ಗೌರಿ-ಗಣೇಶ ಹಬ್ಬ: ಇಷ್ಟಾರ್ಥ ನೆರವೇರಿಸುವ ಕುದೇರು ಕಡಲೆ ಹಿಟ್ಟಿನ ಗೌರಮ್ಮ
ಚಾಮರಾಜನಗರ, ಸೆಪ್ಟೆಂಬರ್ 06: ಗೌರಿ ಗಣೇಶ ಹಬ್ಬದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪಕ್ಕದಲ್ಲಿ ಗೌರಿಯನ್ನಿಟ್ಟು ಸಾಮೂಹಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಗೌರಿಯನ್ನೇ ಕಡಲೆಹಿಟ್ಟಿನಿಂದ ತಯಾರಿಸಿ ಬಳಿಕ ಪ್ರತಿಷ್ಠಾಪಿಸಿ ಊರಿಗೆ ಊರೇ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಹಬ್ಬಾಚರಣೆ ಮಾಡುವ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಕುದೇರುನಲ್ಲಿ ನಡೆಯುತ್ತದೆ. ಈ ರೀತಿಯ ಆಚರಣೆ ಬೇರೆಲ್ಲೂ ಕಾಣದಿರುವುದೇ ಇಲ್ಲಿನ ವಿಶೇಷತೆಯಾಗಿದೆ.
ಹಾಗಾದರೆ ಕುದೇರುವಿನ ಗೌರಿಯ ವಿಶೇಷತೆ ಏನು? ಇಲ್ಲಿಯ ಆಚರಣೆ ಹೇಗೆ ಸಾಗುತ್ತದೆ ಎಂಬುದನ್ನು ನೋಡಿದ್ದೇ ಆದರೆ ಹತ್ತು ಹಲವು ವಿಶೇಷತೆಗಳು ಇಲ್ಲಿ ಕಾಣ ಸಿಗುತ್ತದೆ. ಮೇಲ್ನೋಟಕ್ಕೆ ಕುದೇರುನಲ್ಲಿ ಕಡಲೆಹಿಟ್ಟಿನಿಂದ ಗೌರಿಯನ್ನು ತಯಾರಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರತಿಷ್ಠಾಪಿಸಿ ಗ್ರಾಮಸ್ಥೆರೆಲ್ಲರೂ ಸಾಮೂಹಿಕವಾಗಿ ಪೂಜೆ ಸಲ್ಲಿಸುವುದು ಕಂಡು ಬರುತ್ತದೆ. ಜೊತೆಗೆ ಇಡೀ ಊರಿನ ಹೆಂಗಳೆಯರೆಲ್ಲರೂ ಗೌರಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಎಲ್ಲ ವರ್ಗದ ಜನತೆ ಯಾವುದೇ ಜಾತಿ ಭೇದ ಭಾವವಿಲ್ಲದೇ ಹಬ್ಬವನ್ನು ಆಚರಿಸುತ್ತಾರೆ.

