ಕಾಣ ಸಿಗುತ್ತಾರೆ. ಇದೇ ವೇಳೆ ನವದಂಪತಿಗಳು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಚಾಮರಾಜೇಶ್ವರನ ಮೊರೆಹೋಗುವುದಲ್ಲದೆ ಸಂತಾನಕ್ಕಾಗಿ ಪ್ರಾರ್ಥನೆ ಸಲ್ಲಿಸುವುದು ನಡೆಯುತ್ತದೆ.
ಇನ್ನು ರಥೋತ್ಸವದಲ್ಲಿ ರಥದ ಮೇಲೆ ನವದಂಪತಿಗಳು ಒಟ್ಟಾಗಿ ಹಣ್ಣು-ದವನವನ್ನು ಎಸೆದರೆ, ಅದು ಕೈಲಾಸ ವಾಸನಿಗೆ ತಲುಪುತ್ತದೆ. ಹೀಗಾಗಿ ಆತನ ಆಶೀರ್ವಾದ ನವದಂಪತಿಗಳಿಗೆ ಲಭಿಸುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ. ರಥೋತ್ಸವ ಹೇಗೆ ನಡೆಯುತ್ತದೆ? ಎಂಬುದನ್ನು ನೋಡುವುದಾದರೆ, ನಿಗದಿತ ಮುಹೂರ್ತದಲ್ಲಿ ಪೂಜಾಕೈಂಕರ್ಯಗಳು ಆರಂಭವಾಗುತ್ತವೆ. ಆ ನಂತರ ಸಿಂಗಾರಗೊಂಡ ರಥದ ಬಳಿಗೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಬಳಿಕ ಸಂಪ್ರದಾಯದಂತೆ ಪೂಜಾ ಕಾರ್ಯಗಳನ್ನು ನೆರವೇರಿಸಿ ರಥೋತ್ಸವ ಚಾಲನೆ ನೀಡಲಾಗುತ್ತದೆ.
ಚಾಮರಾಜೇಶ್ವರ ದೇವಾಲಯದಿಂದ ಹೊರಡುವ ರಥವು ರಾಜ ಮಾರ್ಗದಲ್ಲಿ ಸಂಚರಿಸುತ್ತದೆ. ಈ ವೇಳೆ ರಥದ ಸುತ್ತಮುತ್ತ ಹಾಗೂ ಇಕ್ಕೆಲಗಳಲ್ಲಿ ನಿಂತ ದಂಪತಿ ಸಮೇತ ಭಕ್ತರು ಹಣ್ಣು-ದವನ ಎಸೆದು ಚಾಮರಾಜೇಶ್ವರನಿಗೆ ಜೈಕಾರ ಹಾಕಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ರಥವನ್ನು ಸುಂದರವಾಗಿ ಅಲಂಕರಿಸಿ ತಯಾರು ಮಾಡುವ ಬಂಡಿಗಾರರು ಮತ್ತು ರಥಕ್ಕೆ ಯಾವುದೇ ಅಡಚಣೆಯಾಗದಂತೆ ಸಾರಾಗವಾಗಿ ಸಾಗುವಂತೆ ನೋಡಿಕೊಳ್ಳುವ ರಥದ ಚಕ್ರಗಳಿಗೆ ಗೊದ್ದಮ ಕೊಡುವವರ ಕಾರ್ಯವನ್ನು ಶ್ಲಾಘಿಸ ಬೇಕಾಗುತ್ತದೆ.
ಚಾಮರಾಜೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವಕ್ಕೆ ಮುನ್ನ ಹಲವು ಕೈಂಕರ್ಯಗಳು ನಡೆಯುತ್ತಿರುತ್ತವೆ. ಇದರ ನಡುವೆ ರಥವನ್ನು ಅಲಂಕರಿಸುವ ಬಂಡಿಗಾರರು ಶ್ರೀಕೆಂಪನಂಜಾಂಬ ಸಮೇತ ಶ್ರೀಚಾಮರಾಜೇಶ್ವರ ಸ್ವಾಮಿಯವ ಗಿರಿಜಾ ಕಲ್ಯಾಣ ಕಾರ್ಯಕ್ರಮದ ಕೊನೆಯ ದಿನ ರಥಕ್ಕೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ತೇರು ಕಟ್ಟುವ ಕಾರ್ಯವನ್ನು ಆರಂಭಿಸುತ್ತಾರೆ. ನಂತರದ ದಿನಗಳಲ್ಲಿ ಎತ್ತರವಾಗಿ ಕಂಬಗಳಿಂದ ರಥವನ್ನು ನಿರ್ಮಿಸಿ ರಥೋತ್ಸವನ್ನು ಸಿದ್ಧಗೊಳಿಸುತ್ತಾರೆ. ಇದು ಬಂಡಿಗಾರರ ಕೆಲಸವಾದರೆ, ರಥ ಸುಗಮವಾಗಿ ಚಲಿಸುವಂತೆ ನೋಡಿಕೊಳ್ಳುವುದು ಗೊದ್ದಮ ಕೊಡುವವರ ಕೆಲಸವಾಗುತ್ತದೆ.
ಭಕ್ತರೆಲ್ಲರೂ ದೇವರನ್ನು ಸ್ಮರಿಸುತ್ತಾ ರಥವನ್ನು ಎಳೆಯುತ್ತಿದ್ದರೆ, ಚಲಿಸುವ ರಥದ ಚಕ್ರಕ್ಕೆ ಗೊದ್ದಮ ಕೊಡುತ್ತಾ ಅದು ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಇಲ್ಲಿ ಎಚ್ಚರ ತಪ್ಪದಂತೆ ಕೆಲಸ ಮಾಡಬೇಕಾಗುತ್ತದೆ. ಈ ಗೊದ್ದಮ ಕೊಡುವವರು ಕೂಡ ದೇವಸ್ಥಾನದಿಂದ ಕಂಕಣ ಕಟ್ಟಿಸಿಕೊಂಡು ಈ ದೈವಕಾರ್ಯದಲ್ಲಿ ನಿರತರಾಗುತ್ತಾರೆ.
ಇದೆಲ್ಲ ಕಾರ್ಯವನ್ನು ಎಲ್ಲರಿಂದ ಸಾಧ್ಯವಿಲ್ಲ. ಇದನ್ನು ತಲತಲಾಂತರದಿಂದ ಮಾಡಿಕೊಂಡು ಬಂದ ಬಂಡಿಗಾರರಷ್ಟೆ ಮಾಡಲು ಸಾಧ್ಯವಾಗಿದೆ. ಇಂತಹ ನುರಿತ ಬಂಡಿಗಾರರು ಚಾಮರಾಜನಗರದಲ್ಲಿ ಕೆಲವೇ ಕೆಲವರಿದ್ದು ಅವರಿಂದಲೇ ರಥೋತ್ಸವ ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತಿದೆ.












Click it and Unblock the Notifications