ಹಾಗೆನೋಡಿದರೆ ಹೆಣ್ಮಕ್ಕಳಿಗೆ ಗೌರಿ ಹಬ್ಬವೆಂದರೆ ಎಲ್ಲಿಲ್ಲದ ಸಡಗರ- ಸಂಭ್ರಮ. ಜೊತೆಗೆ ಹಬ್ಬವನ್ನು ಮನೆ, ಮನೆಗಳಲ್ಲಿ ಆಚರಿಸುವುದು ರೂಢಿ. ಆದರೆ ಮನೆಯಲ್ಲಿ ಆಚರಿಸದೆ ಇಡೀ ಊರಿಗೆ ಊರೇ ಒಂದೆಡೆ ಕಲೆತು ಹಬ್ಬವನ್ನು ಆಚರಿಸುವುದು ಕುದೇರಿನಲ್ಲಿ ತಲತಲಾಂತರದಿಂದ ನಡೆಯುತ್ತಾ ಬಂದಿದೆ. ಇಲ್ಲಿನ ಗೌರಮ್ಮ ಹೆಣ್ಮಕ್ಕಳ ಇಷ್ಟಾರ್ಥವನ್ನು ನೆರವೇರಿಸುವ ತಾಯಿಯಾಗಿದ್ದು, ಆಕೆಯಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳನ್ನು ಅದರಲ್ಲೂ ಕಂಕಣ ಮತ್ತು ಸಂತಾನ ಭಾಗ್ಯವನ್ನು ನೆರವೇರಿಸುತ್ತಾಳೆ ಎಂಬುದು ನಂಬಿಕೆಯಾಗಿದೆ.
ಹಬ್ಬದ ಆಚರಣೆ ಹೇಗೆ ನಡೆಯಲಿದೆ?
ಕುದೇರು ಗ್ರಾಮದಲ್ಲಿ ಗೌರಿ ದೇಗುಲವಿರುವುದರಿಂದ ಗ್ರಾಮಸ್ಥರು ಗೌರಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸದೆ, ಎಲ್ಲರೂ ಒಂದೆಡೆ ಸೇರಿ ಹಬ್ಬವನ್ನು ಆಚರಿಸುತ್ತಾರೆ. ಇದು ಊರಿನಲ್ಲಿ ಸಾಮರಸ್ಯವನ್ನು ಬೆಸೆಯಲು ಕಾರಣವಾಗಿದೆ. ಇನ್ನು ಹಬ್ಬದ ದಿನ ಆಚರಣೆ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿದ್ದೇ ಆದರೆ ಗ್ರಾಮದ ದೊಡ್ಡಕೆರೆ ಯಮುನಾ ತಡಿಯಲ್ಲಿ ಹಬ್ಬಕ್ಕೂ ಮೊದಲು ಮರಳಿನ ಗೌರಿಯನ್ನು ಸಿದ್ದಗೊಳಿಸಿ ನಂತರ ಹಬ್ಬದ ದಿನ ವಿಶೇಷ ಪೂಜೆಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರಿಯನ್ನ ಪ್ರತಿಷ್ಠಾಪಿಸಲಾಗುತ್ತದೆ.
ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನ ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ ಆಭರಣ ಹಾಕಲಾಗುತ್ತದೆ. ದೇವಾಲಯದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿದಾಗಿನಿಂದ ಹನ್ನೆರಡು ದಿನಗಳ ಕಾಲ ಪ್ರತಿನಿತ್ಯ ಪೂಜೆ ನಡೆಯುತ್ತದೆ. ಆರಂಭ ದಿನದಲ್ಲಿ ನವದಂಪತಿಗಳು ಬಾಗಿನ ಅರ್ಪಿಸುತ್ತಾರೆ. ಆ ನಂತರ ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಚಿನ್ನ, ಬೆಳ್ಳಿಯ ತೊಟ್ಟಿಲು ಸಮರ್ಪಣೆ ಮಡುತ್ತಾರೆ. ಯುವತಿಯರು ಕಂಕಣ ಭಾಗ್ಯಕ್ಕಾಗಿ ಮಾಂಗಲ್ಯವನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ.

ಕಡಲೆ ಹಿಟ್ಟಿನ ಗೌರಮ್ಮ ಈಗ ಸ್ವರ್ಣಗೌರಿ
ಅಷ್ಟೇ ಅಲ್ಲದೆ ದೀಪೋತ್ಸವ, ದೀಪಾರಾಧನೆ ಸೇರಿದಂತೆ ಇಷ್ಟಾರ್ಥ ಸಿದ್ದಿಗಾಗಿ ನಾನಾ ಹರಕೆಗಳನ್ನು ಹರಿಸಿಕೊಂಡ ಭಕ್ತರು ಸಲ್ಲಿಸಿ ಗೌರಿಯನ್ನು ಒಳಿತು ಮಾಡಲೆಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಕುದೇರು ಗ್ರಾಮದಲ್ಲಿರುವ ಗೌರಿ ದೇವಾಲಯದ ಬಗ್ಗೆ ಹೇಳುವುದಾದರೆ ಈ ದೇವಾಲಯವನ್ನು 1912 ರಲ್ಲಿ ನಿರ್ಮಿಸಲಾಯಿತು ಎನ್ನಲಾಗಿದೆ. ಮೊದಲಿಗೆ ಗೌರಿಗೆ ಕಡಲೆ ಹಿಟ್ಟಿನ ಗೌರಮ್ಮ ಎನ್ನುತ್ತಿದ್ದ ಜನತೆ ತದ ನಂತರ ಊರ ಹಬ್ಬವಾಗಿ ಆಚರಿಸಲು ವಿಗ್ರಹಕ್ಕೆ ಚಿನ್ನದ ಕವಚ, ಆಭರಣ ತೊಡಿಸಿದರು.
ಅಂದಿನಿಂದ ಇದು ಸ್ವರ್ಣ ಗೌರಿ ಎಂದೇ ಹೆಸರುವಾಸಿಯಾಗಿದೆ. ಇತರೆ ದಿನಗಳಲ್ಲಿ ಇಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತವೆಯಾದರೂ, ಗೌರಿ ಹಬ್ಬದಂದು ವಿಶೇಷ ಪೂಜೆಗಳು ನಡೆಯುತ್ತವೆ. ಅಂದು ಗೌರಿಯ ದರ್ಶನ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ಪ್ರತೀತಿ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ, ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಜತೆಗೆ ಇಡೀ ಊರೇ ಗೌರಿಯ ಸ್ಮರಣೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ.












Click it and Unblock the Notifications